ಈರುಳ್ಳಿ ತುಂಬಿದ್ದ ಲಾರಿ ದರೋಡೆಗೆ ಮಾಸ್ಟರ್ ಪ್ಲಾನ್ ಮಾಡಿ ಸಿಕ್ಕಿ ಬಿದ್ದ ಚೋರರು..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಡಿ.8- ಚಿನ್ನ, ಬೆಳ್ಳಿ, ದುಡ್ಡು, ವಾಹನ, ಜಾನುವಾರುಗಳನ್ನು ದರೋಡೆ ಮಾಡುವ ಸಾಲಿಗೆ ಇದೀಗ ಚಿನ್ನದ ಬೆಲೆ ಬಂದಿರುವ ಈರುಳ್ಳಿಯೂ ಸೇರಿಕೊಂಡಿದೆ.ಈರುಳ್ಳಿಯನ್ನು ದರೋಡೆ ಮಾಡಿರುವ ಪ್ರಕರಣ ಈಗ ತುಮಕೂರು ಜಿಲ್ಲೆಯಲ್ಲಿ ನಡೆದಿದ್ದು, ಅಚ್ಚರಿ ಪಡುವ ಸರದಿ ನಮ್ಮದು. ಶಿರಾ ತಾಲೂಕಿನ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈರುಳ್ಳಿಯನ್ನು ದರೋಡೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರು ದಾಖಲಾಗಿ ತನಿಖೆ ಕೈಗೊಂಡಾಗ ವಾಹನ ಸೇರಿದಂತೆ ಈರುಳ್ಳಿ ಸಮೇತ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರು ಹಿರಿಯೂರಿನ ಶೇಖ್ ಅಲಿಖಾನ್ ಹಾಗೂ ಇವರ ಮಕ್ಕಳಾದ ಬುಡೇನ್ ಸಾಬ್, ದಾದಾ ಫೀರ್ ಹಾಗೂ ಲಾರಿಯ ಚಾಲಕ ಚೇತನ್ ಎಂದು ಗುರುತಿಸಲಾಗಿದೆ.ಪ್ರಮುಖ ಆರೋಪಿ ಸಂತೋಷ್‍ಕುಮಾರ್ ತಲೆ ಮರೆಸಿಕೊಂಡಿದ್ದು, ಈತನ ಬಂಧನಕ್ಕೆ ಬಲೆ ಬೀಸಲಾಗಿದೆ. ವಿವರ: ಈರುಳ್ಳಿ ಮಾಲೀಕರಾದ ಹಿರಿಯೂರಿನ ಆನಂದ್‍ಕುಮಾರ್ ಎಂಬುವವರು ತಾವರೆಕೆರೆ ಪೊಲಿಸ್ ಠಾಣೆಗೆ ನೀಡಿದ ದೂರಿನ ಅನ್ವಯ ಪೊಲಿಸರು ತನಿಖೆಯನ್ನು ಕೈಗೊಂಡಿದ್ದರು.

ಹಿರಿಯೂರಿನಿಂದ ಹೊರಟ ಲಾರಿ ಅಪಘಾತವಾಗಿದೆ. ಈ ಸಂದರ್ಭದಲ್ಲಿ ಜನರು ಈರುಳ್ಳಿ ಚೀಲಗಳನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ನಂಬಿಸಿ ಈರುಳ್ಳಿಯ ಮಾಲೀಕನಿಗೆ ವಂಚಿಸಲು ಹೋಗಿ ಸಿಕ್ಕಿ ಬಿದ್ದ ವಿಚಿತ್ರ ಪ್ರಕರಣ ಇದು. ಆನಂದ್‍ಕುಮಾರ್ 173 ಚೀಲ ಅಂದರೆ 10 ಟನ್ ಈರುಳ್ಳಿಯನ್ನು ಚಳ್ಳಕೆರೆಯ ಬಿಕೆ ಟ್ರಾನ್ಸ್‍ ಪೋರ್ಟ್ ಕಂಪೆನಿಯ ಕ್ಯಾಂಟರ್‍ನಲ್ಲಿ ಲೋಡ್ ಮಾಡಿ ಚೆನ್ನೈಗೆ ಕಳುಹಿಸಿದಾಗ ಲಾರಿಯ ಮಾಲೀಕ ಸಂತೋಷ್ ಕುಮಾರ್ ಹಾಗೂ ಚಾಲಕ ಚೇತನ್ ತೆಗೆದುಕೊಂಡು ಹೋಗಿದ್ದರು.

