ನೀರು ಪಾಲಾದ ಈರುಳ್ಳಿ ಬೆಳೆ : ರೈತ ಕಂಗಾಲು

ಈ ಸುದ್ದಿಯನ್ನು ಶೇರ್ ಮಾಡಿ

ಅಮೀನಗಡ, ಅ.19- ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೆ ಏರುತ್ತಿದೆ. ಇತ್ತ ರೈತ ಬೆಳೆದ ಈರುಳ್ಳಿ ನೀರು ಪಾಲಾಗಿದೆ. ಈ ವರ್ಷ ಈರುಳ್ಳಿ ಬೆಲೆ ಚೆನ್ನಾಗಿದ್ದು ಇನ್ನೆನೂ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಬೇಕು ಎನ್ನುವಷ್ಟರಲ್ಲಿ ವರ್ಷಧಾರೆಯಿಂದ ಕಟಾವಿಗೆ ಬಂದಿದ್ದ ಈರುಳ್ಳಿ ಮಳೆಯಲ್ಲಿ ನೀರು ಪಾಲಾಗಿದೆ. ಕೊರೊನಾ ಮಹಾಮಾರಿಯಿಂದ ನಲುಗಿ ಹೋಗಿರುವ ಜನ ಜೀವನದ ಮಧ್ಯೆ ಈ ಮಳೆ ರೈತರ ಜೀವನವನ್ನು ಬೀದಿಗೆಳೆದಿದೆ.

ಇತ್ತ ಜನ ಸಾಮಾನ್ಯ ಜನರು ಈರುಳ್ಳಿ ಕೊಂಡುಕೊಳ್ಳಲು ಹೋದಾಗ ಉಸಿರು ಬಿಗಿಹಿಡಿಯತ್ತಿದ್ದಾರೆ, ಮತ್ತೊಂದೆಡೆ ಈರುಳ್ಳಿ ಬೆಳೆದು ಖುಷಿ ಯಲ್ಲಿದ್ದ ರೈತ ಅತಿವೃಷ್ಠಿಯಿಂದ ಕಣ್ಣೀರ ಧಾರೆಯಲ್ಲಿ ನಲುಗಿ ಹೋಗಿದ್ದಾರೆ. ರೈತ ಬೆಳೆದ ಈರುಳ್ಳಿಗೆ ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದು ಅದೇ ಬೆಲೆಯ ಪ್ರಕಾರ ಸರಕಾರವು ಪರಿಹಾರ ಧನ ನೀಡಬೇಕು.

ಅಂದಾಗ ಮಾತ್ರ ರೈತರಿಗೆ ಸೂಕ್ತ ನ್ಯಾಯ ದೊರಕುತ್ತದೆ. ಹಾಗೂ ಅಕ್ರಮವಾಗಿ ಈರುಳ್ಳಿಯನ್ನು ದಾಸ್ತಾನು ಮಾಡಿ ಕೊಂಡಿರುವವರಿಂದ ಈರುಳ್ಳಿ ಯನ್ನು ಸರಕಾರ ವಶಪಡಿಸಿಕೊಂಡಾಗ ಮಾತ್ರ ಜನಸಾಮಾನ್ಯರು ಈರುಳ್ಳಿ ಕೊಂಡು ಕೊಳ್ಳಲು ಅನುಕೂಲವಾಗುತ್ತದೆ. ಅತಿವೃಷ್ಟಿಯಿಂದ ಬೆಳೆಗಳನ್ನು ಕಳೆದುಕೊಂಡಿರುವ ಅನೇಕ ರೈತರ ಜೀವನ ಬೀದಿ ಪಾಲಾಗಿದೆ. ಅಂತಹ ರೈತರಿಗೆ ಸೂಕ್ತ ಸೌಕರ್ಯ ಕಲ್ಪಿಸಿ ಕೊಡುವುದು ಜಿಲ್ಲಾಡಳಿತದ ಜವಾಬ್ದಾರಿ ಯಾಗಿದೆ.

