ಕ್ಲೌಡ್ ಬಿಗ್ ಡಾಟಾ ಸಂಸ್ಥೆ ಹೆಸರಿನಲ್ಲಿ ಲಕ್ಷಾಂತರ ರೂ. ಆನ್ ಲೈನ್ ದೋಖಾ

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ನ.27- ಉದ್ಯೋಗದ ಆಸೆ ತೋರಿಸಿ ಕಂಪೆನಿಯ ಉತ್ಪನ್ನಗಳನ್ನು ಖರೀದಿಸಿದರೆ ಕಮಿಷನ್ ನೀಡುವುದಾಗಿ ನಂಬಿಸಿ ಆನ್‍ಲೈನ್‍ನಲ್ಲಿ ಲಕ್ಷಾಂತರ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಆಂಜನೇಯ ಬಡಾವಣೆಯ 5ನೆ ಕ್ರಾಸ್‍ನ ಅರ್ಜುನ್ ರಾಜ ವಂಚನೆಗೊಳಗಾದ ವ್ಯಕ್ತಿ.ಕಳೆದ 8ರಂದು ಮೊಬೈಲ್ ಸಂಖ್ಯೆಗೆ ಕ್ಲೌಡ್ ಬಿಗ್ ಡಾಟಾ ಟೆಕ್ನಾಲಜಿ ಕಂಪೆನಿಯಿಂದ ಸಂದೇಶ ಬಂದಿದ್ದು, ಉದ್ಯೋಗ ಮತ್ತು ವೇತನ ನೀಡುವುದಾಗಿ ನಂಬಿಸಿದ್ದಾರೆ.

ನಂತರ ಬಂದ ಲಿಂಕ್‍ಅನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದು, ಕಂಪೆನಿಯ ವಿವಿಧ ಉತ್ಪನ್ನಗಳನ್ನು ಖರೀದಿಸಿದಲ್ಲಿ ಕಮಿಷನ್ ರೀತಿಯಲ್ಲಿ ಹಣ ಹಿಂದಿರುಗಿಸುವುದಾಗಿ ತಿಳಿಸಿದ್ದಾರೆ. ಇದನ್ನು ನಂಬಿ ಮೊದಲಿಗೆ 140ರೂ.ಗಳನ್ನು ಆನ್‍ಲೈನ್ ಮೂಲಕ ಕಳುಹಿಸಿದ್ದು, ಅದಕ್ಕೆ 320ರೂ.ಗಳನ್ನು ಕಮಿಷನ್ ರೂಪದಲ್ಲಿ ಕಳುಹಿಸಿದ್ದಾರೆ.

ಹಣದ ಆಸೆಗೆ ಬಿದ್ದ ಅರ್ಜುನ್ ನಂತರ ಬೇರೆ ಉತ್ಪನ್ನಗಳನ್ನು ಖರೀದಿಸಿದರೆ ಹೆಚ್ಚಿನ ಕಮಿಷನ್ ಬರುತ್ತದೆ ಎಂದು ನಂಬಿ ನ.19ರ ವರೆಗೂ ಹಂತ ಹಂತವಾಗಿ ಆನ್‍ಲೈನ್ ಮೂಲಕ ಒಟ್ಟು 1,13,531ರೂ. ಕಳುಹಿಸಿದರೂ ಕಮಿಷನ್ ಹಣ ಬಾರದಿದ್ದಾಗ ಇನ್ನು ಮುಂದೆ ನಾನು ಹಣ ಕಳುಹಿಸುವುದಿಲ್ಲ ಎಂದು ತಿಳಿಸಿದ್ದು, ಹಣವನ್ನು ಹಿಂದಿರುಗಿಸಲು ಟ್ಯಾಕ್ಸ್ ರೂಪದಲ್ಲಿ 20 ಸಾವಿರ ಕಳುಹಿಸಲು ವಂಚಕರು ತಿಳಿಸಿದ್ದಾರೆ.

ಇದರಿಂದ ಅನುಮಾನಗೊಂಡ ಅರ್ಜುನ್ ದೂರ ಸರಿದಿದ್ದು, ಕಮಿಷನ್ ಆಸೆಗಾಗಿ ಒಂದು ಲಕ್ಷ ಹಣ ಕಳೆದುಕೊಂಡು ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Facebook Comments