ಫೆಬ್ರವರಿವರೆಗೂ ‘ಕಣ್ಣೀರು’ಳ್ಳಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.14- ದಿನನಿತ್ಯ ಬಳಸುವ ಈರುಳ್ಳಿ ಬೆಲೆ ಏರಿಕೆಯ ಬಿಸಿ ಫೆಬ್ರವರಿವರೆಗೂ ಮುಂದುವರಿಯಲಿರುವುದ ರಿಂದ ಜನಸಾಮಾನ್ಯರು ದರ ಏರಿಕೆಯ ಬಿಸಿಯನ್ನು ಅನುಭವಿಸಬೇಕಾಗಿದೆ. ಕಳೆದ ಒಂದು ತಿಂಗಳಿಂದ ಗ್ರಾಹಕರ ಪಾಲಿಗೆ ಕಣ್ಣೀರುಳ್ಳಿ ಆಗಿರುವ ಈರುಳ್ಳಿ ಇನ್ನೂ ಎರಡು ತಿಂಗಳ ಕಾಲ ಜೇಬಿಗೆ ಕತ್ತರಿ ಹಾಕಲಿದೆ.

ಈರುಳ್ಳಿ… ಈರುಳ್ಳಿ… ಬೆಲೆ ಏರಿಕೆ 140ರೂ. ಕೆಜಿ 180ರೂ. ಕೆಜಿ, 200ರೂ.ಗೆ ಒಳ್ಳೇ ಈರುಳ್ಳಿ, 100ರೂ.ಗೆ 2 ಕೆಜಿ ಈರುಳ್ಳಿ ಅದು ಸಣ್ಣೀರುಳ್ಳಿ… ಹೀಗೆ ಎಲ್ಲಿ ನೋಡಿದರೂ ಈರುಳ್ಳಿಯದೇ ಮಾತು. ಈರುಳ್ಳಿ ಜೀವನದಲ್ಲಿ ಅಷ್ಟು ಹಾಸುಹೊಕ್ಕಾಗಿದೆ. ಯಾವುದೇ ಒಂದು ತರಕಾರಿ ಸಿಗಲಿಲ್ಲವೆಂದರೆ ಮತ್ತೊಂದು ತರಕಾರಿ ಹಾಕಿ ಅಡುಗೆ ಸಿದ್ಧಮಾಡಬಹುದು. ಆದರೆ, ಈರುಳ್ಳಿಗೆ ಪರ್ಯಾಯವಾದ ಮತ್ತೊಂದು ತರಕಾರಿ ಇಲ್ಲ. ಪ್ರತಿದಿನದ ಅಡುಗೆಯಲ್ಲಿ ಈರುಳ್ಳಿ ಇರಲೇಬೇಕು. ಹಾಗಾಗಿ ಈರುಳ್ಳಿಗೆ ಮಹತ್ವವಿದೆ.

ಉತ್ತರ ಕರ್ನಾಟಕ ಭಾಗದ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಗದಗ, ರಾಯಚೂರು, ಬಿಜಾಪುರದಲ್ಲಿ ಭಾರೀ ಮಳೆ ಹಾಗೂ ಪ್ರವಾಹ, ಚಿತ್ರದುರ್ಗ, ಚಳ್ಳಕೆರೆ, ಚಿಕ್ಕಮಗಳೂರಿನ ಕಡೂರು, ತರೀಕೆರೆ, ಶಿವನಿ, ಅಜ್ಜಂಪುರದ ಕೆಲವೆಡೆ ಭಾರೀ ಮಳೆಯ ಪರಿಣಾಮ ಬೆಳೆದಿದ್ದ ಈರುಳ್ಳಿ ಸಂಪೂರ್ಣ ಹಾಳಾಯಿತು. ಹೀಗಾಗಿ ಮಾರುಕಟ್ಟೆಗೆ ಈರುಳ್ಳಿ ಬರಲಿಲ್ಲ. ಅದೇ ರೀತಿ ಮಹಾರಾಷ್ಟ್ರ, ಕೊಲ್ಲಾಪುರ, ನಾಸಿಕ್ ಭಾಗ ಗಳಲ್ಲೂ ಕೂಡ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಈರುಳ್ಳಿ ಬೆಳೆ ನಾಶವಾದ ಪರಿಣಾಮ ಮಾರುಕಟ್ಟೆಯಲ್ಲಿ ಅವಕ ಕಡಿಮೆಯಾಗಿ ಬೆಲೆ ಹೆಚ್ಚಾಗಿದೆ.

ಕನಿಷ್ಟ ಈರುಳ್ಳಿ ಬೆಲೆ ಕೆಜಿಗೆ 10ರೂ.ನಿಂದ 20ರೂ. ಇತ್ತು. ಈಗ 150ರೂ.ನಿಂದ 200ರೂ.ಗೆ ಏರಿಕೆಯಾಗಿದೆ. ಶೇ.200ರಷ್ಟು ಬೆಲೆ ಏರಿಕೆಯಾಗಿರುವುದು ಗ್ರಾಹಕರು, ಜನಸಾಮಾನ್ಯರ ಮೇಲೆ ಬರೆ ಎಳೆದಂತಾಗಿದೆ. ಈ ಪರಿಸ್ಥಿತಿಯನ್ನು ಇನ್ನೂ ಎರಡು ತಿಂಗಳ ಕಾಲ ಜನ ಅನುಭವಿಸಬೇಕಾಗಿದೆ. ಗುಲ್ಬರ್ಗ, ರಾಯಚೂರು, ಮಹಾರಾಷ್ಟ್ರದ ಸೊಲ್ಲಾಪುರದಿಂದ ಹೊಸ ಈರುಳ್ಳಿ ಮಾರುಕಟ್ಟೆಗೆ ಬರಬೇಕಾದರೆ ಜನವರಿ 15ರ ವರೆಗೆ ಕಾಯಬೇಕು. ಅಲ್ಲಿಯವರೆಗೆ ಇದೇ ದರ ತೆತ್ತು ಗ್ರಾಹಕರು ಈರುಳ್ಳಿ ಕೊಳ್ಳಬೇಕಾಗಿದೆ.

ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಟರ್ಕಿ, ಈಜಿಪ್ಟ್‍ನಿಂದ ಈರುಳ್ಳಿ ತರಿಸಿದರೂ ಕೂಡ ಅದು ಸಾಕಾಗದೆ ಬೆಲೆ ನಿಯಂತ್ರಣಕ್ಕೆ ಬರುತ್ತಿಲ್ಲ. ಮಾರುಕಟ್ಟೆಯಲ್ಲಿ ಈರುಳ್ಳಿ ಅಗತ್ಯವಾದಷ್ಟು ಲಭ್ಯವಾಗುತ್ತಿಲ್ಲ. ಪ್ರತಿದಿನ ಬೆಂಗಳೂರು ಮಾರುಕಟ್ಟೆಗೆ 300 ಲಾರಿ ಲೋಡ್ ಈರುಳ್ಳಿ ವಿವಿಧೆಡೆಯಿಂದ ಬರುತ್ತಿತ್ತು. ಸೀಜನ್‍ನಲ್ಲಿ 500 ರಿಂದ 800 ಲೋಡ್ ಈರುಳ್ಳಿ ಬರುತ್ತಿತ್ತು. ಇಲ್ಲಿ ಖರೀದಿಯಾದ ಈರುಳ್ಳಿ ಬೆಂಗಳೂರು ಸೇರಿದಂತೆ ತಮಿಳುನಾಡು, ಆಂಧ್ರ ಪ್ರದೇಶ, ಗುಜರಾತ್, ರಾಜಸ್ಥಾನಕ್ಕೆ ಸರಬರಾಜಾಗುತ್ತಿತ್ತು. ಆದರೆ, ಪ್ರಸ್ತುತ 80 ರಿಂದ 150 ಲೋಡ್ ಮಾತ್ರ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ. ಬೆಂಗಳೂರು ಮಹಾನಗರ ಒಂದಕ್ಕೇ ಪ್ರತಿದಿನ 30 ರಿಂದ 35 ಲೋಡ್ ಈರುಳ್ಳಿ ಬಳಕೆಗೆ ಬೇಕಾ ಗುತ್ತದೆ. ಆದರೆ, ಮಾರುಕಟ್ಟೆಗೆ ಬರುತ್ತಿರುವ ಈರುಳ್ಳಿ ಕಡಿಮೆ ಇರುವು ದರಿಂದ ಬೆಲೆ ಗಗನಕ್ಕೇರಿದೆ.

