ಬಿಜೆಪಿಯಿಂದ ಮತ್ತೆ ಆಪರೇಷನ್ ಕಮಲ, ಕಾಂಗ್ರೆಸ್-ಜೆಡಿಎಸ್ ವಿಲವಿಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.7-ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದರೂ ಆಪರೇಷನ್ ರಾಜಕಾರಣ ಮುಕ್ತಾಯವಾಗಿಲ್ಲ. ಬಿಜೆಪಿ ಈಗ ಎರಡನೇ ಹಂತದ ಆಪರೇಷನ್‍ಗೆ ಕೈ ಹಾಕಿದೆ. ಈ ಬಾರಿ ಎಷ್ಟು ಶಾಸಕರನ್ನು ಕರೆದು ಗುಡ್ಡೆ ಹಾಕಿಕೊಳ್ಳು ತ್ತಾರೋ ಎಂಬ ಭೀತಿ ಕಾಂಗ್ರೆಸ್ ಜೆಡಿಎಸ್ ನಾಯಕರಲ್ಲಿ ಆವರಿಸಿದೆ.

ಈ ಮಧ್ಯೆ ಬಿಜೆಪಿಯಲ್ಲೇ ಆಂತರಿಕವಾಗಿ ಸಿಎಂ ಯಡಿಯೂರಪ್ಪ ವಿರುದ್ಧ ಆಪರೇಷನ್ ನಡೆಯುತ್ತಿರೋದು ಈ ಆಪರೇಷನ್ ಮುಗಿದ ಮೇಲೆ ರಾಜಕೀಯದಲ್ಲಿ ಯಾರ ಜೀವ ಉಳಿಯುತ್ತೋ ಯಾರ ಜೀವ ಹೋಗುತ್ತೊ ಎಂಬ ಕುತೂಹಲ ಮೂಡಿದೆ. ಅತ್ತ ಪುತ್ರನ ರಾಜಕೀಯ ಭವಿಷ್ಯ ಕಟ್ಟಲು ಮುಂದಾಗಿರೋ ಜಿಟಿ ದೇವೇಗೌಡ ಅವರ ಬಿಜೆಪಿ ಮೇಲಿನ ಒಲವು ದಿನದಿಂದ ದಿನಕ್ಕೆ ಇಮ್ಮಡಿಯಾಗುತ್ತಿದೆ. ಇದು ಎರಡನೇ ಸುತ್ತಿನ ಆಪರೇಷನ್ ಕಮಲದ ಸೂಚನೆ ನೀಡುತ್ತಿದೆ. ಇನ್ನು ಬಿಜೆಪಿಯೊಳಗೆ ತೆರೆಮರೆಯಲ್ಲಿ ನಡೆಯುತ್ತಿರುವ ಆಂತರಿಕ ಆಪರೇಷನ್ ರಣ ರೋಚಕ ಅಧ್ಯಾಯಕ್ಕೆ ರಾಜ್ಯದ ಜನರು ಸಾಕ್ಷಿಯಾಗುವ ಸೂಚನೆ ನೀಡುತ್ತಿದೆ.

ಹೌದು, ಯಡಿಯೂರಪ್ಪ ರಾಜ್ಯದ ಸಿಎಂ ಆಗಿದ್ದರೂ ಅವರ ಬೆನ್ನಿಗೆ ನಿಲ್ಲಬೇಕಿದ್ದ ಹೈಕಮಾಂಡ್ ನಾಯಕರು ಕೈಕೊಟ್ಟಿದ್ದಾರೆ. ಸ್ಪೀಕರ್ ಆಯ್ಕೆ, ಸಚಿವ ಸಂಪುಟ, ರಾಜ್ಯಾಧ್ಯಕ್ಷ, ಉಪಮುಖ್ಯಮಂತ್ರಿ ನೇಮಕ ಹೀಗೆ ಎಲ್ಲ ಹಂತದಲ್ಲೂ ಯಡಿಯೂರಪ್ಪರನ್ನು ಹೈಕಮಾಂಡ್ ಕಟ್ಟಿಹಾಕಿದೆ. ಬಿಎಸ್‍ವೈ ಅವರನ್ನು ಮುಖ್ಯಮಂತ್ರಿಯಾಗಿ ನೋಡಲು ಬಿಜೆಪಿ ಹೈಕಮಾಂಡ್ ನಾಯಕರ ಕಣ್ಣಿಗೆ ಕಿರಿಕಿರಿಯಾಗುತ್ತಿದೆ. ಆದರೆ ಅವರನ್ನು ಕಿತ್ತು ಹಾಕಿದರೆ ಲಿಂಗಾಯತರ ಕೋಪಕ್ಕೆ ಗುರಿಯಾದರೆ ತಮ್ಮ ಬುಡ ಅಲುಗಾಡುವ ಭಯ ಕಾಡುತ್ತಿದೆ. ಹೀಗಾಗಿ ಮಗ್ಗಲು ಮಳ್ಳಾಗಿರೊ ಯಡಿಯೂರಪ್ಪ ಅವರನ್ನು ನಯವಾಗಿ ಕಿತ್ತು ಹಾಕುವ ಪ್ರಯತ್ನ ನಡೆಯುತ್ತಿದೆ.

ಬಿಜೆಪಿಯಲ್ಲಿ ಈಗಾಗಲೇ ಖಾತೆ ಹಂಚಿಕೆ, ಉಪ ಮುಖ್ಯಮಂತ್ರಿ ಅಯ್ಕೆಯಿಂದ ನಾಯಕರ ಮನದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಹೀಗಾಗಿ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಕಟೀಲ್ ಅವರು ನಾಯಕರ ಸರಣಿ ಭೇಟಿ ಮಾಡಿ ಸಮಾಧಾನ ಮಾಡಿ ವಿಶ್ವಾಸ ಗೆಲ್ಲುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆ ಮೂಲಕ ಪಕ್ಷ ನಿಷ್ಠರ ಪಡೆ ಕಟ್ಟುವತ್ತ ಹೆಜ್ಜೆ ಹಾಕಿದ್ದಾರೆ.

ಯಡಿಯೂರಪ್ಪ ನಿಷ್ಠರನ್ನು ಪಕ್ಷದಿಂದ ದೂರ ಇಟ್ಟರೆ, ಯಡಿಯೂರಪ್ಪ ಏಕಾಂಗಿ ಆಗ್ತಾರೆ. ಯಾವುದೇ ನಿರ್ಧಾರ ಕೈಗೊಂಡರೂ ಯಡಿಯೂರಪ್ಪ ಇಲ್ಲ ಎನ್ನಲು ಸಾಧ್ಯವಿಲ್ಲ ಎಂದು ಹೊಸ ಆಪರೇಷನ್‍ಗೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಪಕ್ಷ ನಿಷ್ಠರು. ಆರ್‍ಎಸ್‍ಎಸ್ ಸಂಘಟನೆ ಏನೇ ಹೇಳಿದರೂ ಮರುಮಾತಿಲ್ಲದೆ ಪಾಲಿಸುತ್ತಿದ್ದರು. ಪರಿಸ್ಥಿತಿ ಹೀಗಿರುವಾಗ ಕೆಲವೊಂದು ನಾಯಕರು ಅನಂತ್ ಕುಮಾರ್ ಜೊತೆಗೆ ಗುರುತಿಸಿಕೊಂಡಿದ್ದರು.

ಇದರಲ್ಲಿ ಸಚಿವ ಆರ್ ಅಶೋಕ್ ಕೂಡ ಒಬ್ಬರು. ಕಂದಾಯ ಸಚಿವರಾಗಿರುವ ಆರ್. ಅಶೋಕ್, ಡಿಸಿಎಂ ಸ್ಥಾನಕ್ಕೆ ಅಶ್ವಥ್ ನಾರಾಯಣ್‍ರನ್ನು ಕೂರಿಸಿದ್ದಕ್ಕೆ ಮುನಿಸಿಕೊಂಡಿದ್ದಾರೆ. ಬಿಎಸ್‍ವೈ ಕಾರ್ಯಕ್ರಮದಲ್ಲಿ ಗೈರು ಹಾಜರಾಗಿದ್ದರು. ನಿನ್ನೆ ರಾತ್ರಿ ಕಟೀಲ್ ಅವರು ಸಚಿವ ಅಶೋಕ್ ನಿವಾಸಕ್ಕೆ ಭೇಟಿ ಮಾಡಿ ಚರ್ಚೆ ನಡೆಸಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆ ಬಳಿಕ ಆರ್. ಅಶೋಕ್ ಜೊತೆಯಲ್ಲೇ ತೆರಳಿದ ನಳೀನ್ ಕುಮಾರ್ ಕಟೀಲ್,ಬೆಂಗಳೂರಿನ ಜಯನಗರದಲ್ಲಿರುವ ಅಶೋಕ್ ನಿವಾಸಕ್ಕೆ ಭೇಟಿ ನೀಡಿ ಮಹತ್ವದ ಮಾತುಕತೆನಡೆಸಿದರು. ಬಳಿಕ ಬೆಂಗಳೂರಿನ ಬಸವನಗುಡಿಯಲ್ಲಿರುವ ತೇಜಸ್ವಿನಿ ಅನಂತ್ ಕುಮಾರ್ ನಿವಾಸಕ್ಕೂ ಭೇಟಿ ನೀಡಿದರು. ಬಳಿಕ ಇಂದು ಬೆಳಗ್ಗೆ ಮೈಸೂರು ಉಸ್ತುವಾರಿ ಸಚಿವ ವಿ ಸೋಮಣ್ಣ ನಿವಾಸಕ್ಕೂ ಭೇಟಿ ನೀಡಿ ಮಾತುಕತೆ ನಡೆಸಿದರು.
ಒಟ್ಟಾರೆ ಈ ಸರಣಿ ಬೆಳವಣಿಗೆಗಳು ಪಕ್ಷದೊಳಗೆ ಇರುವ ಬಣಗಳ ನಡುವೆ ಆಪರೇಷನ್ ನಡೆಯುತ್ತಿರುವುದನ್ನು ಸ್ಪಷ್ಟಪಡಿಸುತ್ತದೆ.

Facebook Comments