ಈರುಳ್ಳಿ ಬೆಳೆದ ರೈತ ಪಾಪರ್..! ಕೊಳ್ಳುತ್ತಿರುವ ಗ್ರಾಹಕನ ಕಣ್ಣಲ್ಲಿ ನೀರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.29-ನಿನ್ನೆ, ಮೊನ್ನೆಯಷ್ಟೆ ತೀವ್ರ ಬೆಲೆ ಕುಸಿತದಿಂದ ರೈತರಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ಇದೀಗ ಬೆಲೆ ಹೆಚ್ಚಳದಿಂದ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ.
ಈರುಳ್ಳಿ ಎಂದರೆ ಬೆಳೆದ ರೈತರಿಗೆ ಇಲ್ಲವೆ, ಬಳಸುವ ಗ್ರಾಹಕರಿಗೆ ಕಣ್ಣೀರು ತರಿಸದೆ ಇರದು. ಉತ್ತಮ ಬೆಲೆ ಸಿಗುತ್ತಿಲ್ಲವೆಂದು ರೈತರು ಬೀದಿಗಿಳಿದು ಹೋರಾಟ ಮಾಡಿ ತಾವು ಬೆಳೆದ ಈರುಳ್ಳಿಯನ್ನು ರಸ್ತೆಗೆ ಚೆಲ್ಲಿ ಪರಿಹಾರ ನೀಡುವಂತೆ ಪರಿ ಪರಿಯಾಗಿ ಬೇಡಿಕೊಂಡು ಕಣ್ಣೀರು ಸುರಿಸಿದರು.

ಅಲ್ಲದೆ, ಇತ್ತೀಚೆಗೆ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವೆಡೆ ಸುರಿದ ಭಾರೀ ಮಳೆಯಿಂದ ಈರುಳ್ಳಿ ಬೆಲೆ ಹಾಳಾಗಿ ಬೆಳೆಗಾರರು ಸಂಕಷ್ಟಕ್ಕೀಡಾದರು. ಅಳಿದುಳಿದ ಬೆಳೆ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ಕಣ್ಣೀರಿಡುವಂತಾಯಿತು. ಇದೀಗ ದರ ಕೇಳಿದರೆ ಗಾಬರಿ ಪಡುವಷ್ಟು ಎತ್ತರಕ್ಕೇರಿದೆ. ಕೆಲ ಮಾರುಕಟ್ಟೆಗಳಲ್ಲಿ ಈರುಳ್ಳಿ ದರ ಗಂಟೆ ಲೆಕ್ಕದಲ್ಲಿ ಹೆಚ್ಚಳವಾಗುತ್ತಿದೆ. ಎಪಿಎಂಸಿ ಅಂಗಡಿಗಳಲ್ಲಿ ಒಂದು ಕೆಜಿ ಈರುಳ್ಳಿಗೆ 60 ರಿಂದ 70 ರೂ.ಗಳಾದರೆ, ಮಾರುಕಟ್ಟೆಯಲ್ಲಿ 80 ರಿಂದ 100 ರೂ.ಗಳಿಗೆ ಮಾರಾಟ ವಾಗತೊಡಗಿದೆ.

ಕೆಜಿಗಟ್ಟಲೆ ಈರುಳ್ಳಿ ತರುವವರು ಈಗ ದರ ಏರಿಕೆಯಾಗಿರುವುದರಿಂದ ಗ್ರಾಂ ಲೆಕ್ಕದಲ್ಲಿ ತರುವಂತಾಗಿದೆ. ದರ ಹೆಚ್ಚಳ ಹೊಟೇಲ್ ಉದ್ಯಮದ ಮೇಲೆ ಪರಿಣಾಮ ಬೀರಿದೆ. ಈರುಳ್ಳಿ ಬಳಸಿ ಮಾಡುವ ತಿಂಡಿ ಪದಾರ್ಥಗಳ ಬೆಲೆ ಕೂಡ ಹೆಚ್ಚಳ ಮಾಡುತ್ತಿದ್ದಾರೆ.  ರೈತರು ಬೆಳೆದ ಈರುಳ್ಳಿಗೆ ಬೆಲೆ ಸಿಗಲಿಲ್ಲ. ರೈತರು ಮಾರುಕಟ್ಟೆಗೆ ಈರುಳ್ಳಿ ತಂದಾಗ ಬೇಕಾಬಿಟ್ಟಿ ಬೆಲೆ ಕೇಳಿದರು. ಒಂದು ಕಡೆ ಸತತವಾಗಿ ನಾಲ್ಕು ವರ್ಷಗಳ ಕಾಲ ಬರಗಾಲ ಹಾಗೂ ನೆರೆಯಿಂದ ಹಾಳಾದ ಬೆಳೆ ಈಗ ರೈತರ ಬಳಿ ಈರುಳ್ಳಿ ಮುಗಿದ ನಂತರ ದಲ್ಲಾಳಿಗಳು ಮತ್ತು ವ್ಯಾಪಾರಸ್ಥರು ಕೂಡಿಕೊಂಡು ತಾವು ಖರೀದಿಸಿದ್ಧ ಈರುಳ್ಳಿಯನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಗ್ರಾಹಕರಿಗೆ ಕಣ್ಣೀರು ಬರುತ್ತಿದೆ.

