ಗೌರಮ್ಮ ಸೋಮಶೇಖರ್ ಆಯ್ಕೆಗೆ ಕಾಂಗ್ರೆಸ್‍ನಲ್ಲೇ ವಿರೋಧ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಫೆ.23- ಮೈಸೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ರಾತ್ರಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಉಪಾಧ್ಯಕ್ಷರಾಗಿ ಗೌರಮ್ಮ ಸೋಮಶೇಖರ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಕಾಂಗ್ರೆಸನಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಬೆಳಗ್ಗೆ ಸಂಸದ ಧೃವನಾರಾಯಣ್ ನೇತೃತ್ವದಲ್ಲಿ ನಡೆದ ಜಿಲ್ಲಾ ಪಂಚಾಯತ್‍ನ ಕಾಂಗ್ರೆಸ್ ಸದಸ್ಯರ ಸಭೆಯಲ್ಲಿ ಗೌರಮ್ಮ ಸೋಮಶೇಖರ್ ಹೆಸರನ್ನು ಪ್ರಕಟಿಸುತ್ತಿದ್ದಂತೆ ಬಹುತೇಕ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸದಸ್ಯಕೃಷ್ಣ ಮಾತನಾಡಿ,20 ವರ್ಷದ ನಂತರ ಸಾಮಾನ್ಯ ವರ್ಗಕ್ಕೆ ಅವಕಾಶ ಸಿಕ್ಕಿದೆ. ಆದರೆ ಈ ಅವಕಾಶವನ್ನು ತಪ್ಪಿಸಲಾಗಿದೆ. ಈ ಮೊದಲು ಪಕ್ಷದ ವರಿಷ್ಠರು ಉಪಾಧ್ಯಕ್ಷ ಸ್ಥಾನವನ್ನು ನನಗೆ ಕೊಡುವುದಾಗಿ ಭರವಸೆ ನೀಡಿದ್ದರು.

ಇದು ಹುಸಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆಯುತ್ತಿರುವಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಲ್ಲಿ ಇಲ್ಲದ ಕಾರಣ ಸ್ಥಳೀಯ ನಾಯಕರು ತಮಗೆ ಅನುಕೂಲವಾಗುವಂತವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಕೂರಿಸುತ್ತಿರುವುದು ಸರಿಯಲ್ಲ.

ಗೌರಮ್ಮ ಸೋಮಶೇಖರ್ ಆಯ್ಕೆಗೆ ನಮ್ಮ ತೀವ್ರ ವಿರೋಧವಿದೆ ಎಂದು ಕೃಷ್ಣ ಹೇಳಿದರು.ಇದಕ್ಕೆ ಭಾಗ್ಯ ಮತ್ತಿತರ ಸದಸ್ಯರೂ ಕೂಡ ಅಸಮಾಧಾನ ವ್ಯಕ್ತಪಡಿಸಿದರು.

Facebook Comments