ಕೊರೋನಾ ಕೇಡುಗಾಲದಲ್ಲಿ ಜನಸಾಮಾನ್ಯರಿಗೆ ಕಾದಿದೆ ಈರುಳ್ಳಿ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.24- ಈರುಳ್ಳಿ ಬೆಲೆ ಮತ್ತೆ ದುಪ್ಪಾಟ್ಟಾಗುವ ಸಾಧ್ಯತೆ ಇದೆ. ಸದ್ಯ ಕೆಜಿಗೆ 10ರಿಂದ 15 ರೂ.ಗೆ ಸಿಗುತ್ತಿದ್ದ ಈರುಳ್ಳಿ ಇದೀಗ 30ರಿಂದ 50ರೂ.ಗೆ ಏರಿಕೆಯಾಗುವ ಲಕ್ಷಣಗಳು ಕಂಡು ಬರುತ್ತಿವೆ.

ಗ್ರಾಹಕರ ಕಣ್ಣಲ್ಲಿ ನೀರು ತರಿಸುವ ಜತೆಗೆ ಈರುಳ್ಳಿ ಬೆಳೆದ ಕೃಷಿಕನ ಬಾಳಲ್ಲೂ ಕಣ್ಣೀರಿಗೆ ಕಾರಣವಾಗುತ್ತಿದೆ. ಅತಿ ಹೆಚ್ಚು ಈರುಳ್ಳಿ ಬೆಳೆಯುವ ಗದಗ, ಬಾಗಲಕೋಟೆ, ಧಾರವಾಡ, ಬೆಳಗಾವಿಯಲ್ಲಿ ಪ್ರವಾಹ ಬಂದು ಈರುಳ್ಳಿ ಬೆಳೆ ನಾಶವಾಗಿದೆ. ಮಳೆ ಹಾಗೂ ರೋಗ ಬಾಧೆಯಿಂದ ಈರುಳ್ಳಿ ಪೂರೈಕೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಹೆಚ್ಚಾಗಲಿದ್ದು, ಸಹಜವಾಗಿಯೇ ಬೆಲೆ ಏರಿಕೆಯಾಗಲಿದೆ.

ಲಾಕ್‍ಡೌನ್‍ನಿಂದ ಜರ್ಜರಿತವಾಗಿದ್ದ ಜನ ಹಳ್ಳಿಯತ್ತ ಮುಖ ಮಾಡಿ ತಮಗಿದ್ದ ಅಲ್ಪಸ್ವಲ್ಪ ಜಮೀನಿನಲ್ಲಿ ಈರುಳ್ಳಿ ಬೆಳೆದು ಬೆಳೆ ನಿರೀಕ್ಷೆಯಲ್ಲಿದ್ದರು. ಆದರೆ, ಅಕಾಲಿಕ ಮಳೆ ಮತ್ತು ಪ್ರವಾಹದಿಂದ ಈ ಜಿಲ್ಲೆಗಳಲ್ಲಿನ ಸುಮಾರು ಒಂದು ಲಕ್ಷ ಹೆಕ್ಟರ್‍ನ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ರೋಗಕ್ಕೆ ತುತ್ತಾಗಿದೆ.

ಬೆಳೆ ಬೆಳೆದ ರೈತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ಇತ್ತ ಗ್ರಾಹಕರಿಗೂ ಕೂಡ ಬೆಲೆ ಹೆಚ್ಚಾಗಿ ಗಾಯದ ಮೇಲೆ ಬರೆ ಎಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ದಿನಬಳಕೆಯ ಈರುಳ್ಳಿಗೆ 100ರೂ.ಗೆ 7ರಿಂದ 8 ಕೆಜಿ ಸಿಗುತ್ತಿತ್ತು. ಈಗ ಪೂರೈಕೆಯಲ್ಲಿ ಇಳಿಕೆಯಾಗಿರುವುದರಿಂದ ಬೆಲೆ ಏರಿಕೆಯಾಗಿ 100ರೂ.ಗೆ 4ರಿಂದ 5ಕೆಜಿಗೆ ಬಂದಿದೆ. ಬೆಳೆ ಹಾಳಾಗಿ ಪೂರೈಕೆಯಲ್ಲಿ ವ್ಯತ್ಯಯವಾದರೆ 100ರೂ.ಗೆ 2 ಅಥವಾ 3 ಕೆಜಿಯಾದರೂ ಆಶ್ಚರ್ಯವಿಲ್ಲ.