ಈರುಳ್ಳಿ ಹೆಚ್ಚಾಗಿ ಬೆಳೆಯುತ್ತಿದ್ದ ರಾಯಚೂರು, ಗದಗ, ಧಾರವಾಡ, ಚಿಕ್ಕಮಗಳೂರಿನ ಹಲವು ತಾಲೂಕುಗಳು ಚಿತ್ರದುರ್ಗದ ಹಲವು ತಾಲೂಕುಗಳಲ್ಲಿ ಭಾರೀ ಮಳೆಯಾದ ಪರಿಣಾಮ ಬೆಳೆ ಹಾಳಾಯಿತು. ಕೈಗೆ ಬಂದ ತುತ್ತು ರೈತರ ಬಾಯಿಗೆ ಬರದಂತಾಯಿತು. ಈರುಳ್ಳಿಯ ಅವಕ ಕಡಿಮೆಯಾಯಿತು. ಅತ್ತ ಯಥೇಚ್ಛವಾಗಿ ಈರುಳ್ಳಿ ರಾಜ್ಯಕ್ಕೆ ಬರುತ್ತಿದ್ದ ಮಹಾರಾಷ್ಟ್ರದಲ್ಲೂ ಕೂಡ ಈರುಳ್ಳಿ ಬೆಲೆ ಭಾರೀ ಮಳೆಗೆ ತುತ್ತಾಯಿತು. ಹಾಗಾಗಿ ಈರುಳ್ಳಿ ಮಾರುಕಟ್ಟೆಗೆ ಸರಬರಾಜು ಆಗುವುದು ಕಡಿಮೆಯಾಗಿ ಬೆಲೆ ಏರಿಕೆಯಾಗಿದೆ.

ಈಗ ಕೆಜಿಗೆ 70 ರಿಂದ 120ರೂ.ಗಳವರೆಗೆ ಈರುಳ್ಳಿ ಮಾರಾಟ ವಾಗುತ್ತಿದೆ. ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದ್ದು, 15 ಸಾವಿರ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಪ್ರಸ್ತುತ ಇರುವ ಬೆಲೆ ಇನ್ನೂ ಒಂದು ತಿಂಗಳು ಮುಂದುವರೆಯುವ ಸಾಧ್ಯತೆ ಇದೆ. ಡಿಸೆಂಬರ್ ತಿಂಗಳೊಳಗಾಗಿ ಈರುಳ್ಳಿ ಆಮದಾಗಲಿದ್ದು, ನಂತರ ಈರುಳ್ಳಿ ಬೆಲೆ ಸಹಜ ಸ್ಥಿತಿಗೆ ಬರಲಿದೆ.

ದಿನಬಳಕೆಯ ಯಾವುದೇ ವಸ್ತುಗಳು ಏರಿಕೆಯಾದರೆ ಸರ್ಕಾರ ಮಧ್ಯಪ್ರವೇಶಿಸಿ ನಿಯಂತ್ರಿಸಬೇಕು. ಕಳೆದ ಎರಡು ತಿಂಗಳಿನಿಂದ ಈರುಳ್ಳಿ ದರ ಏರಿಕೆಯಲ್ಲಿ ಸಾಕಷ್ಟು ವ್ಯತ್ಯಯವಾಗಿದೆ. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಹಕರ ಹಿತರಕ್ಷಣೆಯಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಈರುಳ್ಳಿ ಮತ್ತು ಆಲೂಗಡ್ಡೆ ಬೆಲೆ ಏರಿಕೆ ಯಾವ ರೀತಿ ಪರಿಣಾಮ ಬೀರಿತ್ತು ಎಂದರೆ ದೆಹಲಿ ಸರ್ಕಾರವನ್ನೇ ಬುಡ ಸಹಿತ ಅಲುಗಾಡಿಸಿತ್ತು.

ಪ್ರಸ್ತುತ ಕರ್ನಾಟಕದಲ್ಲಿ ಅಂತಹ ಪ್ರಸಂಗವೇನೂ ಎದುರಾಗಿಲ್ಲ. ಆದರೂ ಗ್ರಾಹಕರ ಹಿತದೃಷ್ಟಿಯಿಂದ ಸರ್ಕಾರ ಈರುಳ್ಳಿ ಬೆಲೆಯನ್ನು ನಿಯಂತ್ರಿಸಬೇಕಾಗಿದೆ. ಬೆಳೆಗಾರರಿಗೆ ಬೆಲೆ ಸಿಕ್ಕಿದರೆ ಬಂಪರ್ ಆಗುತ್ತದೆ. ಆದರೆ ಈ ಬೆಲೆ ಮಧ್ಯವರ್ತಿಗಳ ಪಾಲಾಗುತ್ತದೆ. ಹಾಗಾಗಿ ಸರ್ಕಾರ ಮಧ್ಯಪ್ರವೇಶಿಸಿ ಸಾರ್ವಜನಿಕರ ಹಿತ ಕಾಯಬೇಕಾಗಿದೆ.

ಕಳವು: ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದಂತೆ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ, ಈರುಳ್ಳಿಯನ್ನು ಕೊಂಡು ಸಂಗ್ರಹಿಸಿಟ್ಟಿದ್ದ ಗೋದಾಮುಗಳಿಂದ ಈರುಳ್ಳಿಯನ್ನು ಕದ್ದ ಪ್ರಕರಣಗಳು ಕೇಳಬಂದಿವೆ. ಕರ್ನಾಟಕ, ಗುಜರಾತ್‍ನ ಕೆಲವು ಎಪಿಎಂಸಿ ಹಾಗೂ ಖಾಸಗಿ ಗೋದಾಮುಗಳಿಂದ ಈರುಳ್ಳಿ ಮೂಟೆಗಳನ್ನು ಕದ್ದಿರುವ ಪ್ರಕರಣಗಳು ದಾಖಲಾಗಿವೆ.

Facebook Comments