ನೆರೆ ನಿರ್ವಹಣೆ : ನಿದ್ದೆ ಸರ್ಕಾರಕ್ಕೆ ಹಾಸಿಗೆ ಹಾಕಿಕೊಟ್ಟ ಪ್ರತಿಪಕ್ಷಗಳ ನಿರ್ಲಕ್ಷ್ಯತನ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.28- ಉತ್ತರ ಕರ್ನಾಟಕ ಭಾಗದ ಭಾರೀ ಮಳೆಯಿಂದ ಉಂಟಾಗಿರುವ ನೆರೆ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರ್ಕಾರ ವಿಫಲವಾಗಿರುವ ನಡುವೆಯೇ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಕೂಡ ಜನರ ಸಂಕಷ್ಟಕ್ಕೆ ಸ್ಪಂದಿಸಲು ಹಿಂದೇಟು ಹಾಕಿದೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ.

ನೆರೆ ಸಂತ್ರಸ್ಥರಿಗೆ ಪರಿಹಾರ ನೀಡದೆ, ನಿರಾಶ್ರಿತ ಶಿಬಿರಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸದೆ ರಾಜ್ಯ ಸರ್ಕಾರ ಅಕ್ಷರಶಃ ವಿಫಲವಾಗಿದೆ ಎಂದು ತೊಂದರೆಗೊಳಗಾದವರು ಪ್ರತಿಭಟನೆಗೆ ಇಳಿದಿದ್ದಾರೆ.

ಈ ಸಂದರ್ಭದಲ್ಲಿ ಜನರ ನಡುವೆ ಇರಬೇಕಾದ ಕಾಂಗ್ರೆಸ್ ಯಾಕೋ ತಟಸ್ಥ ನೀತಿ ಅನುಸರಿಸುತ್ತಿದೆ. ಪ್ರತಿಯೊಂದಕ್ಕೂ ಸಮಿತಿ ಮಾಡುವ ಕೆಪಿಸಿಸಿ ಅಧ್ಯಕ್ಷರು ನೆರೆ ಅಧ್ಯಯನಕ್ಕಾಗಿ ತಂಡ ರಚನೆ ಮಾಡದಿರುವುದು ಹಲವು ಅನುಮಾನಗಳನ್ನು ಉಂಟು ಮಾಡಿದೆ.

ಕಳೆದ ವರ್ಷ ನೆರೆ ಹಾವಳಿ ಉಂಟಾದಾಗ ಕಾಂಗ್ರೆಸ್ ಸಮಿತಿ ರಚನೆ ಮಾಡಿತ್ತು. ಹಿರಿಯ ನಾಯಕರ ನೇತೃತ್ವದ ತಂಡಗಳೂ ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿ ಅಧ್ಯಯನ ನಡೆಸಿದ್ದವು. ಕಾಂಗ್ರೆಸ್ ತಂಡ ಬರಲಿದೆ ಎಂಬ ಕಾರಣಕ್ಕೆ ಸರ್ಕಾರ ಎಚ್ಚೇತ್ತುಕೊಂಡು ಸಂತ್ರಸ್ಥರಿಗೆ ನೆರವಾಗಿತ್ತು, ಅಕಾರಿಗಳು ಚುರುಕಾಗಿದ್ದರು.

ಅಧ್ಯಯನ ಮಾಡಿ ನೀಡಿದ ವರದಿ ಏನಾಯಿತು ? ಅದರಿಂದ ಯಾರಿಗೆ ಪ್ರಯೋಜನವಾಯಿತು ಎಂಬುದು ಬೇರೆ ಮಾತು. ಆದರೆ ಪ್ರತಿಪಕ್ಷ ಸ್ಥಳಕ್ಕೆ ತೆರಳಿದಾಗ ಒಂದಿಷ್ಟು ಎಚ್ಚರಿಕೆಯ ಕ್ರಮಗಳಾಗುತ್ತವೆ. ಸಂತ್ತಸ್ಥರಿಗೆ ಅನುಕೂಲವಾಗುತ್ತದೆ.

ಆದರೆ ಈ ಬಾರಿ ಕಾಂಗ್ರೆಸ್ ನೆರೆ ಅಧ್ಯಯನ ಸಮಿತಿ ರಚನೆ ಮಾಡಿಲ್ಲ, ಪ್ರವಾಹ ತಗ್ಗಿದೆ. ಹಾವಳಿಯ ತೀವ್ರತೆ ಕಡಿಮೆಯಾಗಿದೆ. ಸುಮಾರು 10 ದಿನಗಳಿಂದ ಮಳೆಯಿಂದ ತೊಂದರೆಗೆ ಒಳಗಾದ ಜನ ಬೀದಿಯಲ್ಲಿ ಬದುಕು ನಡೆಸುತ್ತಿದ್ದಾರೆ.

ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವೈಮಾನಿಕ ಸಮೀಕ್ಷೆ ನಡೆಸಿದ್ದು ಬಿಟ್ಟರೆ ಬೇರೆ ಯಾವ ಪ್ರಯೋಜನವೂ ಆಗಿಲ್ಲ. ಉಸ್ತುವಾರಿ ಸಚಿವರು ಜಿಲ್ಲಾ ಕೇಂದ್ರಗಳಲ್ಲಿ ಸಭೆ ನಡೆಸಲು ಸೀಮಿತವಾಗಿದ್ದಾರೆ. ಕೆಲವರು ನೆಪ ಮಾತ್ರಕ್ಕೆ ಸ್ಥಳಕ್ಕೆ ಹೋಗಿ ಬಂದಿದ್ದಾರೆ. ಇದರಿಂದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ.

ಎಲ್ಲಾ ಕಡೆ ಸಂತ್ರಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೊಡಗು ಮತ್ತು ಮೈಸೂರು ಭಾಗಕ್ಕೆ ಭೇಟಿ ನೀಡಿದ್ದರು. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಅಷ್ಟರಲ್ಲಿ ಅನಾರೋಗ್ಯದ ಸಮಸ್ಯೆಯಿಂದ ವಿಶ್ರಾಂತಿಯ ಮೊರೆ ಹೋದರು.

ಕಳೆದ ಎರಡು ದಿನಗಳಿಂದ ಕೊರೊನಾ ಸೋಂಕಿಗೆ ಸಿಲುಕಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಅವರ ಪ್ರವಾಸ ಕಾರ್ಯಕ್ರಮಗಳು ದ್ದಾಗಿವೆ. ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೂಡ ಸೋಂಕಿಗೆ ಸಿಲುಕಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಈಗ ಕ್ವಾರಂಟೈನ್‍ನಲ್ಲಿದ್ದಾರೆ.

ಕಾಂಗ್ರೆಸ್‍ನ ಪ್ರಮುಖ ನಾಯಕರು ಟ್ವಿಟ್ ಮೂಲಕ ನೆರೆ ನಿಭಾಯಿಸಲು ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸಿದ್ದರಾಮಯ್ಯ ಅವರಂತೂ ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅತ್ತ ಸರ್ಕಾರವೂ ಕೇಳದೆ, ಇತ್ತ ಪ್ರತಿಪಕ್ಷಗಳು ಪ್ರಶ್ನಿಸದೆ ಇರುವುದರಿಂದ ಸಂತ್ರಸ್ತರ ಗೋಳು ಅರಣ್ಯರೋಧನವಾಗಿದೆ.

ಬೆಂಗಳೂರು ಗಲಭೆ, ಕೋವಿಡ್ ನಿರ್ವಹಣೆ ಸೇರಿದಂತೆ ಎಲ್ಲದಕ್ಕೂ ಸಮಿತಿಗಳನ್ನು ರಚಿಸಿರುವ ಕೆಪಿಸಿಸಿ ಅಧ್ಯಕ್ಷರು ನೆರೆ ಅಧ್ಯಯನಕ್ಕೆ ತಂಡ ರಚಿಸದೆ ಇರುವುದೇಕೆ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶರ್ ಖಂಡ್ರೆ ಮತ್ತು ಸಲೀಂ ಅಹಮದ್ ಇಬ್ಬರು ಉತ್ತರ ಕರ್ನಾಟಕ ಭಾಗಕ್ಕೆ ಸೇರಿದವರು.

ಇವರು ಸೇರಿದಂತೆ ಬಹಳಷ್ಟು ಮಂದಿ ತಮ್ಮ ಕ್ಷೇತ್ರಗಳಿಗೆ ಸೀಮಿತವಾಗಿ ಭೇಟಿ ನೀಡುತ್ತಿದ್ದಾರೆ. ಆದರೆ ರಾಜ್ಯ ಪೂರ್ತಿ ಪ್ರವಾಸ ಮಾಡಿ ಅಧ್ಯಯನ ಮಾಡುವ ಕಾಳಜಿ ಕಾಣುತ್ತಿಲ್ಲ. ಮೊದಲೆ ನಿದ್ದೆ ಮಾಡುತ್ತಿದ್ದ ಸರ್ಕಾರಕ್ಕೆ ಪ್ರತಿಪಕ್ಷಗಳ ನಿರ್ಲಕ್ಷ್ಯ ಹಾಸಿಗೆ ಹಾಸಿಕೊಟ್ಟಂತಾಗಿದೆ.

Facebook Comments

Sri Raghav

Admin