ಈರುಳ್ಳಿಯನ್ನು ಸಂಗ್ರಹಿಸಿಟ್ಟುಕೊಂಡು ಕೆಲವು ವರ್ತಕರು ಪರಿಸ್ಥಿತಿಯ ಲಾಭ ಪಡೆಯುತ್ತಿದ್ದಾರೆ. ಒಟ್ಟಾರೆ ಜನಸಾಮಾನ್ಯರು ಗೊಣಗುತ್ತಲೇ ಬೆಲೆ ಏರಿಕೆಯನ್ನು ಶಪಿಸುತ್ತಾ ಅಲ್ಪ ಸ್ವಲ್ಪ ಈರುಳ್ಳಿ ಕೊಂಡು ಜೀವನ ಸಾಗಿಸುತ್ತಿದ್ದಾರೆ. ಈರುಳ್ಳಿ ಬೆಲೆ ಏರಿಕೆಯಾಗಿ ಒಂದು ತಿಂಗಳಾಯಿತು. ಇನ್ನೂ ಬೆಲೆ ಇಳಿದಿಲ್ಲ. ಮತ್ತಷ್ಟು ಬೆಲೆ ಏರಿಕೆ ಯಾಗುವ ಆತಂಕ ಎದುರಾ ಗಿದೆ. ಇನ್ನೂ ಹಲವು ದಿನಗಳ ಕಾಲ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.

ಅವಲಂಬಿತರ ಬದುಕು ಅತಂತ್ರ:ಸೆಪ್ಟೆಂಬರ್‍ನಿಂದ ಡಿಸೆಂಬರ್‍ವರೆಗೆ ಕರ್ನಾಟಕದ ವಿವಿಧೆಡೆ ಬೆಳೆದ ಈರುಳ್ಳಿ ಮಾರುಕಟ್ಟೆಗೆ ಬರುತ್ತದೆ. ಡಿಸೆಂಬರ್‍ನಿಂದ ಫೆಬ್ರವರಿವರೆಗೆ ಹೊರರಾಜ್ಯದ ಈರುಳ್ಳಿ ಮಾರುಕಟ್ಟೆಗೆ ಬರುತ್ತದೆ. ಪ್ರಕೃತಿ ವೈಪರೀತ್ಯದ ಹಿನ್ನೆಲೆಯಲ್ಲಿ ಈ ಬಾರಿ ಮಾರುಕಟ್ಟೆಗೆ ನಿಗದಿತ ಪ್ರಮಾಣದಲ್ಲಿ ಈರುಳ್ಳಿ ಬರಲಿಲ್ಲ. ಹಾಗಾಗಿ ಬೆಲೆ ಏರಿಕೆಯಲ್ಲಿ ವ್ಯತ್ಯಯವಾಯಿತು. ಈರುಳ್ಳಿ ನಂಬಿ ಸಾವಿರಾರು ಕುಟುಂಬಗಳು ಬದುಕುತ್ತಿವೆ.

ಬೆಳೆಯುವ ರೈತ ಒಂದೆಡೆಯಾದರೆ, ಮಾರುಕಟ್ಟೆಗೆ ತಂದ ಮೇಲೆ ಹಮಾಲಿಗಳು, ಗುಮಾಸ್ತರು, ವರ್ತಕರು, ದಲ್ಲಾಳಿಗಳು, ಗೋಣಿಚೀಲ ಮಾಡುವವರಿಂದ ಹಿಡಿದು ಸಹಸ್ರಾರು ಜನ ಈರುಳ್ಳಿ ಮಾರುಕಟ್ಟೆಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಒಂದೇ ಬಾರಿ ಈರುಳ್ಳಿ ಮಾರುಕಟ್ಟೆಯಲ್ಲಿ ವ್ಯತ್ಯಯ ವಾದರೆ ಈ ಎಲ್ಲ ಅವಲಂಬಿತರ ಬದುಕು ಅತಂತ್ರವಾಗುತ್ತದೆ. ಜನಸಾಮಾನ್ಯರಿಗೆ ಬೆಲೆ ಏರಿಕೆಯೊಂದೇ ದೊಡ್ಡದಾಗಿ ಬಿಂಬಿತವಾಗುತ್ತದೆ. ಬೆಲೆ ಏರಿಕೆಗೆ ಸಾಕಷ್ಟು ಕಾರಣಗಳಿರುತ್ತವೆ. ಈರುಳ್ಳಿಯನ್ನು ಬಹಳ ದಿನಗಳ ಕಾಲ ಸಂಗ್ರಹಿಸಿಟ್ಟು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ.

Facebook Comments