ಅಧಿವೇಶನ ಮೊಟಕು : ಸರ್ಕಾರದ ನಿರ್ಧಾರಕ್ಕೆ ವಿಪಕ್ಷಗಳು ವಿರೋಧ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.21- ಕೊರೊನಾ ಕಾರಣ ನೀಡಿ ಸದನವನ್ನು ಮೂರು ದಿನಗಳಿಗೆ ಮೊಟಕುಗೊಳಿಸುವ ಸರ್ಕಾರದ ನಿರ್ಧಾರಕ್ಕೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.  ನಿಗದಿಯಂತೆ ಅಧಿವೇಶನ ನಡೆಯಬೇಕು. ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ದೊರೆಯಬೇಕು ಎಂದು ಕಾಂಗ್ರೆಸ್, ಜೆಡಿಎಸ್ ಮುಖಂಡರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಅಧಿವೇಶನವನ್ನು ಮೊಟಕುಗೊಳಿಸಬಾರದು. ಕೊರೊನಾ ಕಾರಣ ನೀಡಿ ಅಧಿವೇಶನ ಮೊಟಕುಗೊಳಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಇದನ್ನು ನಾವು ಒಪ್ಪಲು ಸಾಧ್ಯವಿಲ್ಲ.

ಸುಮಾರು 40ಕ್ಕೂ ಹೆಚ್ಚು ಮಸೂದೆಗಳನ್ನು ಈ ಅಧಿವೇಶನದಲ್ಲಿ ತಂದು ಮೂರೇ ದಿನಗಳಲ್ಲಿ ಅಧಿವೇಶನ ನಡೆಸುವುದು ಸಮಂಜಸವಲ್ಲ. ಮೂರು ದಿನಗಳ ಕಾಲ ವಿಸ್ತರಿಸುವಂತೆ ಒತ್ತಾಯ ಮಾಡುತ್ತೇವೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕೊರೊನಾದೊಂದಿಗೆ ಬದುಕು ನಡೆಸಬೇಕಾಗಿದೆ. ಅಧಿವೇಶನವನ್ನು ಯಾವುದೇ ಕಾರಣಕ್ಕೂ ಮೊಟಕುಗೊಳಿಸಬಾರದು. ಸದನ ಸಲಹಾ ಸಮಿತಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತೇವೆ ಎಂದು ಹೇಳಿದರು. ಸರ್ಕಾರದ ವಿರುದ್ಧ ಸಾಕಷ್ಟು ಆರೋಪಗಳಿವೆ. ಕೋವಿಡ್-19 ವಿಷಯದಲ್ಲಿ ವ್ಯಾಪಕ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ.

ಇನ್ನಿತರ ಸರ್ಕಾರದ ಅದ್ವಾನಗಳ ವಿರುದ್ಧ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಎಲ್ಲದರ ಬಗ್ಗೆ ಚರ್ಚೆ ನಡೆಸಬೇಕಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಸದನವನ್ನು ಮೊಟಕುಗೊಳಿಸಬಾರದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಅಧಿವೇಶನದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿದ್ದು, ಅಧಿವೇಶನವನ್ನು ಮೊಟಕುಗೊಳಿಸದಂತೆ ಮುಂದುವರಿಸಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು.

ಇದು ಜೆಡಿಎಸ್ ಪಕ್ಷದ ನಿಲುವಾಗಿದ್ದು, ಕೊರೊನಾ ಇದ್ದರೂ ಜನಜೀವನ ನಡೆಯುತ್ತಿದೆ. ಕೊರೊನಾ ನೆಪವೊಡ್ಡಿ ಅಧಿವೇಶನವನ್ನು ಮೊಟಕುಗೊಳಿಸಬಾರದು ಎಂದು ಹೇಳಿದರು.

Facebook Comments