ಈ ಎಲ್ಲ ವ್ಯವಸ್ಥೆ ಯನ್ನು ರೈತರಿಗೆ ಒದಗಿಸಿದಾಗ ಮಾತ್ರ ರೈತರು ಚೇತರಿಸಿಕೊಳ್ಳಲು ಸಾಧ್ಯ. ಫಸಲಿಗೆ ಬಂದ ಈರುಳ್ಳಿ ಬೆಳೆಯನ್ನು ಇನ್ನೇನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಬೇಕು ಎನ್ನುತ್ತಿದ್ದ ರೈತರಿಗೆ ಮಳೆ ಆಘಾತ ನೀಡಿದೆ. ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಈರುಳ್ಳಿ ಬೆಳೆಗಳು ಕೊಳೆಯಲಾರಂಭಿಸಿದೆ. ಸಾಲ ಸೋಲ ಮಾಡಿ ಈರುಳ್ಳಿ ಬೆಳೆದಿದ್ದ ಬೆಳಗಾರರಿಗೆ ಈ ಬಾರಿ ಮಳೆ ನಷ್ಟ ಉಂಟು ಮಾಡಿದೆ. ಕಳೆದ ಕೆಳೆದಿನಗಳಿಂದ ವರುಣ ಅಬ್ಬರಿಸುತ್ತಿದ್ದು, ಹೊಲಗಳಲ್ಲಿ ನೀರು ನಿಂತಿದೆ.

ಇದರಿಂದಾಗಿ ಈರುಳ್ಳಿ ಗಡ್ಡೆಗಳು ಸಂಪೂರ್ಣವಾಗಿ ಹಾಳಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ. ಈ ಹಿನ್ನಲೆ ಸರ್ಕಾರ ಈ ಕೂಡಲೇ ರೈತರ ನೆರವಿಗೆ ಆಗಮಿಸಬೇಕು ಎಂದು ಇಲ್ಲಿನ ರೈತರು ಮನವಿ ಮಾಡಿದ್ದಾರೆ.

ಕೃಷಿ ಬೆಳೆ ಮಳೆಹಾನಿಗೆ ಒಳಗಾಗಿದೆ. ಮೆಕ್ಕೆಜೋಳ, ತೊಗರಿ, ಸೂರ್ಯಕಾಂತಿ, ಸಜ್ಜೆ,ಹತ್ತಿ,ಕಬ್ಬು ಬೆಳೆ ಜಲಾವೃತವಾಗಿದೆ. ಮಳೆಯಿಂದ ಹಿಂಗಾರು ಬಿತ್ತನೆ ವಿಳಂಬವಾಗಲಿದ್ದು, ಇದರಿಂದ ರೈತರಿಗೆ ಮತ್ತೊಂದು ಹೊಡೆತವಾಗಲಿದೆ.

ತಡವಾಗಿ ಬಿತ್ತನೆ ಆಗುವುದರಿಂದ ಇಳುವರಿ ಮೇಲೆ ಪರಿಣಾಮ ಬೀರಲಿದೆ. ಇನ್ನು ಕಳೆದ ವಾರದಿಂದ ಜಿಲ್ಲೆಯಲ್ಲಿ ಬಿದ್ದ ಮಳೆಗೆ ತೋಟಗಾರಿಕೆ ಬೆಳೆ ಅಂದಾಜು 1700ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದ್ದು, ಅದರಲ್ಲಿ ಈರುಳ್ಳಿ ಬೆಳೆ ಆಗಸ್ಟ್ ನಿಂದ ಈವರೆಗೆ 5600 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿ, ಈರುಳ್ಳಿ ಬೆಳೆಗಾರರ ಕಣ್ಣಿನಲ್ಲಿ ನೀರು ತರಿಸಿದೆ.

Facebook Comments