ಆನ್‍ಲೈನ್ ತರಗತಿಗಳ ನೆಟ್‍ವರ್ಕ್‍ಗಾಗಿ ಬೆಟ್ಟದ ಮೇಲೆ ಟೆಂಟ್..!

ಈ ಸುದ್ದಿಯನ್ನು ಶೇರ್ ಮಾಡಿ

– ಪ್ರಸಾದ್ ಬೆಳ್ತಂಗಡಿ
ಬೆಳ್ತಂಗಡಿ, ಜು.25- ತಂತ್ರಜ್ಞಾನ ಇಂದು ಎಲ್ಲಾ ವ್ಯವಹಾರಗಳಿಗೂ ಕಾಲಿಟ್ಟಿದೆ. ಹಿಂದೆ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಈ ವ್ಯವಸ್ಥೆ ಇಂದು ಗ್ರಾಮಾಂತರಕ್ಕೂ ತಲುಪಿದೆ. ಇದರ ಒಳಿತು, ಕೆಡುಕುಗಳು ಏನಿದ್ದರೂ, ಭವಿಷ್ಯದಲ್ಲಿ ಎಲ್ಲ ವ್ಯವಹಾರವೂ ತಂತ್ರಜ್ಞಾನದ ಅಡ್ಡಿಯಲ್ಲೇ ನಡೆಯಲಿದೆ.

ತಾಲೂಕಿನ ಶಿಬಾಜೆ ಗ್ರಾಪಂ ವ್ಯಾಪ್ತಿಯ ಪೆರ್ಲ,ಪೆÇಸೋಡಿ, ಮಾರ್ಯಡಿ,ಬಂಗೇರಡ್ಕ, ಪತ್ತಿಮಾರು, ನೀರಾಣ, ಭಂಡಿಹೊಳೆ, ಬೂಡುದಮಕ್ಕಿ ಪರಿಸರದ ಸುಮಾರು 500 ಕುಟುಂಬಗಳಿಗೆ ಮಾತ್ರ ಮೊಬೈಲ್ ನೆಟ್‍ವರ್ಕ್ ಗಗನಕುಸುಮವಾಗಿದೆ.

ಕಳೆದ 12 ವರ್ಷಗಳಿಂದ ನೆಟ್‍ವರ್ಕ್‍ಗಾಗಿ ಇಲ್ಲಿನ ನಿವಾಸಿಗಳು, ಜನಪ್ರತಿನಿಧಿಗಳಿಗೆ ಅದೆಷ್ಟೋ ಮನವಿಗಳನು ನೀಡುತ್ತಾ ಬಂದರೂ ಫಲಿತಾಂಶ ಮಾತ್ರ ಶೂನ್ಯ. ಕೊರೊನಾ ಮಹಾಮಾರಿಯ ನಂತರವಂತೂ ಶಾಲಾ ಮಕ್ಕಳಿಗೆ ಅನ್‍ಲೈನ್ ಕ್ಲಾಸ್‍ಗಳು ಪ್ರಾರಂಭವಾಗಿರುವುದರಿಂದ ಈ ಪ್ರದೇಶಗಳಲ್ಲಿ ನೆಟ್‍ವರ್ಕ್ ಸಿಗದೆ ಇಲ್ಲಿನ ಸುಮಾರು 400 ಮಕ್ಕಳು ಹಾಗೂ ಅಧ್ಯಾಪಕರು ಕಂಗಾಲಾಗಿದ್ದಾರೆ.

ಶಿಬಾಜೆ ಗ್ರಾಮದ ಕೆಲವು ಪ್ರದೇಶಗಳು ಇದಕ್ಕೆ ಸಾಕ್ಷಿಯಾಗಿವೆ. ಇಲ್ಲಿ ಯಾವುದೇ ಕಂಪೆನಿಗಳ ಟವರ್‍ಗಳಿಲ್ಲ. ಬೇರೆ ಪ್ರದೇಶಗಳ ಯಾವುದೇ ಟವರ್‍ಗಳಿಂದ ನೆಟ್‍ವರ್ಕ್ ಸಿಗುವುದಿಲ್ಲ. ಪ್ರಪಂಚದ ಆಗು-ಹೋಗುಗಳನ್ನು ಮೊಬೈಲ್‍ಗಳಲ್ಲಿ ತಿಳಿಯಬೇಕಾದರೆ, ನೆಟ್ ವರ್ಕ್ ಸಿಗುವಂತಹ ಪ್ರದೇಶಗಳಿಗೆ ಬರಬೇಕಾದ ಪರಿಸ್ಥಿತಿಯಿದೆ. ಈ ಭಾಗದ ಮಕ್ಕಳು ವಿವಿಧ ಶಾಲಾ-ಕಾಲೇಜು, ವೃತ್ತಿಪರ ಕಾಲೇಜುಗಳಿಗೆ ಹೋಗುತ್ತಿದ್ದಾರೆ.

