‘ಆನ್‍ಲೈನ್ ಶಿಕ್ಷಣ ನಿರ್ಬಂಧಿಸಲು ಹೋದರೆ ಶಿಕ್ಷಣ ಸಂಸ್ಥೆಗಳು ಕೋರ್ಟ್‍ಗೆ ಹೋಗ್ತಾರೆ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.22- ಆನ್‍ಲೈನ್ ಶಿಕ್ಷಣ ದಿಂದ ಮಕ್ಕಳ ಕಣ್ಣಿಗೆ ತೊಂದರೆಯಾಗುತ್ತಿದೆ. ನಿಯಮ ಮೀರಿ ಆನ್‍ಲೈನ್ ಶಿಕ್ಷಣ ಮಾಡಬೇಡಿ ಎಂದು ನಿರ್ಬಂಧಿಸಲು ಹೋದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ವಿಧಾನಪರಿಷತ್‍ನ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಯು.ಬಿ.ವೆಂಕಟೇಶ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಜೂನ್‍ನಿಂದ ಆನ್‍ಲೈನ್ ಶಿಕ್ಷಣ ಆರಂಭವಾಗಿದೆ.

ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಪೋಷಕರು ನನ್ನ ಬಳಿ ದೂರು ಹೇಳಿದ್ದರು. ನಾವು ತಜ್ಞರಾದ ಎಂ.ಕೆ.ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಕ್ಷೇತ್ರದ ಪರಿಣತರನ್ನೊಳಗೊಂಡಂತೆ ಸಮಿತಿ ರಚನೆ ಮಾಡಿದ್ದೆವು. ಸಮಿತಿ ವರದಿ ಪ್ರಕಾರ ಎಲ್‍ಕೆಜಿಯಿಂದ 3ನೇ ತರಗತಿವರೆಗೂ ಆನ್‍ಲೈನ್ ಶಿಕ್ಷಣ ಮಾಡಬಾರದು ಎಂದು ಸೂಚನೆ ನೀಡಲಾಯಿತು.

ಆದರೆ ಖಾಸಗಿ ಸಂಸ್ಥೆಗಳು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿವೆ. ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಪಾಲಕರ ಸಮ್ಮುಖದಲ್ಲಿ 30 ನಿಮಿಷಗಳಿಗೆ ಮೀರದಂತೆ ಒಂದು ಮಾರ್ಗದಶನ ನೀಡಬಹುದು. ಅವಧಿಗೆ ಮೀರದಂತೆ ದಿನ ಬಿಟ್ಟು ದಿನ, ವಾರದಲ್ಲಿ ಕನಿಷ್ಟ ಮೂರು ದಿನ ಆನ್‍ಲೈನ್ ಶಿಕ್ಷಣ ನೀಡಬಹುದು. 6ರಿಂದ 8ನೇ ತರಗತಿಯವರೆಗೆ ಎರಡು ಅವಧಿಗೆ ಮೀರದಂತೆ ವಾರದಲ್ಲಿ 5 ದಿನ, 9ರಿಂದ 10ನೇ ತರಗತಿಯವರಿಗೆ 30ರಿಂದ 45 ನಿಮಿಷಗಳ ನಾಲ್ಕು ಅವಧಿಗಳಿಗೆ ಮೀರದಂತೆ ವಾರದಲ್ಲಿ 5 ದಿನ ಆನ್‍ಲೈನ್ ಶಿಕ್ಷಣ ನೀಡಬಹುದು ಎಂದು ಮಾಹಿತಿ ನೀಡಲಾಗಿದೆ.

ಎಲ್‍ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ನೀಡುತ್ತಿರುವುದು ನೋಡಿದರೆ ಆತಂಕವಾಗುತ್ತದೆ. ಇದಕ್ಕೆ ಕಡಿವಾಣ ಹಾಕಲು ಮುಂದಾದರೆ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಿದ್ದಾರೆ ಎಂದರು.

ಆಗ ಯು.ಬಿ.ವೆಂಕಟೇಶ್ ಅವರು, ನಿಮ್ಮ ಇಲಾಖೆಯಿಂದಾಗಿ ಮಕ್ಕಳ ಕಣ್ಣು ಹಾಳಾಗುತ್ತಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದಾಗ ಆರೋಗ್ಯ ಸಚಿವರ ಜೊತೆ ಚರ್ಚಿಸಿ ಕಣ್ಣು ಸೇರಿದಂತೆ ಆರೋಗ್ಯದ ರಕ್ಷಣೆಗೆ ಕ್ರಮ ಕೈಗೊಳ್ಳುವುದಾಗಿ ಸುರೇಶ್ ಭರವಸೆ ನೀಡಿದರು.

Facebook Comments