ಮದುವೆ ಸಮಾರಂಭದಲ್ಲಿ ಈರುಳ್ಳಿ-ಬೆಳ್ಳುಳ್ಳಿ ಹಾರ ಬದಲಿಸಿಕೊಂಡ ವಧು-ವರರು..!

ಈ ಸುದ್ದಿಯನ್ನು ಶೇರ್ ಮಾಡಿ

ವಾರಣಾಸಿ, ಡಿ.14- ಅಗತ್ಯ ದಿನಬಳಕೆಯಲ್ಲಿ ಪ್ರಮುಖವಾದ ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಲೆ ಗಗನಕ್ಕೇರಿರುವುದನ್ನು ಖಂಡಿಸಿ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿರುವಾಗಲೇ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನವ ವಧು-ವರರು ಇವುಗಳಿಂದ ತಯಾರಿಸಿದ ಹಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ವಿಶೇಷ ಗಮನ ಸೆಳೆದಿದ್ದಾರೆ.

ಮದುವೆ ಸಮಾರಂಭದಲ್ಲಿ ವಧು ಮತ್ತು ವರ ಈರುಳ್ಳಿ ಮತ್ತು ಬೆಳ್ಳುಳ್ಳಿಯ ವಿಶೇಷ ಹಾರವನ್ನು ಪರಸ್ಪರ ಬದಲಾಯಿಸಿಕೊಂಡು ಬೆಲೆ ಏರಿಕೆ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ದಾಖಲಿಸಿದರು. ವಾರಣಾಸಿಯಲ್ಲಿ ನಡೆದ ಈ ಮದುವೆ ಇದೇ ಕಾರಣಕ್ಕಾಗಿ ವಿಶೇಷ ಗಮನ ಸೆಳೆದಿದೆ.

ಈ ವಿವಾಹ ಮಹೋತ್ಸವದಲ್ಲಿ ಭಾಗವಹಿಸಿದ್ದ ಸಮಾಜವಾದಿ ಪಕ್ಷದ ಮುಖಂಡರು ವಧು-ವರರು ಮತ್ತು ಅವರ ಕುಟುಂಬ ವರ್ಗದವರ ಈ ವಿಭಿನ್ನ ಸಂಪ್ರದಾಯವನ್ನು ಸ್ವಾಗತಿಸಿದ್ದಾರೆ. ಬೆಲೆ ಏರಿಕೆಯನ್ನು ಈ ನವ ದಂಪತಿ ವಿನೂತನ ರೀತಿಯಲ್ಲಿ ಖಂಡಿಸಿದ್ದಾರೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಲೆ ಏರಿಕೆ ಚಿನ್ನ-ಬೆಳ್ಳಿಯಷ್ಟೇ ದುಬಾರಿಯಾಗಿದೆ ಎಂಬುದನ್ನು ಈ ವಧು-ವರರು ಸಾಂಕೇತಿಕವಾಗಿ ತೋರಿಸಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖಂಡರು ಹೇಳಿದ್ದಾರೆ.

ಬಾಲಿವುಡ್ ಚಿತ್ರನಟ ಸೂಪರ್ ಸ್ಟಾರ್ ಅಕ್ಷಯ್‍ಕುಮಾರ್ ತಮ್ಮ ಪತ್ನಿ ಮತ್ತು ನಿರ್ಮಾಪಕಿ ಟ್ವಿಂಕಲ್ ಖನ್ನಾ ಅವರಿಗೆ ಈರುಳ್ಳಿ ಆಭರಣಗಳನ್ನು ಮೊನ್ನೆಯಷ್ಟೆ ಉಡುಗೊರೆಯಾಗಿ ನೀಡಿ ವಿಶೇಷ ಗಮನ ಸೆಳೆದಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಳವನ್ನು ವಿಭಿನ್ನ ರೀತಿಯಲ್ಲಿ ಟೀಕಿಸಲಾಗುತ್ತಿದ್ದು, ಈ ಸಾಂಬಾರು ಪದಾರ್ಥಗಳನ್ನು ಕಂತು ಸಾಲ (ಇಎಂಐ)ಗಳಲ್ಲಿ ನೀಡುವುದಾಗಿ ಲೇವಡಿ ಮಾಡುವ ಪೋಸ್ಟ್‍ಗಳು ಹರಿದಾಡುತ್ತಿವೆ.

Facebook Comments