ಇದೀಗ ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ, ವೃತ್ತಿಪರ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆನ್‍ಲೈನ್‍ನಲ್ಲಿ ತರಗತಿಗಳು ಆರಂಭಗೊಂಡಿವೆ. ಆದರೆ, ಈ ಪ್ರದೇಶದ ವಿದ್ಯಾರ್ಥಿಗಳು ಇದರಿಂದ ವಂಚಿತರಾಗಿದ್ದು, ನೆಟ್‍ವರ್ಕ್ ಸಿಗುವ ಪ್ರದೇಶವನ್ನು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ.

ಬೇಸಿಗೆ ಕಾಲದಲ್ಲಿ ಬೆಟ್ಟ, ಗುಡ್ಡ, ಮರ ಹತ್ತಿ ಪಾಠವನ್ನು ಕೇಳಬಹುದು. ಆದರೆ, ಮಳೆಗಾಲದಲ್ಲಿ ಇದು ಸಾಧ್ಯವೆ ಎಂಬುದು ಎಲ್ಲರನ್ನೂ ಕಾಡುತ್ತಿರುವ ಚಿಂತೆಯಾಗಿದೆ.

# ಪರದಾಟ:
ಈ ಪ್ರದೇಶದ ವಿದ್ಯಾರ್ಥಿಗಳು ಆನ್‍ಲೈನ್ ಕ್ಲಾಸ್‍ಗಾಗಿ ಪರದಾಟ ನಡೆಸುತ್ತಿದ್ದಾರೆ. ಕೆಲವು ಮಕ್ಕಳು ನೆಟ್‍ವರ್ಕ್ ಸಿಗುವ ಬಸ್ ನಿಲ್ದಾಣ, ದೇವಸ್ಥಾನದ ವಠಾರ, ಹತ್ತಿರದ ಮನೆಗಳನ್ನು ಆಶ್ರಯಿಸಿದ್ದಾರೆ. ಆದರೆ, ಎಲ್ಲಾ ಮಕ್ಕಳು ಒಂದೇ ಕಡೆ ಸೇರಿದರೆ ಮತ್ತೆ ನೆಟ್‍ವರ್ಕ್ ಸಮಸ್ಯೆ ಎದುರಾಗುತ್ತದೆ.

ಆನ್‍ಲೈನ್ ತರಗತಿಗಳಿಂದ ವಿದ್ಯಾರ್ಥಿಗಳು ವಂಚಿತರಾಗಬಾರದು ಎಂಬ ಉದ್ದೇಶದಿಂದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಒಟ್ಟುಗೂಡಿ ಪೇಟೆಯಿಂದ 5ಕಿಮೀ ದೂರದ ಎತ್ತರ ಪ್ರದೇಶದ ಕಾಡಿನಲ್ಲಿ ಟೆಂಟ್ ನಿರ್ಮಿಸಿಕೊಂಡಿದ್ದಾರೆ.

ಸೊಳ್ಳೆಗಳ ಕಾಟ ತಪ್ಪಿಸಿಕೊಳ್ಳಲು ಟೆಂಟ್ ಸುತ್ತ ಬಟ್ಟೆ ಸುತ್ತಲಾಗಿದೆ. ಸೊಳ್ಳೆಬತ್ತಿ ಉರಿಸಿ ಇದರೊಳಗೆ ಕೂತು ವಿದ್ಯಾರ್ಥಿಗಳು ಆನ್‍ಲೈನ್ ಪಾಠ ಆಲಿಸುತ್ತಿದ್ದಾರೆ.