ಲಾಕ್‍ಡೌನ್ ಆಗುವ ಮುನ್ನ ಈರುಳ್ಳಿ ಬೆಲೆ ಗಗನಕ್ಕೇರಿತ್ತು. ಲಾಕ್‍ಡೌನ್ ಸಂದರ್ಭದಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಿ ಹಲವೆಡೆಯಿಂದ ಈರುಳ್ಳಿ ರಫ್ತು ಮಾಡಿಕೊಂಡು ಗ್ರಾಹಕರಿಗೆ ಕಡಿಮೆ ದರದಲ್ಲಿ ಸರಬರಾಜು ಮಾಡಿತ್ತು.

ಈಗ ಈರುಳ್ಳಿ ಬೆಳೆಯುವ ಮಹಾರಾಷ್ಟ್ರ, ಗುಜರಾತ್, ಮಧ್ಯ ಪ್ರದೇಶ ಭಾಗದಲ್ಲೂ ಕೂಡ ವಿಪರೀತ ಮಳೆಯಾಗಿ ಅಲ್ಲೂ ಕೂಡ ಬೆಳೆ ಹಾಳಾಗಿದೆ. ಪ್ರಸ್ತುತ ಇರುವ ಹಳೆಯ ದಾಸ್ತಾನು ಪೂರೈಕೆಯಾಗುತ್ತಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಂಗ್ರಹಿಸಿಟ್ಟಿರುವ ಈರುಳ್ಳಿ ಕೊಳೆಯ ತೊಡಗಿದೆ.

ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಬಳ್ಳಾರಿ ಸೇರಿದಂತೆ ಮತ್ತಿತರ ಭಾಗಗಳಲ್ಲಿ ಬೆಳೆದಿರುವ ಈರುಳ್ಳಿ ನವೆಂಬರ್ ವೇಳೆಗೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಪೂರೈಕೆಯಲ್ಲಿ ವ್ಯತ್ಯಾಸವಾದರೆ ಬೆಲೆ ಏರಿಕೆಯಾಗಲಿದೆ ಎಂದು ಈರುಳ್ಳಿ ವರ್ತಕರು ಹೇಳುತ್ತಾರೆ.

ಕೆಲವೆಡೆ ಮಳೆಯಿಂದ ಈರುಳ್ಳಿ ಬೆಳೆಗೆ ಅಪಾರ ಹಾನಿಯಾಗಿದೆ. ಮತ್ತೆ ಕೆಲವೆಡೆ ರೋಗದಿಂದ ಬಿತ್ತನೆ ಕೈಗೆ ಸಿಗದೆ ರೈತರು ಆತಂಕಕ್ಕೊಳಗಾಗಿದ್ದಾರೆ. ಈಗಾಗಲೇ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ದೊರೆಯುತ್ತಿಲ್ಲ.

ರಾಜಧಾನಿ ಬೆಂಗಳೂರಿಗೆ ಸರಬರಾಜಾಗುತ್ತಿದ್ದ ಈರುಳ್ಳಿ ಪ್ರಮಾಣ ಕೂಡ ಕಡಿಮೆಯಾಗಿದೆ. ಕೊರೊನಾ ಆತಂಕದಲ್ಲಿರುವ ಜನ ಈಗ ಈರುಳ್ಳಿ ಬೆಲೆ ಏರಿಕೆಯಾದರೆ ಮತ್ತೊಂದು ಆತಂಕ ಎದುರಿಸಲು ಸಿದ್ಧರಾಗಬೇಕಾಗುತ್ತದೆ.

Facebook Comments

Sri Raghav

Admin