1ರಿಂದ 5ನೇ ತರಗತಿವರೆಗೆ ಆನ್‍ಲೈನ್ ಕ್ಲಾಸ್ ರದ್ದು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.8- ಸಾರ್ವಜನಿಕ ವಲಯ, ಶಿಕ್ಷಣ ತಜ್ಞರು ಹಾಗೂ ಪೋಷಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ 1ರಿಂದ 5ನೇ ತರಗತಿವರೆಗೆ ಆನ್‍ಲೈನ್ ಶಿಕ್ಷಣ ನೀಡುವುದನ್ನು ಸರ್ಕಾರ ರದ್ದುಪಡಿಸಲು ಮುಂದಾಗಿದೆ.  ಆನ್‍ಲೈನ್ ಮೂಲಕ ಎಳೆಯ ವಯಸ್ಸಿನ ಮಕ್ಕಳಿಗೆ ಶಿಕ್ಷಣ ನೀಡಿದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದರು.

ಹೀಗಾಗಿ ಸರ್ಕಾರ ಒಂದರಿಂದ 5ನೇ ತರಗತಿವರೆಗೆ ಸರ್ಕಾರಿ, ಖಾಸಗಿ, ಅನುದಾನ ಹಾಗೂ ಅನುದಾನರಹಿತ ಸೇರಿದಂತೆ ಯಾವುದೇ ಶಾಲೆಗಳಲ್ಲಿ ಈ ಹಂತದ ಮಕ್ಕಳಿಗೆ ಆನ್‍ಲೈನ್ ಮೂಲಕ ಶಿಕ್ಷಣ ನೀಡುವುದನ್ನು ರದ್ದುಪಡಿಸಿ ಅಧಿಕೃತ ಆದೇಶ ಹೊರಡಿಸಲಿದೆ.

ಈ ಸಂಬಂಧ ಇಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಂಜೆ ಅಥವಾ ನಾಳೆಯೊಳಗೆ ಸರ್ಕಾರದಿಂದ ಆದೇಶ ಹೊರಡಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಕುರಿತು ಸರ್ಕಾರ ನಿಮ್ಹಾನ್ಸ್ ಆಸ್ಪತ್ರೆಯ ತಜ್ಞರಿಂದ ವರದಿ ನೀಡುವಂತೆ ಮನವಿ ಮಾಡಿತ್ತು. ಇದೀಗ ನಿಮ್ಹಾನ್ಸ್‍ನ ನುರಿತ ಮಕ್ಕಳ ತಜ್ಞರ ತಂಡವೊಂದು ಅಧ್ಯಯನ ನಡೆಸಿ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ವರದಿ ನೀಡಿದೆ.

ಹತ್ತು ವರ್ಷದೊಳಗಿನ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ನೀಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅತಿಯಾದ ಕಂಪ್ಯೂಟರ್ ಬಳಕೆ, ಇಡೀ ಏಕಾಗ್ರತೆಯನ್ನು ಕಂಪ್ಯೂಟರ್ ಮೇಲೆ ಕೇಂದ್ರೀಕರಿಸುವುದರಿಂದ ಕಣ್ಣಿನ ದೃಷ್ಟಿಯ ಮೇಲೂ ಪರಿಣಾಮ ಬೀರುವ ಸಂಭವವಿದೆ. ಹೀಗಾಗಿ ಆನ್‍ಲೈನ್ ಶಿಕ್ಷಣ ಈ ಹಂತದ ಮಕ್ಕಳಿಗೆ ಸರಿಯಲ್ಲ ಎಂದು ಆಕ್ಷೇಪಿಸಿದೆ.

6ನೇ ತರಗತಿ ಮೇಲ್ಪಟ್ಟ ಮಕ್ಕಳಿಗೆ ದಿನಕ್ಕೆ 30 ನಿಮಿಷದಿಂದ ಒಂದು ಗಂಟೆಯವರೆಗೆ ಮಾತ್ರ ಆನ್‍ಲೈನ್‍ನಲ್ಲಿ ಶಿಕ್ಷಣ ನೀಡುವುದರಿಂದ ಅಂತಹ ಪರಿಣಾಮ ಉಂಟಾಗುವುದಿಲ್ಲ ಎಂದು ಸರ್ಕಾರಕ್ಕೆ ವರದಿ ಕೊಟ್ಟಿದೆ. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈ ಶೈಕ್ಷಣಿಕ ಅವಧಿಯಲ್ಲಿ 1ರಿಂದ 5ನೇ ತರಗತಿ ಮಕ್ಕಳಿಗೆ ಆನ್‍ಲೈನ್ ಶಿಕ್ಷಣವನ್ನು ಯಾವುದೇ ಶಾಲೆಗಳು ನೀಡದಂತೆ ಆದೇಶ ಹೊರಡಿಸಲಿದೆ.

ಒಂದು ವೇಳೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಯಾವುದಾದರೂ ಶಾಲೆಗಳು ನಿಯಮ ಬಾಹಿರವಾಗಿ ಆನ್‍ಲೈನ್ ಶಿಕ್ಷಣ ನೀಡಿದರೆ ಅಂತಹ ಶಾಲೆಗಳನ್ನು ಕಪ್ಪುಪಟ್ಟಿಗೆ ಸೇರಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಕೋವಿಡ್ ಪರಿಣಾಮ ಲಾಕ್‍ಡೌನ್ ಜಾರಿ ಮಾಡಲಾಯಿತು. ಇದರಿಂದ ಎಲ್ಲ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ದಗೊಂಡವು, ಶಾಲಾಕಾಲೇಜುಗಳು ಸಹ ಬಂದ್ ಆದವು.

1ರಿಂದ 9ನೇ ತರಗತಿವರೆಗೆ ಪರೀಕ್ಷೆಯನ್ನೇ ನಡೆಸದೆ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲಾಗಿದೆ. ಇದೀಗ ಜೂ.25ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾಗಲಿದೆ. ನಿಯಮದ ಪ್ರಕಾರ ಜೂನ್ ತಿಂಗಳಿನಿಂದಲೇ ಶೈಕ್ಷಣಿಕ ಅವಧಿ ಆರಂಭವಾಗಬೇಕಿತ್ತು. ಆದರೆ ರಾಜ್ಯದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಣಾಮ ಶಿಕ್ಷಣ ಸಂಸ್ಥೆಗಳನ್ನು ಸದ್ಯಕ್ಕೆ ಆರಂಭಿಸದಿರಲು ತೀರ್ಮಾನಿಸಲಾಗಿದೆ.

ಜುಲೈ ತಿಂಗಳಿನಿಂದ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ಸರ್ಕಾರ ತೆರೆಮರೆಯಲ್ಲಿ ಕಸರತ್ತು ನಡೆಸಿತ್ತು. ಆದರೆ ಸಾರ್ವಜನಿಕ ವಲಯ ಮತ್ತು ಪೆÇೀಷಕರು ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.  ಈ ಬೆಳವಣಿಗೆಗಳ ನಡುವೆಯೇ ಆಗಸ್ಟ್ ತಿಂಗಳವರೆಗೂ ಯಾವುದೇ ಶಾಲಾಕಾಲೇಜುಗಳನ್ನು ತೆರೆಯಬಾರದೆಂದು ಕೇಂದ್ರ ಸರ್ಕಾರ ನಿನ್ನೆಯಷ್ಟೇ ಸೂಚನೆ ಕೊಟ್ಟಿದೆ. ಹೀಗಾಗಿ ರಾಜ್ಯ ಸರ್ಕಾರದ ಮುಂದಿನ ನಡೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

Facebook Comments