ಮದ್ಯ ಪ್ರಿಯರಿಗೆ ಸಂತಸದ ಸುದ್ದಿ : ರಾಜ್ಯದಲ್ಲೂ ಆನ್ ಲೈನ್ ಮೂಲಕ ಮನೆ ಮನೆಗೂ ಮದ್ಯ ಮಾರಾಟ..!

ಈ ಸುದ್ದಿಯನ್ನು ಶೇರ್ ಮಾಡಿ

online-Alcohal
ಬೆಂಗಳೂರು,ಅ.20-ಮಹಾರಾಷ್ಟ್ರ ಸರ್ಕಾರ ಮನೆ ಮನೆಗೆ ಮದ್ಯವನ್ನು ಪೂರೈಕೆ ಮಾಡಲು ತೆಗೆದುಕೊಂಡಿರುವ ಕ್ರಮದ ಬಗ್ಗೆ ಪರ-ವಿರೋಧ ವ್ಯಕ್ತವಾಗಿದೆ.
ಇದೀಗ ಕರ್ನಾಟಕ ಸರ್ಕಾರ ಒಂದು ಹೆಜ್ಜೆ ಮುಂದಿದ್ದು, ಇನ್ನು ಮುಂದೆ ಮದ್ಯ ಪ್ರಿಯರು ಆನ್‍ಲೈನ್ ಮೂಲಕವೇ ಖರೀದಿ ಮಾಡಲು ಅನುಕೂಲವಾಗುವಂತೆ ಹಾಲಿ ಇರುವ ಕಾನೂನಿಗೆ ತಿದ್ದುಪಡಿ ಮಾಡಲು ಮುಂದಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಹಾಲಿ ಇರುವ ಅಬಕಾರಿ ಕಾಯ್ದೆಗೆ ತಿದ್ದುಪಡಿ ಮಾಡಿ ಆನ್‍ಲೈನ್ ಮೂಲಕ ಮದ್ಯಪ್ರಿಯರು ತಮಗಿಷ್ಟವಾದ ಮದ್ಯವನ್ನು ಖರೀದಿ ಮಾಡಬಹುದಾಗಿದೆ.

ಅಂದಹಾಗೆ ಆನ್‍ಲೈನ್‍ನಲ್ಲಿ ಖರೀದಿಸಲು ಅವಕಾಶ ಕಲ್ಪಿಸುವ ಉದ್ದೇಶದ ಹಿಂದೆ ಲಾಭ ಗಳಿಕೆ ಅಡಗಿದೆ. ಸದ್ಯಕ್ಕೆ ರಾಜ್ಯ ಸರ್ಕಾರ ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕ್‍ಗಳಲ್ಲಿ ರೈತರು ಪಡೆದಿದ್ದ ಸಾಲವನ್ನು ಮನ್ನಾ ಮಾಡುವ ಮೂಲಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸುಮಾರು 45 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ಹೊಡೆತ ಬಿದ್ದಿದೆ. ಒಂದೊಂದು ರೂಪಾಯಿ ಕೂಡ ಅಗತ್ಯವಾಗಿರುವುದರಿಂದ ಸಂಪನ್ಮೂಲಗಳ ಕ್ರೊಢೀಕರಣಕ್ಕಾಗಿ ವಿಶೇಷ ಗಮನಹರಿಸಿದೆ.

ಈ ಬಾರಿ ಅಬಕಾರಿ ಇಲಾಖೆಯಿಂದ ಸರ್ಕಾರ 10 ಸಾವಿರ ಕೋಟಿ ಆದಾಯವನ್ನು ನಿರೀಕ್ಷೆ ಮಾಡಿದೆ. ಸಾಮಾನ್ಯವಾಗಿ ಸರ್ಕಾರ ನಿಗದಿಪಡಿಸಿದ ಆದಾಯಕ್ಕಿಂತಲೂ ದುಪ್ಪಟ್ಟು ರೀತಿಯಲ್ಲಿ ವರಮಾನ ಅಬಕಾರಿ ಇಲಾಖೆಯಿಂದ ಹೆಚ್ಚಳವಾಗುತ್ತದೆ.  ಈಗ ಆನ್‍ಲೈನ್ ಮೂಲಕ ನೇರವಾಗಿ ಮದ್ಯಪ್ರಿಯರ ಮನೆಗೆ ಮದ್ಯವನ್ನು ಒದಗಿಸುವ ವ್ಯವಸ್ಥೆ ಕಲ್ಪಿಸಿದರೆ ಇನ್ನಷ್ಟು ವರಮಾನವನ್ನು ನಿರೀಕ್ಷಿಸಬಹುದು ಎಂಬ ಲೆಕ್ಕಾಚಾರದಲ್ಲಿ ರಾಜ್ಯ ಸರ್ಕಾರ ಆನ್‍ಲೈನ್ ಮದ್ಯ ಮಾರಾಟಕ್ಕೆ ಮುಂದಾದಂತಿದೆ.

ಮಾತುಕತೆ: ಈಗಾಗಲೇ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ರಾಜ್ಯ ಮದ್ಯ ಮಾರಾಟಗಾರರ ಸಂಘದ ಪ್ರತಿನಿಧಿಗಳು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆನ್‍ಲೈನ್‍ನಲ್ಲಿ ಮದ್ಯ ಮಾರಾಟ ಮಾಡುವುದರಿಂದ ಆಗಬಹುದಾದ ಲಾಭ-ನಷ್ಟ, ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಇದರಿಂದ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಮದ್ಯ ಮಾರಾಟಗಾರರ ಸಂಘ ಸ್ಪಷ್ಟಪಡಿಸಿದೆ. ಇದೀಗ ಅಬಕಾರಿ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಅಬಕಾರಿ ಸಚಿವರ ಜೊತೆ ಮಾತುಕತೆ ನಡೆಸಿ ಅನುಮತಿ ದೊರೆತ ನಂತರ ಮುಂದಿನ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿಯಾಗಲಿದೆ.

Facebook Comments

Sri Raghav

Admin