ಶಿಕ್ಷಕಿ ಸೌಂದರ್ಯ ಕೈರಂಡ ಇದೇ ಟೆಂಟ್‍ನಲ್ಲಿ ಕುಳಿತು ಆನ್‍ಲೈನ್ ಕ್ಲಾಸಿಗಾಗಿ ತಯಾರಿ ನಡೆಸುತ್ತಿದ್ದಾರೆ. ಎತ್ತರ ಗುಡ್ಡವಾಗಿರುವುದರಿಂದ ಇಲ್ಲಿ ಎಲ್ಲಾ ಕಡೆಯ ನೆಟ್‍ವರ್ಕ್ ಸಿಗುತ್ತಿದೆ. ಆದರೆ, ಜೋರಾಗಿ ಮಳೆ ಬಂದರೆ ಇಲ್ಲಿಯೂ ಸಮಸ್ಯೆ ತಪ್ಪಿದ್ದಲ್ಲ.

ಶಿಬಾಜೆ ಪರಿಸರಕ್ಕೆ ಯಾವುದಾದರೂ ಕಂಪೆನಿಯ ಟವರ್ ಬೇಕೆಂಬುದು ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆಯಾಗಿದೆ. ಇಲ್ಲಿನ ನಿವಾಸಿಗಳು, ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.

ವಿದ್ಯಾರ್ಥಿಗಳ ಪರದಾಟ ಕಂಡ ಹೆತ್ತವರು ಹೋರಾಟದ ಹಾದಿ ಹಿಡಿದರೂ ಅಚ್ಚರಿ ಪಡುವಂತಿಲ್ಲ. ಕಳೆದ ಕೆಲವು ವರ್ಷಗಳಿಂದ ಮೊಬೈಲ್ ಟವರ್‍ಗಾಗಿ ಇಲ್ಲಿನವರು ಜನ ಪ್ರತಿನಿಧಿಗಳಿಗೆ, ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸುತ್ತ ಬಂದಿದ್ದಾರೆ. ಆದರೂ ಯಾರೂ ನಮ್ಮ ಸಮಸ್ಯೆಯನ್ನು ಆಲಿಸತ್ತಿಲ್ಲ.

ಆನ್‍ಲೈನ್ ಪಾಠಕ್ಕಾಗಿ ವಿದ್ಯಾರ್ಥಿಗಳು ಬೆಟ್ಟದ ಮೇಲಿನ ಟೆಂಟ್‍ಗೆ ಬರುವ ಅನಿವಾರ್ಯತೆ ಎದುರಾಗಿದೆ. ಅಲ್ಲಿ ಕಾಡು ಪ್ರಾಣಿಗಳ ಹಾವಳಿ ಇದೆ. ಸೊಳ್ಳೆಗಳಿಂದ ನಾನಾ ರೀತಿಯ ರೋಗ-ರುಜಿನಗಳು ಬರುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟವರು ಈ ಕೂಡಲೇ ಇಲ್ಲಿನ ಮೊಬೈಲ್ ನೆಟ್‍ವರ್ಕ್ ಸಮಸ್ಯೆಗೆ ಪರಿಹಾರ ಒದಗಿಸಿಕೊಡಬೇಕೆಂದು ಪ್ರಾಧ್ಯಾಪಕಿ ಸೌಂದರ್ಯ ಮನವಿ ಮಾಡಿಕೊಂಡಿದ್ದಾರೆ.

ನಮ್ಮ ಸಮಸ್ಯೆ ಬಗೆಹರಿಸುವಂತೆ ಸಂಸದರು ಮತ್ತು ಶಾಸಕರಿಗೆ ಮನವಿ ಮಾಡುತ್ತಲೇ ಇದ್ದೇವೆ. ಖಾಸಗಿ ಸಂಸ್ಥೆಯವರು ಭಂಡಿಹೊಳೆಯಲ್ಲಿ ಟವರ್ ಹಾಕುತ್ತೇವೆ ಎಂದು ಕಳೆದ ಎರಡು ವರ್ಷಗಳಿಂದ ಹೇಳುತ್ತಲೇ ಇದ್ದಾರೆ.

ಆದರೆ, ಇದುವರೆಗೂ ಟವರ್ ಸ್ಥಾಪಿಸಿಲ್ಲ. ಇದೇ ಧೋರಣೆ ಮುಂದುವರಿದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಸಿದ್ದಾರೆ.

Facebook Comments

Sri Raghav

Admin