ಅಂಗಾಂಗ ಕಸಿ ಕೇಂದ್ರ ಲೋಕಾರ್ಪಣೆ ಯಾವಾಗ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.28- ಐಟಿ-ಬಿಟಿ ಸಿಟಿ ಆರೋಗ್ಯ ಕ್ಷೇತ್ರದಲ್ಲಿ ಮುಂದುವರೆದ ನಗರ ಎಂಬ ಹೆಗ್ಗಳಿಕೆ ಹೊಂದಿದೆ. ಆದರೂ ಬಡವರಿಗೆ ಸಂಜೀವಿನಿಯಾಗಬೇಕಿದ್ದ ಗ್ರಾಸ್ಟ್ರೋ ಎಂಟ್ರಾರಾಲಜಿ ಹಾಗೂ ಅಂಗಾಂಗ ಕಸಿ ಆಸ್ಪತ್ರೆ ಲೋಕಾರ್ಪಣೆಗೆ ಹಿಡಿದ ಗ್ರಹಣ ಬಿಟ್ಟಿಲ್ಲ.

ಕಡಿಮೆ ವೆಚ್ಚದಲ್ಲಿ ಬಡವರಿಗೆ ಉತ್ತಮ ಆರೋಗ್ಯ ಸೇವೆ ಲಭಿಸಬೇಕು ಎಂಬ ಉದ್ದೇಶದಿಂದ ವಿಕ್ಟೋರಿಯ ಆಸ್ಪತ್ರೆ ಅವರಣದಲ್ಲಿ ಗ್ರಾಸ್ಟ್ರೋ ಎಂಟ್ರಾರಾಲಜಿ ಮತ್ತು ಅಂಗಾಂಗ ಕಸಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ 2016-17ರಲ್ಲಿ ಆನುಮೋದನೆ ನೀಡಿ 170 ಉದ್ಯೋಗಿಗಳ ನೇಮಕಾತಿಗೆ ಆದೇಶ ನೀಡಲಾಗಿತ್ತು.

ಖಾಸಗಿ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ಚಿಕಿತ್ಸೆಗೆ ಕನಿಷ್ಠ 20ರಿಂದ 30ಲಕ್ಷ ರೂ. ಖರ್ಚು ತಗುಲುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಚಿಕಿತ್ಸೆ ಲಭಿಸಲಿದೆ. 100ಬೆಡ್ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದರೂ ಕೊರೊನಾ ಎರಡನೇಯ ಅಲೆಯಲ್ಲಿ ಕೊವಿಡ್, ನಾನ್ ಕೊವಿಡ್ ರೋಗಿಗಳಿಗೆ ಬಳಕೆ ಮಾಡಿಕೊಳ್ಳಬಹುದಿತ್ತು. ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿದ್ದರೂ ಯಾವುದೇ ಪ್ರಯೋಜಕ್ಕೆ ಬಾರದಾಗಿದೆ.

ಬಡವರಿಗೆ ಅಂಗಾಂಗ ಕಸಿ ಚಿಕಿತ್ಸೆಗೆ ಸಾರ್ವಜನಿಕರು 130 ಕೋಟಿ ರೂ. ಅನುದಾನ ನೀಡಿದ್ದರೂ ಈ ಹಣ ಸದ್ಬಳಕೆಯಾಗುತ್ತಿಲ್ಲ. ಆಸ್ಪತ್ರೆಗೆ ಬೇಕಾಗಿರುವ ವೈದ್ಯರು ಮತ್ತು ಬೋಧಕರು , ಆಡಾಳಿತ್ಮಕ ಸಿಬ್ಬಂದಿಗಳು , ದಾದಿಯರನ್ನು ನೇಮಕ ಮಾಡಿಕೊಳ್ಳಲು 2018ರಲ್ಲಿ ಅನುಮೋದನೆ ದೊರೆತಿದ್ದರೂ ಇದುವರೆಗೂ ಯಾವುದೇ ನೇಮಕವಾಗಿಲ್ಲ.

ಆಸ್ಪತ್ರೆ ಉದ್ಘಾಟನೆಯಾದರೆ ಬಡ ರೋಗಿಗಳಿಗೆ ಚಿಕಿತ್ಸೆಗೆ ಅವಕಾಶ ಮತ್ತು ನೂರಾರು ನುರಿತ ವೈದ್ಯರು ,ಆರೋಗ್ಯ ಸಿಬ್ಬಂದಿವರ್ಗದವರ ನೇಮಕಾತಿ ಸಿಗಲಿದೆ ಹಾಗೂ ವೈದ್ಯ ವಿದ್ಯಾರ್ಥಿಗಳಿಗೆ ತರಬೇತಿ ಸಿಗಲಿದೆ. ಕಟ್ಟಡ ಉದ್ಘಾಟನೆಯಾಗದೇ ಇರುವುದನ್ನು ಪ್ರಶ್ನಿಸಿ ಸಾರ್ವಜನಿಕರು ಕೋರ್ಟ್ ಮೊರೆಹೋದಾಗ ಆಡಳಿತ ಮಂಡಳಿಯವರು ನಾಲ್ಕು ತಿಂಗಳೊಳಗೆ ಕಟ್ಟಡ ಉದ್ಘಾಟನೆ ಮಾಡುತ್ತೇವೆ ಎಂದು ಮುಚ್ಚಳಿಕೆ ಬರೆದುಕೊಟ್ಟು 9 ತಿಂಗಳು ಕಳೆದರೂ ಕಟ್ಟಡ ಮಾತ್ರ ಉದ್ಘಾಟನೆಯಾಗಿಲ್ಲ.

ಬಡವರ ಪಾಲಿಗೆ ಸಂಜೀವಿನಿಯಾಗಬೇಕಿದ್ದ ಅಂಗಾಂಗ ಕಸಿ ಆರೋಗ್ಯ ಕೇಂದ್ರವನು ಆರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಪ್ರಯತ್ನಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಕೊರೊನಾ ಕಾರಣದಿಂದ ಆರೋಗ್ಯ ಕೇಂದ್ರ ಉದ್ಘಾಟನೆ ಮುಂದೂಡಲ್ಪಡಲಾಗಿತ್ತು. ಶೀಘ್ರದಲ್ಲೇ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರು ಈ ಕೇಂದ್ರವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕೇಂದ್ರದ ನಿರ್ದೇಶಕ ಡಾ.ನಾಗೇಶ್ ತಿಳಿಸಿದ್ದಾರೆ.

Facebook Comments