Saturday, April 20, 2024
Homeರಾಜ್ಯಕ್ರೈಂ ರಾಜಧಾನಿಯಾಗುತ್ತಿದೆ ಬೆಂಗಳೂರು : ಆರ್.ಅಶೋಕ್

ಕ್ರೈಂ ರಾಜಧಾನಿಯಾಗುತ್ತಿದೆ ಬೆಂಗಳೂರು : ಆರ್.ಅಶೋಕ್

ಬೆಂಗಳೂರು,ಫೆ.14- ಶಾಂತಿ ಮತ್ತು ಸುವ್ಯವಸ್ಥೆಗೆ ಹೆಸರಾಗಿದ್ದ ಕರ್ನಾಟಕ ಅಪರಾಧದ ನಾಡಾಗಿ ಕುಖ್ಯಾತಿ ಪಡೆಯುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿಧಾನಸಭೆಯಲ್ಲಿಂದು ಆರೋಪಿಸಿದರು. ನಿಯಮ 69 ರಡಿ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಮಾತನಾಡಿದ ಅವರು, ಎನ್ಸಿಆರ್‍ಬಿ ಪ್ರಕಾರ, ಅಪರಾಧಗಳ ಸಂಖ್ಯೆ ಶೇ.25 ರಿಂದ ಶೇ.30 ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ 1,80,742 ಪ್ರಕರಣಗಳು ವರದಿಯಾಗಿವೆ. ನಮ್ಮ ಸರ್ಕಾರದ ಅವಧಿಗಿಂತ ಇದು ಶೇ.40 ರಷ್ಟು ಹೆಚ್ಚಾಗಿದೆ. ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ.56 ರಷ್ಟು ಹೆಚ್ಚಾಗಿವೆ ಎಂದು ಅವರು ತಿಳಿಸಿದರು.

ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ. ಬೆಂಗಳೂರು ಕ್ರೈಂ ರಾಜಧಾನಿಯಾಗುತ್ತಿದೆ. ಸೈಬರ್ ಕ್ರೈಂನಲ್ಲಿ ಮೊದಲ ಸ್ಥಾನದಲ್ಲಿದೆ. ಒಂದೇ ವರ್ಷದಲ್ಲಿ 432 ಕೋಟಿ ರೂ. ಸೈಬರ್ ಕ್ರೈಂ ಮೂಲಕ ಲೂಟಿಯಾಗಿದೆ. ಬೆಂಗಳೂರು ಸುರಕ್ಷತಾ ನಗರ ಹೋಗಿ ಕ್ರೈಂ ಸಿಟಿಯಾಗಿ ಮಾರ್ಪಡುತ್ತಿದೆ. ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ. ಕೆಎಫ್‍ಡಿ, ಪಿಎಫ್‍ಐ ಮೇಲಿನ 1600 ಕೇಸುಗಳನ್ನು ಸರ್ಕಾರ ವಾಪಸ್ಸು ಪಡೆದಿದೆ. ಇದರಿಂದ ಅಂತವರಿಗೆ ಧೈರ್ಯ ಬಂದಾಂತಾಗಿದೆ. ಕೋಲಾರದಲ್ಲಿ ಸ್ಟೀಲ್‍ನಿಂದ ನಿರ್ಮಿಸಿದ 30 ಅಡಿ ಅಗಲ, 40 ಅಡಿ ಎತ್ತರದ ಮಚ್ಚು, ಲಾಂಗಿನಿಂದ ಮಾಡಿದ ಕಟೌಟ್ ಹಾಕಲಾಗಿದೆ. ಕಾಂಗ್ರೆಸ್ ಸಕ್ರಾರ ಅಧಿಕಾರಕ್ಕೆ ಬಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಬಳ್ಳಾರಿಯಲ್ಲಿ 8 ಮಂದಿ ಶಂಕಿತ ಉಗ್ರರನ್ನು ಎನ್‍ಐಎ ಬಂಧಿಸಿದೆ. ಸಮಾಜದಲ್ಲಿ ಭೀತಿ ಹುಟ್ಟಿಸುವ ಕೆಲಸವನ್ನು ಮಾಡಲಾಗುತ್ತಿತ್ತು. ಮಿನಾಜ್ ಅಲಿಯಾಸ್ ಮಹಮ್ಮದ್ ಸುಲೈಮಾನ್ ಎಂಬ ವ್ಯಕ್ತಿ ಕಿಂಗ್‍ಪಿನ್ ಆಗಿದ್ದು, ಅಮಾಯಕರಿಗೆ ಹಣ, ಉದ್ಯೋಗ, ಧರ್ಮದ ಆಮಿಷವೊಡ್ಡಿ ಅಪರಾಧ ಕೃತ್ಯಗಳ ಬಗ್ಗೆ ತರಬೇತಿ ನೀಡಲಾಗುತ್ತಿತ್ತು ಎಂಬ ವರದಿಯಾಗಿದೆ. ಶಿವಾಜಿನಗರ ಪುಲಕೇಶಿ ನಗರದಲ್ಲೂ ಕೂಡ ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಇವರಿಗೆ ಹಣ ಎಲ್ಲಿಂದ ಬಂತು, ಯಾರು ಕಳುಹಿಸಿದರು ಎಂಬುದು ಗೊತ್ತಾಗುವುದಿಲ್ಲ.

