ಮನೆ ಬಾಗಿಲಿಗೆ ಬರಲಿದೆ ಮಾಂಸ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.15-ಗ್ರಾಹಕರ ಮನೆ ಬಾಗಿಲಿಗೆ ಕುರಿ ಮತ್ತು ಮೇಕೆಯ ಉತ್ಕøಷ್ಟ ಗುಣಮಟ್ಟದ ಮಾಂಸವನ್ನು ಪೂರೈಸುವ ಡಯಲ್ ಫಾರ್ ಮಟನ್ ಎಂಬ ಮೊಬೈಲ್ ಆ್ಯಪ್‍ನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ರಾಜ್ಯ ಕುರಿ ಮತ್ತು ಮೇಕೆ ಸಾಗಾಣಿಕೆದಾರರ ಸಂಘದ ಅಧ್ಯಕ್ಷ ಸಿ.ವಿ.ಲೋಕೇಶ್‍ಗೌಡ ತಿಳಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಉತ್ತರ ಭಾಗದಲ್ಲಿ ಮುಂದಿನ ವಾರದಿಂದ ಗ್ರಾಹಕರ ಮನೆ ಬಾಗಿಲಿಗೆ ಮಾಂಸ ಪೂರೈಕೆ ಮಾಡಲಾಗುತ್ತದೆ. ಸ್ಥಳೀಯ ಪಶುವೈದ್ಯರು ಪ್ರಮಾಣೀಕರಿಸಿದ ಮಾಂಸವನ್ನು ಮಾರುಕಟ್ಟೆ ದರದಲ್ಲೇ ಒದಗಿಸಲು ನಿರ್ಧರಿಸಲಾಗಿದ್ದು, ಅರ್ಧ ಕೆಜಿ ಮೇಲ್ಪಟ್ಟು ಮಾಂಸವನ್ನು ಪಡೆಯಬಹುದಾಗಿದೆ.

ಈಗಾಗಲೇ ಪ್ರಾಯೋಗಿಕವಾಗಿ ಇದನ್ನು ಜಾರಿಗೆ ತರಲಾಗಿದೆ ಎಂದರು. ಮುಂದಿನ ಒಂದು ತಿಂಗಳಲ್ಲಿ ರಾಜ್ಯದ ಆರು ಜಿಲ್ಲೆಗಳಲ್ಲಿ ಕುರಿ-ಮೇಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಸಂಘದ ಸದಸ್ಯರಿಗೆ ವೈಜ್ಞಾನಿಕ ಬೆಲೆ ನೀಡುವುದರ ಜೊತೆಗೆ ಉತ್ಕøಷ್ಟ ಮಾಂಸವನ್ನು ಜನರಿಗೆ ಒದಗಿಸಲಾಗುವುದು.

ಚಿತ್ರದುರ್ಗ, ಬಾಗಲಕೋಟೆ, ಚಿಕ್ಕಬಳ್ಳಾಪುರದಲ್ಲಿ ಈ ವಧಾಗಾರಗಳನ್ನು ತೆರೆಯಲಾಗುವುದು ಎಂದರು. ಸಾಗಾಣಿಕೆದಾರರಿಗೆ ವೈಜ್ಞಾನಿಕ ಬೆಲೆ ದೊರೆಯದೆ ದಲ್ಲಾಳಿಗಳು ಹಾಗೂ ಮಧ್ಯವರ್ತಿಗಳ ಪಾಲಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಸಂಘದ ವತಿಯಿಂದ ಹೊಸ ಮಾರುಕಟ್ಟೆ ತೆರೆಯಲಾಗುತ್ತಿದೆ ಎಂದರು.

ರಾಜ್ಯದ 24 ಜಿಲ್ಲೆಗಳಲ್ಲಿ ಕುರಿ-ಮೇಕೆ ಸಾಕಾಣಿಕೆ ಮಾಡಲಾಗುತ್ತಿದ್ದು, 15 ಲಕ್ಷ ಸಾಕಾಣಿಕೆದಾರರಿದ್ದು, 97 ಲಕ್ಷ ಕುರಿ ಹಾಗೂ 47 ಲಕ್ಷ ಮೇಕೆಗಳಿವೆ. ಆರೋಗ್ಯವಂತ ವ್ಯಕ್ತಿಗೆ ವಾರ್ಷಿಕ 11 ಕೆಜಿ ಮಾಂಸ ಬೇಕಾಗಿದ್ದು, ಈಗ ಆರು ಕೆಜಿ ಮಾತ್ರ ಬಳಕೆಯಾಗುತ್ತಿದೆ.

ಮುಂದಿನ ದಿನಗಳಲ್ಲಿ ಮಾಂಸಕ್ಕೆ ಉತ್ತಮ ಬೇಡಿಕೆಯಿರುವುದರಿಂದ ಗ್ರಾಮೀಣ ಭಾಗದ ಹೆಚ್ಚು ಜನರು ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಜೀವಂತ ಕುರಿ ಅಥವಾ ಮೇಕೆಯಲ್ಲಿ ಶೇ.60ರಷ್ಟು ಮಾಂಸವಿರುತ್ತದೆ. ಅದಕ್ಕೆ ವೈಜ್ಞಾನಿಕ ಬೆಲೆ ಒದಗಿಸಿ ಸಾಕಾಣಿಕೆದಾರರ ಹಿತ ಕಾಪಾಡಲು ಸಂಘ ನಿರಂತರ ಪ್ರಯತ್ನ ಮಾಡುತ್ತಿದೆ.

ಸಂಘದ ವತಿಯಿಂದ ಸಾಕಾಣಿಕೆದಾರರಿಗೆ ಸಾಲಸೌಲಭ್ಯವೂ ದೊರೆಯಲಿದೆ ಎಂದರು.
ಸಂಘದ ನಿರ್ದೇಶಕರಾದ ಎಚ್.ಕೆ.ತಮ್ಮಯ್ಯ, ಧನರಾಜ್ ತಳಪಲ್ಲಿ, ಮಹಾಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin