ವಿಧಾನಸಭೆಯಲ್ಲಿ ಕಾಂಗ್ರೆಸ್ ಹೊಸ ತಂತ್ರ, ಸಿಎಂ ವಿರುದ್ಧ ಅವಿಶ್ವಾಸ ಪ್ರಸ್ತಾವ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.24- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಮಂತ್ರಿಮಂಡಲದಲ್ಲಿ ಈ ಸದನ ವಿಶ್ವಾಸ ಕಳೆದುಕೊಂಡಿದೆ ಎಂಬ ಪ್ರತಿಪಕ್ಷ ಕಾಂಗ್ರೆಸ್ ಮಾಡಿದ ಪ್ರಸ್ತಾವಕ್ಕೆ ಸದನದ ಅನುಮತಿ ಸಿಕ್ಕಿದೆ.

ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಸಂತಾಪ ನಿರ್ಣಯದ ನಂತರ ಮುಂದೂಡಲಾಗಿದ್ದ ಸದನ ಸಮಾವೇಶಗೊಂಡಾಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ನಿಯಮ 67ರ ಅಡಿ ನೋಟಿಸ್ ನೀಡಿದ್ದು, ಯಡಿಯೂರಪ್ಪ ನೇತೃತ್ವದ ಮಂತ್ರಿ ಮಂಡಲದಲ್ಲಿ ಈ ಸದನವು ವಿಶ್ವಾಸ ಕಳೆದುಕೊಂಡಿದೆ. ಸರ್ಕಾರದ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸ್ಪೀಕರ್ ಅವರು, ನೀವು ನೀಡಿರುವ ನೋಟಿಸ್ ತಲುಪಿದೆ. ನಿಯಮಾವಳಿ ಪ್ರಕಾರ ಮಾಡುತ್ತೇನೆ. ವಿರೋಧ ಪಕ್ಷದ ನಾಯಕರು ನೀಡಿರುವ ಪ್ರಸ್ತಾಪದ ಪರವಾಗಿರುವವರು ಎದ್ದು ನಿಲ್ಲಬೇಕು ಎಂದು ಹೇಳಿದರು. ಆಗ ಸಿದ್ದರಾಮಯ್ಯ ಅವರು ಪ್ರಸ್ತಾಪದ ಪರವಾಗಿ ಕನಿಷ್ಠ 23 ಸದಸ್ಯರು ಇದ್ದರೆ ಸಾಕು. ನಾವು ಅದಕ್ಕಿಂತ ಹೆಚ್ಚಿದ್ದೇವೆ ಎಂದರು.

ಆಗ ಸಚಿವ ಆರ್.ಅಶೋಕ್ ಮಾತನಾಡಿ, ಹೆಚ್ಚಾದರೆ ಅಮೃತವೂ ವಿಷವಾಗುತ್ತದೆ ಎಂದು ಛೇಡಿಸಿದರು. ಆಗ ಸಭಾಧ್ಯಕ್ಷರು ಗಂಭೀರ ವಿಷಯ ಪ್ರಸ್ತಾಪವಾಗಿದೆ ಎಂದು ಹೇಳಿ ಪ್ರಸ್ತಾವದ ಪರವಾಗಿ 23 ಜನಕ್ಕಿಂತ ಹೆಚ್ಚು ಸದಸ್ಯರು ಇದ್ದೀರಿ. ಹೀಗಾಗಿ ಸದನದ ಅನುಮತಿ ಇದೆ ಎಂದು ಪ್ರಕಟಿಸಿದರು. ಚರ್ಚೆಯ ದಿನಾಂಕ ಮತ್ತು ಸಮಯವನ್ನು ನಾಳೆ ಮತ್ತು ನಾಡಿದ್ದರೊಳಗೆ ನಿಗದಿ ಮಾಡಲಾಗುವುದು ಎಂದರು.

ಹೆಚ್ಚು ದಿನ ನಾನು ಒತ್ತಾಯ ಮಾಡುವುದಿಲ್ಲ. ಮೂರು ದಿನದೊಳಗೆ ನಿರ್ಣಯ ಪ್ರಕಟಿಸುವುದು ಸೂಕ್ತ ಎಂದು ಸಿದ್ದರಾಮಯ್ಯ ತಿಳಿಸಿದರು. ಕಂದಾಯ ಸಚಿವ ಆರ್.ಅಶೋಕ್ ಈ ಸಂದರ್ಭದಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಹಾಗೂ ದೇಶದಲ್ಲೂ ಬಹುಮತ ಇಲ್ಲ. ರಾಜಕೀಯ ಗಿಮಿಕ್‍ಗಾಗಿ ಅವಿಶ್ವಾಸ ನಿರ್ಣಯ ಪ್ರಸ್ತಾಪ ಮಂಡಿಸಿದೆ. ಮತಕ್ಕೆ ಹಾಕಿದರೆ ಸೋಲುವುದು ಖಚಿತ ಎಂದು ಛೇಡಿಸಿದರು.

ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಪ್ರಸ್ತಾಪವಾಗಿದೆ. ಇದಕ್ಕೆ ಸದನದ ಒಪ್ಪಿಗೆ ಸಿಕ್ಕಿದೆ. ಹೀಗಿರುವಾಗ ಈ ಕುರ್ಚಿಯಲ್ಲಿ ಕೂರಲು ಯಾರಿಗೂ ಅರ್ಹತೆ ಇಲ್ಲ. ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕೆಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಅವಿಶ್ವಾಸ ನಿರ್ಣಯ ಪ್ರಸ್ತಾಪ ಮಂಡಿಸಿರುವ ಸಂದರ್ಭದಲ್ಲಿ ಸರ್ಕಾರ ಮಸೂದೆ ಮಂಡನೆಯಂತಹ ಯಾವುದೇ ಮಹತ್ವದ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಬಿಜೆಪಿ ಶಾಸಕ ರಾಮದಾಸ್ ಮಾತನಾಡಿ, ಹಿಂದೆ ಸರ್ಕಾರ ಯಾವ ರೀತಿ ಕ್ರಮ ಕೈಗೊಂಡಿದೆ ಎಂಬುದನ್ನು ಜ್ಞಾಪಿಸಬೇಕಾಗುತ್ತದೆ ಎಂದು ಹೇಳಿದರು. ನೀವು ಅವಿಶ್ವಾಸ ನಿರ್ಣಯ ಪ್ರಸ್ತಾಪ ಮಂಡಿಸಿದ್ದೀರಾ. ಅದರ ಬಗ್ಗೆ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ್ದೇನೆ ಎಂದು ಸ್ಪೀಕರ್ ಹೇಳಿ, ವಿಧೇಯಕ ಮಂಡನೆಗೆ ಅನುಮತಿ ನೀಡಿದಾಗ. ಕಂದಾಯ ಸಚಿವರು ಸೇರಿದಂತೆ ಹಲವರು ವಿಧೇಯಕಗಳನ್ನು ಮಂಡಿಸಿದರು.

Facebook Comments