ಈರುಳ್ಳಿ-ತರಕಾರಿ, ಹಣ್ಣು, ತರಕಾರಿ ಬೆಲೆಯಲ್ಲಿ ಇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.10-ಕೆಲ ದಿನಗಳಿಂದ ಗಗನ ಮುಖಿಯಾಗಿ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದ್ದ ಈರುಳ್ಳಿ ಸೇರಿದಂತೆ ಹಣ್ಣು, ತರಕಾರಿ ದರದಲ್ಲಿ ಈಗ ಇಳಿಕೆಯಾಗಿದ್ದು, ಜನ ಕೊಂಚ ನಿರಾಳರಾಗಿದ್ದಾರೆ. 200 ರೂ.ಗೆ ಏರಿದ್ದ ಈರುಳ್ಳಿ ಬೆಲೆ ಈಗ 20 ರೂ.ಗೆ ಇಳಿದಿದೆ. 400 ರೂ.ಗಳಿದ್ದ ನುಗ್ಗೇಕಾಯಿ ಬೆಲೆ ಈಗ 100 ರೂ. ಇಳಿದಿದ್ದು, ಬೆಲೆ ಇಳಿಕೆಯಿಂದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ತರಕಾರಿ ದರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಈರುಳ್ಳಿ, ಆಲೂಗಡ್ಡೆ, ಟೊಮೋಟೋ, ಬೀನ್ಸ್, ಕೋಸು, ಗೆಡ್ಡೆ ಕೋಸು, ಬದನೇಕಾಯಿ ಸೇರಿದಂತೆ ಎಲ್ಲಾ ತರಕಾರಿಗಳ ಬೆಲೆ ಅಲ್ಲದೆ ಸೊಪ್ಪಿನ ದರವೂ ಕೂಡ ಏರಿಕಯಾಗಿತ್ತು. ಈಗ ದರದಲ್ಲಿ ಇಳಿಕೆಯಾಗಿದ್ದು, ಗ್ರಾಹಕರಲ್ಲಿ ಸಂತಸ ಮೂಡಿದೆ.

ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗುತ್ತದೆ. ಜೊತೆಗೆ ಎಲ್ಲೆಡೆ ಅಂತರ್ಜಲ ಮಟ್ಟ ಕುಸಿದು ನೀರಿಗೆ ಹಾಹಾಕಾರ ಉಂಟಾಗುತ್ತದೆ. ಹೀಗಾಗಿ ಬೆಳೆಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ಪೂರೈಕೆಯಾಗದೆ ತರಕಾರಿ ಉತ್ಪಾದನೆ ಕುಂಠಿತಗೊಳ್ಳುವುದು ಸಹಜ.  ಆದರೆ ಈ ಬಾರಿ ಬೇಸಿಗೆ ಆರಂಭದಲ್ಲಿ ತರಕಾರಿ ದರದಲ್ಲಿ ಇಳಿಕೆಯಾಗಿದ್ದು, ಒಳ್ಳೆಯ ಲಕ್ಷಣಗಳು ಕಾಣುತ್ತಿವೆ.

ಮಾರ್ಚ್ ನಂತರ ಬಿಸಿಲು ಹೆಚ್ಚಾದರೆ ಬೆಲೆಗಳಲ್ಲಿ ಕೊಂಚ ಏರಿಕೆಯಾಗುವುದು. ಇದಲ್ಲದೆ ಕಿತ್ತಳೆ, ಮೂಸಂಬಿ ಹಣ್ಣುಗಳು ಬೆಲೆಯೂ ಕೈಗೆಟುವಂತಿದೆ.  25 ರಿಂದ 50 ರೂ.ಗಳಿಗೆ ಒಳ್ಳೆಯ ಕಿತ್ತಳೆ ಸಿಗುತ್ತಿದೆ. ಪಾಲಾಕ್, ಮೆಂತೆ, ಸಬ್ಸಿಗೆ, ಕೊತ್ತಂಬರಿ, ಪುದೀನ ಸೊಪ್ಪುಗಳ ದರ ಕೂಡ ಇಳಿಕೆಯಾಗಿದೆ.

Facebook Comments