ರಾಜಸ್ಥಾನದಿಂದ ರಾಜ್ಯಸಭೆಗೆ ಸೋನಿಯಾ ಗಾಂಧಿ ಸ್ಪರ್ಧೆ, ನಾಮಪತ್ರ ಸಲ್ಲಿಕೆ

ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಚಿತ್ರದುರ್ಗದ ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸುವಾಗ ಹಲ್ಲೆ ನಡೆಸಲಾಗಿದೆ. ರಾಜ್ಯ ಗುಪ್ತಚರ ಇಲಾಖೆ ಸತ್ತಿದೆಯೋ? ಬದುಕಿದೆಯೋ ಅಥವಾ ಐಸಿಯುವಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆಯೋ ಗೊತ್ತಿಲ್ಲ. ಚಿಕ್ಕಮಗಳೂರಿನಲ್ಲಿ ಪೊಲೀಸರು ಪ್ರತಿಭಟನೆ ಮಾಡುತ್ತಾರೆ. ಅದು ಪೊಲೀಸಿನವರಿಗೇ ಗೊತ್ತಾಗುವುದಿಲ್ಲ. ಪ್ರತಿಭಟನೆ ಮಾಡಿದವರ ಮೇಲೆ ಕ್ರಮವೂ ಆಗುವುದಿಲ್ಲ. ಪೊಲೀಸರು ನೈತಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದರು.

ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಘಟನೆ ಕೋಲಾರ ಮತ್ತು ಬೆಂಗಳೂರಿನ ಆಂದ್ರಹಳ್ಳಿಯಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಶುಚಿಗೊಳಿಸಿದ ಪ್ರಕರಣವನ್ನು ಎಳೆಎಳೆಯಾಗಿ ಬಿಡಿಸಿಟ್ಟ ಅಶೋಕ್, ಇದಕ್ಕೆ ಸರ್ಕಾರದ ಆಡಳಿತ ವೈಫಲ್ಯ ಕಾರಣ ಎಂದು ದೂರಿದರು.

ಚಿಂತಾಮಣಿಯಲ್ಲಿ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿಗಳು ಸರಿಯಾಗಿ ಊಟ ನೀಡಲಿಲ್ಲ ಎಂದು ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲಿನ ಕೋಪಕ್ಕ ಅಲ್ಲಿನ ವಾರ್ಡನ್ ಊಟದಲ್ಲಿ ಮಲ ಬೆರೆಸಿರುವುದು ಎಫ್‍ಎಸ್‍ಐಎಲ್ ವರದಿಯಲ್ಲಿ ಗೊತ್ತಾಗಿದೆ. ವರದಿ ಬಂದು ಮೂರು ತಿಂಗಳಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಹಾವೇರಿಯಲ್ಲಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಟ್ ಅವರ ಮೇಲೆ ಹಲ್ಲೆ ಆಗಿತ್ತು. ಬೆಂಗಳೂರಿನಲ್ಲಿ ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆ ಮೇಲೆ ಬೆಂಕಿ ಹಾಕಲಾಗಿತ್ತು ಎಂಬುದು ಸೇರಿದಂತೆ ಹಲವು ಘಟನೆಗಳನ್ನು ಉಲ್ಲೇಖಿಸಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದರು.

RELATED ARTICLES

Latest News