ರಾಜ್ಯದಲ್ಲಿ ಆನ್‍ಲೈನ್ ಗೇಮ್ಸ್ ಜೂಜಾಟ ನಿಷೇಧ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.17-ರಾಜ್ಯದಲ್ಲಿ ಇನ್ನು ಮುಂದೆ ಆನ್‍ಲೈನ್ ಗೇಮ್‍ಗಳ ಮೂಲಕ ಜೂಜಾಟದಲ್ಲಿ ತೊಡಗುವುದನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ. ವಿಧಾನಸಭೆಯಲ್ಲಿಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಕರ್ನಾಟಕ ಪೊಲೀಸ್(ತಿದ್ದುಪಡಿ ವಿಧೇಯಕ 2020-21) ಮಂಡಿಸಿದರು.

ಈ ವಿಧೇಯಕದ ಪ್ರಕಾರ ರಾಜ್ಯದ ಒಳಗೆ ಅಥವಾ ಹೊರಗೆ ರೇಸ್‍ಕೋರ್ಸ್‍ನಲ್ಲಿ ಕುದುರೆ ಓಟದ ಪಂದ್ಯಾವಳಿಗಳ ಮೇಲೆ ಬಾಜಿ ಕಟ್ಟುವಿಕೆ ಹೊರತುಪಡಿಸಿ ಆನ್‍ಲೈನ್ ಪಾವತಿ ಮಾಡಿ ವಚ್ರ್ಯುವಲ್ ಕರೆನ್ಸಿ, ಎಲೆಕ್ಟ್ರಾನಿಕ್ ಕರೆನ್ಸಿ ಸೇರಿದಂತೆ ಯಾವುದೇ ಆನ್‍ಲೈನ್ ಗೇಮ್‍ಗಳಲ್ಲಿ ಹಣ ಹೂಡುವುದನ್ನು ಇಲ್ಲವೆ ಜೂಜಾಡುವುದನ್ನು ಸರ್ಕಾರ ನಿಷೇಧಿಸಿದೆ.

ಒಂದು ವೇಳೆ ಯಾರಾದರೂ ಆನ್‍ಲೈನ್‍ನಲ್ಲಿ ತೊಡಗಿಕೊಂಡಿರುವುದು ಕಂಡುಬಂದರೆ ಅಂಥವರ ಮೇಲೆ ಒಂದು ವರ್ಷದ ಬದಲಿಗೆ ಮೂರು ವರ್ಷ ಹಾಗೂ ಒಂದು ಸಾವಿರಕ್ಕೆ ಬದಲಾಗಿ ಒಂದು ಲಕ್ಷ ದಂಡವನ್ನು ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಜೂಜಾಡುವಿಕೆಯ ಉಪಕರಣಗಳ ಸಾಧನಗಳ ಮೂಲಕ ಕಂಪ್ಯೂಟರ್, ಸಿಸ್ಟಮ್, ಮೊಬೈಲ್ ಆ್ಯಪ್, ಇಂಟರ್‍ನೆಟ್, ಸಮೂಹ ಸಾಧನ, ವಿದ್ಯುನ್ಮಾನ ಅನ್ವಯಿಕೆ, ತಂತ್ರಾಂಶ, ವಚ್ರ್ಯುವಲ್ ಮೂಲಕ ಆಡುವ ಎಲ್ಲ ಪಂದ್ಯಗಳು ನಿಷೇಧಕ್ಕೊಳಪಟ್ಟಿವೆ.

ಆನ್‍ಲೈನ್ ಗೇಮ್‍ಗಳಿಗೆ ಪ್ರೇರೇಪಿಸುವುದು ಇಲ್ಲವೇ ಅದಕ್ಕೆ ಸಹಕರಿಸಿದವರಿಗೆ ಒಂದು ತಿಂಗಳ ಬದಲಿಗೆ 6 ತಿಂಗಳು ಜೈಲುಶಿಕ್ಷೆ ಹಾಗೂ 500 ರೂ. ಬದಲಿಗೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ.ಆನ್‍ಲೈನ್ ಗೇಮ್ ನಡೆಸುವವರು ಸ್ಥಳದಲ್ಲೇ ಸಿಕ್ಕಿಹಾಕಿಕೊಂಡರೆ 3 ತಿಂಗಳ ಬದಲಿಗೆ ಒಂದು ವರ್ಷ ಜೈಲು ಶಿಕ್ಷೆ, 200 ರೂ. ಬದಲಿಗೆ 20 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಯಾವುದೇ ಗಾಡಿ, ಬಂಡಿ, ವ್ಯಾನು, ಕುದುರೆ ಗಾಡಿ, ಟ್ರಕ್, ಕೈಗಾಡಿ, ವಾಹನ, ಬೈಸಿಕಲ್, ತ್ರಿಚಕ್ರ, ರಿಕ್ಷಾ, ಮೋಟಾರು, ವಿಮಾನ ಮತ್ತಿತರ ಕಡೆ ಜೂಜಾಟಗಳನ್ನು ನಿಷೇಧಿಸಲಾಗಿದೆ.

Facebook Comments