ಆನ್‍ಲೈನ್ ಪ್ಯಾಕರ್ಸ್-ಮೂವರ್ಸ್ ಹೆಸರಲ್ಲಿ ವಂಚನೆ ಮಾಡುತ್ತಿದ್ದ ಮೂವರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.4- ಆನ್‍ಲೈನ್ ಮೂಲಕ ಪ್ಯಾಕರ್ಸ್ ಮತ್ತು ಮೂವರ್ಸ್ ಎಂಬ ವೆಬ್‍ಸೈಟ್‍ಗಳಲ್ಲಿ ಗ್ರಾಹಕರ ದ್ವಿಚಕ್ರ ವಾಹನ ಮತ್ತು ಕಾರುಗಳನ್ನು ಶಿಫ್ಟಿಂಗ್ ಮಾಡುತ್ತೇವೆ ಎಂದು ಹೇಳಿ ಹಣ ಪಡೆದು ವಂಚನೆ ಮಾಡಿ ಹೆಚ್ಚಿನ ಹಣಕ್ಕೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಮೂವರನ್ನು ವೈಟ್‍ಫೀಲ್ಡ್ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾದನಾಯಕನಹಳ್ಳಿ ಮಾಕಳಿ ಗ್ರಾಮದ ಶಿವಕುಮಾರ (20), ಸಂದೀಪ್ (21) ಮತ್ತು ಪ್ರದೀಪ್ (19) ಬಂಧಿತ ಆರೋಪಿಗಳು.

ತಲೆಮರೆಸಿಕೊಂಡಿರುವ ಹರಿಯಾಣ ಮೂಲದ ದೀಪಕ್ ಶರ್ಮ ಮತ್ತು ರಾಕೇಶ್, ಟಿಂಕು ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳಿಂದ ಹೋಂಡಾ ಸಿಟಿ ಕಾರು, ಹೋಂಡಾ ಯುನಿಕಾರ್ ಬೈಕ್, ಹೋಂಡಾ ಆಕ್ಟೀವಾ, ವಿಆರ್‍ಎಲ್ ಪ್ಯಾಕರ್ಸ್ ಮತ್ತು ಮೂವರ್ಸ್ ಬಿಲ್‍ಬುಕ್, ಡಿಫೆನ್ಸ್ ಲಾಜಿಸ್ಟಿಕ್ ಪ್ಯಾಕರ್ಸ್ ಅಂಡ್ ಮೂವರ್ಸ್ ಬಿಲ್‍ಬುಕ್, ಎರಡು ಜಸ್ಟ್ ಗತಿ ಪ್ಯಾಕರ್ಸ್ ಅಂಡ್ ಮೂವರ್ಸ್ ಬಿಲ್‍ಬುಕ್ ಮತ್ತು ಮೂರು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಬಂಧನದಿಂದ ವೈಟ್‍ಫೀಲ್ಟ್ ಸೆಇಎನ್ ಪೊಲೀಸ್ ಠಾಣೆಯ 4 ಪ್ರಕರಣಗಳು ಮತ್ತು ಮಾರತ್ತಹಳ್ಳಿ ಠಾಣೆಯ 1 ಪ್ರಕರಣ ಪತ್ತೆಯಾದಂತಾಗಿದೆ. ಲಾಜಿಸ್ಟಿಕ್ ಆರ್ಟ್ ಎಂಬ ವೆಬ್‍ಸೈಟ್‍ನಲ್ಲಿ ವಾಹನಗಳು ಮತ್ತು ಮನೆಯ ವಸ್ತುಗಳನ್ನು ಸಾಗಿಸುವ ಕಂಪೆನಿಗಳಾದ ಅಗರ್ವಾಲ್ ಕಾರ್ ಮೂವರ್ಸ್ ಅಂಡ್ ಪ್ಯಾಕರ್ಸ್, ವಿಆರ್‍ಎಲ್ ಪ್ಯಾಕರ್ಸ್ ಮತ್ತು ಮೂವರ್ಸ್, ಗತಿ ಪ್ಯಾಕರ್ಸ್ ಅಂಡ್ ಮೂವರ್ಸ್ ಎಂಬ ಕಂಪೆನಿಗಳಲ್ಲಿ ಗ್ರಾಹಕರು ನೀಡಿರುವ ದ್ವಿಚಕ್ರ ವಾಹನ ಮತ್ತು ಕಾರುಗಳನ್ನು ಗುರಿಯಾಗಿರಿಸಿಕೊಂಡು ಆರೋಪಿಗಳು ಗ್ರಾಹಕರ ಫೋನ್ ನಂಬರ್ ಸಂಪರ್ಕಿಸುತ್ತಿದ್ದರು.

ಪಾರ್ಸಲ್ ಮೂಲಕ ತಮ್ಮ ವಸ್ತುಗಳನ್ನು ಡಿಲೆವರಿ ಮಾಡಿರುವುದಾಗಿ ನಂಬಿಸಿ ಆನ್‍ಲೈನ್ ಮೂಲಕ ಹಣ ವರ್ಗಾಯಿಸಿಕೊಳ್ಳುತ್ತಿದ್ದರು. ಅಲ್ಲದೆ, ಸ್ವಂತವಾಗಿ ತಯಾರಿಸಿದ್ದ ನಕಲಿ ಡಿಲೆವರಿ ಬಿಲ್‍ಗಳನ್ನು ಸೃಷ್ಟಿಸಿಕೊಂಡು ನಕಲಿ ಬಿಲ್‍ಅನ್ನು ಗ್ರಾeಹಕರಿಗೆ ನೀಡಿ ಬೈಕ್ ಮತ್ತು ಕಾರುಗಳನ್ನು ಗ್ರಾಹಕರಿಂದ ಪಡೆದು ಡಿಲೆವರಿ ಮಾಡುವುದಾಗಿ ನಂಬಿಸುತ್ತಿದ್ದರು.

ನಂತರ ವಾಹನಗಳನ್ನು ಡಿಲೆವರಿ ಮಾಡದೆ ಹೆಚ್ಚಿನ ಹಣಕ್ಕಾಗಿ ಫೋನ್ ಮೂಲಕ ಗ್ರಾಹಕರಿಗೆ ಬೆದರಿಕೆ ಹಾಕಿ ಹಣ ದೋಚುತ್ತಿದ್ದರು. ಇದೀಗ ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮೂವರ ಬಂಧನಕ್ಕಾಗಿ ಪೊಲೀಸರು ವ್ಯಾಪಕ ಶೋಧ ಕೈಗೊಂಡಿದ್ದಾರೆ.

Facebook Comments