ಅಂದು ರಾತ್ರಿ 12 ಗಂಟೆಯ ಸಂದರ್ಭದಲ್ಲಿ ಎನ್.ಎಚ್.48ರ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಯರಗುಂಟೇಶ್ವರ ಗ್ರಾಮದ ಬಳಿ ಈರುಳ್ಳಿ ಲಾರಿ ಅಪಘಾತವಾಗಿದೆ ಎಂದು ಪೊಲಿಸರಿಗೆ ಮಾಹಿತಿ ನೀಡಿ ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಸುದ್ದಿ ತಿಳಿದ ಕೂಡಲೇ ತಾವರೆಕೆರೆ ಪೊಲೀಸರು ಅಪಘಾತವಾಗಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅಲ್ಲಿ ಈರುಳ್ಳಿ ಇರುವ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ.

ಅಷ್ಟರಲ್ಲಿ ಲಾರಿಯ ಚಾಲಕ ಈರುಳ್ಳಿಯು ಮಾಲೀಕ ಆನಂದ ಕುಮಾರ್‍ಗೆ ಅಪಘಾತವಾದ ಸುದ್ದಿ ತಿಳಿಸಿ ಅದರಲ್ಲಿದ್ದ ಈರುಳ್ಳಿಯನ್ನು ಜನ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದರು. ಈ ಬಗ್ಗೆ ತಾವರೆಕೆರೆ ಪೊಲೀಸರಿಗೆ ಈರುಳ್ಳಿ ಮಾಲೀಕ ದೂರು ನೀಡಿದ್ದರು. ಹಾಗಾಗಿ ಪೊಲೀಸರು ಕಾರ್ಯೋನ್ಮುಖರಾಗಿ ವಿಶೇಷ ತಂಡ ರಚಿಸಿ ಚಾಲಕ ಚೇತನನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಈರುಳ್ಳಿ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.

ಲಾರಿಯ ಮಾಲೀಕ ಸಂತೋಷ್ ಕುಮಾರ್ ಈರುಳ್ಳಿ ಕೊಂಡೊಯ್ಯುವಾಗ ಮೊದಲಿಗೆ ಹಿರಿಯೂರು ಬಳಿಯ ಗೊರಲಡುಕು ಎಂಬ ಗ್ರಾಮದಲ್ಲಿ 92 ಚೀಲಗಳನ್ನು ಇಳಿಸಿ ಉಳಿದ 81 ಚೀಲಗಳನ್ನು ಬೇರೊಂದು ಲಾರಿಗೆ ತುಂಬಿ ಬೆಂಗಳೂರಿನ ಯಶವಂತಪುರದ ಕೃಷಿ ಮಾರುಕಟ್ಟೆಗೆ ರವಾನಿಸುತ್ತಿದ್ದರು.

ಈ ಮಾಹಿತಿ ತಿಳಿದ ಪೊಲೀಸರು ಯಶವಂತಪುರ ಮಾರುಕಟ್ಟೆಗೆ ಹೋಗುತ್ತಿದ್ದ ಲಾರಿಯನ್ನು ಈರುಳ್ಳಿ ಸಮೇತ ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣವನ್ನು ಬೇಧಿಸಿದ ಡಿವೈಎಸ್ಪಿ ಕುಮಾರಪ್ಪ ಸೇರಿದಂತೆ ಎಲ್ಲಾ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೋನಾ ವಂಶಿಕೃಷ್ಣ ಅಭಿನಂದಿಸಿದ್ದಾರೆ.

Facebook Comments

Sri Raghav

Admin