ಸಂಪುಟದಿಂದ ಅಜಯ್ ಮಿಶ್ರಾರನ್ನು ಕೈಬಿಡುವಂತೆ ರಾಷ್ಟ್ರಪತಿಗೆ ಕಾಂಗ್ರೆಸ್ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.13- ರಾಹುಲ್‍ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್‍ರನ್ನು ಭೇಟಿ ಮಾಡಿ ಕೇಂದ್ರ ಸಂಪುಟದಲ್ಲಿ ಗೃಹ ಖಾತೆ ರಾಜ್ಯ ಸಚಿವರಾಗಿರುವ ಅಜಯ್ ಮಿಶ್ರಾರನ್ನು ವಜಾಗೊಳಿಸುವಂತೆ ಒತ್ತಾಯಿಸಿದೆ.

ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿಸಿ ನಾಲ್ವರು ರೈತರನ್ನು ಹತ್ಯೆ ಮಾಡಲಾಗಿತ್ತು. ಬಳಿಕ ನಡೆದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದರು. ಈ ಘಟನೆಯಲ್ಲಿ ಅಜಯ್ ಮಿಶ್ರಾರ ಪುತ್ರ ಆಶಿಸ್ ಮಿಶ್ರಾ ಆರೋಪಿಯಾಗಿದ್ದು, ಆತನ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಘಟನೆಗೂ ಮುನ್ನಾ ಅಜಯ್ ಮಿಶ್ರಾ ಪ್ರಚೋದನಕಾರಿ ಭಾಷಣ ಮಾಡಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಅಜಯ್ ಮಿಶ್ರಾರನ್ನು ಸಂಪುಟದಿಂದ ಕೈ ಬಿಡುವಂತೆ ಕಾಂಗ್ರೆಸ್ ನಿಯೋಗ ರಾಷ್ಟ್ರಪತಿ ಅವರಿಗೆ ಮನವಿ ಮಾಡಿದೆ. ಲಖಿಂಪುರ ಖೇರಿ ಘಟನೆ ಕುರಿತಂತೆ ಕಾಂಗ್ರೆಸ್ ಈಗಾಗಲೇ ದೇಶಾದ್ಯಂತ ಪ್ರತಿಭಟನೆ ನಡೆಸಿತ್ತು.

Facebook Comments