ಆನ್‍ಲೈನ್ ಶಿಕ್ಷಣಕ್ಕೆ ಹೊಸ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.28-ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಮಾರ್ಗಸೂಚಿಯ ಅಂಶಗಳನ್ನು ಪರಿಗಣಿಸಿ ಆನ್ ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡುವಂತಿಲ್ಲ. ಆದರೆ ವಾರಕ್ಕೆ ಒಂದು ದಿನ 30 ನಿಮಿಷಗಳಿಗೆ ಮೀರದಂತೆ ಪಾಲಕರೊಂದಿಗೆ ಮಾತ್ರ ಆನ್‌ಲೈನ್ ಸಂವಹನ, ಮಾರ್ಗದರ್ಶನ ನೀಡಬಹುದಾಗಿದೆ.

ಒಂದರಿಂದ 5ನೇ ತರಗತಿ ಮಕ್ಕಳಿಗೆ ದಿನ ಬಿಟ್ಟು ದಿನ ವಾರದಲ್ಲಿ ಗರಿಷ್ಠ 3 ದಿನ 30-45 ನಿಮಿಷಗಳ ಕಾಲ 2 ಅವಧಿಗಳಿಗೆ ಮೀರದಂತೆ ಸಿಂಕ್ರೊನಸ್ (synchronous)
ವಿಧಾನದಲ್ಲಿ ಆನ್‌ಲೈನ್ ಶಿಕ್ಷಣ ನೀಡಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. 6ರಿಂದ 8ನೆ ತರಗತಿ ಮಕ್ಕಳಿಗೆ ವಾರದಲ್ಲಿ 5 ದಿನ ಎರಡು ಅವಧಿಗಳಿಗೆ ಮೀರದಂತೆ 30-45 ನಿಮಿಷ ಆನ್‌ಲೈನ್ ಶಿಕ್ಷಣ ನೀಡಬಹುದು. 9ರಿಂದ 10ನೇ ತರಗತಿ ಮಕ್ಕಳಿಗೆ ವಾರದಲ್ಲಿ 5 ದಿನ 30-45 ನಿಮಿಷಗಳ 4 ಅವಧಿಗಳಿಗೆ ಮೀರದಂತೆ ಆನ್‌ಲೈನ್ ಶಿಕ್ಷ ಣ ನೀಡಬಹುದು ಎಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

ಈ ವ್ಯವಸ್ಥೆಯು ಆನ್‌ಲೈನ್ ಶಿಕ್ಷಣದ ಮಾದರಿ ಸಿದ್ಧಪಡಿಸಲು ಸರ್ಕಾರ ನೇಮಿಸಿರುವ ತಜ್ಞರ ಸಮಿತಿ ನೀಡುವ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರ ಹೊರತರಲಾಗುವ ಅಂತಿಮ ಮಾರ್ಗಸೂಚಿಗಳು ಬರುವವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಆನ್‌ಲೈನ್ ಶಿಕ್ಷಣಕ್ಕಾಗಿ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಬಾರದು. ಇದಕ್ಕೆ ತಗಲುವ ವೆಚ್ಚವನ್ನು ನಿಯಮಿತ ವಾರ್ಷಿಕ ಬೋಧನಾ ಶುಲ್ಕದಿಂದ ಭರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ಭಾರತ ಸರ್ಕಾರದ ಡಿಜಿಟಲೀಕರಣ ಕುರಿತಾದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ರಾಜ್ಯದಲ್ಲಿನ ರಾಜ್ಯ ಪಠ್ಯಕ್ರಮ ಹಾಗೂ ಇನ್ನಿತರ ಪಠ್ಯಕ್ರಮಗಳಾದ ಐಸಿಎಸ್‌ಇ, ಸಿಬಿಎಸ್‌ಇ  ಪಠ್ಯಕ್ರಮ ಸೇರಿದಂತೆ ಎಲ್ಲಾ ಶಾಲೆಗಳು ಎಲ್.ಕೆ.ಜಿಯಿಂದ 10 ನೇ ತರಗತಿಯವರೆಗೆ ಆನ್ ಲೈನ್ ಶಿಕ್ಷಣ ನೀಡುವ ಸಂಬಂಧ ಮಾರ್ಗಸೂಚಿ ಅನುಸರಿಸಲು ಆದೇಶಿಸಲಾಗಿದೆ.

ಆನ್‌ಲೈನ್ ಶಿಕ್ಷಣದ ಹೆಸರಿನಲ್ಲಿ ರಾಜ್ಯದ ಹಲವು ಶಾಲೆಗಳು ಅವೈಜ್ಞಾನಿಕವಾಗಿ ಬೋಧನೆ ನಡೆಸುತ್ತಿರುವ ಕುರಿತು ಸಾಕಷ್ಟು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಆನ್‌ಲೈನ್, ಆಫ್ ಲೈನ್ ಬೋಧನೆಯನ್ನು ಸರ್ಕಾರದ ಮಾರ್ಗಸೂಚಿಗಳು ಬರುವವರೆಗೂ ಮಾಡತಕ್ಕದ್ದಲ್ಲ ಎಂದು ಆದೇಶಿಸಿದೆ.

ಆದರೆ ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಮತ್ತು 6ರಿಂದ 10ನೇ ತರಗತಿವರೆಗೆ ಆನ್‌ಲೈನ್  ಶಿಕ್ಷಣವನ್ನು ವಯೋಮಾನಕ್ಕೆ ಅನುಗುಣವಾಗಿ ವೈಜ್ಞಾನಿಕವಾಗಿ ಅಳವಡಿಸಲು ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ತಜ್ಞರ ಸಮಿತಿ ರಚಿಸಲಾಗಿದೆ. ಈ ಸಮಿತಿ ಪ್ರಸ್ತುತ ಕಾರ್ಯನಿರ್ವ ಹಿಸುತ್ತಿದ್ದು ಎರಡು ಸಭೆಗಳನ್ನು ನಡೆಸಿದೆ.

ಈ ಮಧ್ಯೆ ಕೆಲವರು ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ತಜ್ಞರ ಸಮಿತಿಯು ವರದಿ ನೀಡುವವರೆಗೆ ಸೀಮಿತ ಅವಧಿಯ ಆನ್‌ಲೈನ್ ಶಿಕ್ಷಣ ಒದಗಿಸುವ ಬಗ್ಗೆ ಸರ್ಕಾರ ಪರಿಗಣಿಸಬೇಕು ಎಂಬ ಇಂಗಿತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಾರ್ಗಸೂಚಿ ಹೊರಡಿಸಲಾಗಿದೆ.

Facebook Comments