ಟೊಳ್ಳುಮೂಳೆ ಸಮಸ್ಯೆ ಬಗ್ಗೆ ಇರಲಿ ಎಚ್ಚರ..!

ಈ ಸುದ್ದಿಯನ್ನು ಶೇರ್ ಮಾಡಿ

ಆಸ್ಟಿಯೋಪೋರೊಸಿಸ್ ಅಥವಾ ಅಸ್ಥಿರಂಧ್ರತೆ ಆರಂಭದಲ್ಲಿ ಯಾವುದೇ ರೋಗ ಲಕ್ಷಣ ಅಥವಾ ಚಿಹ್ನೆಗಳನ್ನು ಬಹಿರಂಗಗೊಳಿಸುವುದಿಲ್ಲ. ಆದರೆ, ನಂತರ ಇದು ಅಭಿವೃದ್ಧಿಗೊಂಡು ಮೂಳೆಗಳು ಮುರಿಯುವ, ಟೊಳ್ಳಾಗುವ, ಬೆನ್ನುಮೂಳೆ ವಿಕಾರವಾಗುವ ಹಾಗೂ ಗಾತ್ರದಲ್ಲಿ ಕುಗ್ಗುವ ಗಂಭೀರ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ.

ಆಸ್ಟಿಯೋಪೋರೊಸಿಸ್ ಎಂದರೆ ರಂಧ್ರಯುತ ಎಲುಬುಗಳು. ಇದನ್ನು ಅಸ್ಥಿರಂಧ್ರತೆ ಎಂದು ಸಹ ಕರೆಯಲಾಗುತ್ತದೆ. ಮೂಳೆಗಳ ಬಹುಪಾಲು ಭಾಗ ಕ್ಯಾಲ್ಷಿಯಂನಿಂದ ರಚಿತವಾಗಿದೆ. ಅದು ಇವುಗಳನ್ನು ಬಲಿಷ್ಠವಾಗಿಸುತ್ತವೆ. ವಯಸ್ಸಾದಂತೆ ದೇಹ ಕ್ಯಾಲ್ಷಿಯಂಅನ್ನು ಕಳೆದುಕೊಳ್ಳತೊಡಗುತ್ತದೆ. ಇದರಿಂದಾಗಿ ಮೂಳೆಗಳ ಸಾಂಧ್ರತೆ ಕಡಿಮೆಯಾಗತೊಡಗುತ್ತದೆ.
ಅಂಥ ದುರ್ಬಲ ಎಲುಬುಗಳು ಸಣ್ಣ ಪೆಟ್ಟಿನಿಂದ, ಬೀಳುವುದರಿಂದ, ಸ್ವಲ್ಪ ಒತ್ತಡದಿಂದಲೂ ಮುರಿಯುವ ಸಾಧ್ಯತೆ ಇರುತ್ತದೆ.

# ಲಕ್ಷಣ ಮತ್ತು ಚಿಹ್ನೆಗಳು:
ಇದಕ್ಕೆ ಬೇಗ ಕಾಣಿಸಿಕೊಳ್ಳುವ ಯಾವುದೇ ಲಕ್ಷಣಗಳು ಮತ್ತು ಚಿಹ್ನೆಗಳಿಲ್ಲ. ಹಾಗಾಗಿ ಬಹಳಷ್ಟು ಜನರಿಗೆ ತಮಗೆ ಆಸ್ಟಿಯೋಪೋರೊಸಿಸ್ ಇರುವುದೇ ತಿಳಿಯುವುದಿಲ್ಲ.

ಒಂದು ಸಣ್ಣ ಪೆಟ್ಟಿನಿಂದಾಗಿ ಮೂಳೆ ಮುರಿದಲ್ಲಿ ಸಾಮಾನ್ಯವಾಗಿ ಆಸ್ಟಿಯೋಪೋರೊಸಿಸ್ ಇರಬಹುದೆಂದು ಶಂಕಿಸಲಾಗುವುದು. ಬೆನ್ನೆಲುಬು (ಬೆನ್ನುಹುರಿಯ ಎಲುಬುಗಳು) ತೀವ್ರವಾಗಿ ಘಾಸಿಗೊಂಡಾಗ, ಆ ವ್ಯಕ್ತಿಯ ಬೆನ್ನು ಬಾಗಲು ಪ್ರಾರಂಭವಾಗಬಹುದು (ಇದು ವಯಸ್ಸಾದಂತೆ ಗೊತ್ತಾಗುತ್ತದೆ). ಇನ್ನು ಕೆಲವು ವ್ಯಕ್ತಿಗಳಿಗೆ ಮಂದ ನೋವಿದ್ದು, ಅದು ಕೆಲ ಸಮಯ ತೀವ್ರವಾಗಬಹುದು.

# ಆಸ್ಟಿಯೋಪೋರೊಸಿಸ್ ಹೇಗೆ ಬರುತ್ತದೆ:
ಜೀವಿತಾವಧಿಯಲ್ಲಿ ಮೂಳೆಗಳು ನಿರಂತರವಾಗಿ ಬದಲಾಗುತ್ತಿರುತ್ತವೆ. ಹಳೆಯ ಎಲುಬುಗಳು ತೆಗೆಯಲ್ಪಟ್ಟು ಅದನ್ನು ಹೊಸ ಮೂಳೆಗಳು ಬದಲಿಸುತ್ತಿರುತ್ತವೆ. ಮಗು ವಯಸ್ಕನಾಗಿ ಬೆಳೆದಂತೆ ಎಲುಬುಗಳು ಹೆಚ್ಚು ಸಾಂದ್ರ ಮತ್ತು ಬಲಿಷ್ಠವಾಗುತ್ತದೆ. ಆದರೆ, ಮಧ್ಯ ವಯಸ್ಸಿನ ನಂತರ ತೆಗೆಯಲ್ಪಟ್ಟ ಮೂಳೆ ಸಂಪೂರ್ಣವಾಗಿ ಬದಲಿಸಲ್ಪಡುವುದಿಲ್ಲ.

ಮೂಳೆಗಳು ಕ್ರಮೇಣ ತೆಳುವಾಗ ತೊಡಗುತ್ತವೆ. ಹೆಚ್ಚು ವಯಸ್ಸಾದಂತೆ ಎಲುಬಿನ ನಷ್ಟ ಹೆಚ್ಚಾಗುತ್ತ ಹೋಗುತ್ತದೆ. ಕ್ರಮೇಣ ಮೂಳೆಗಳು ಪೆಡಸಾಗುತ್ತವೆ ಹಾಗೂ ಇದರಿಂದ ಆಸ್ಟಿಯೋಪೋರೊಸಿಸ್ ಉಂಟಾಗುತ್ತದೆ.

ಮಹಿಳೆಯರಲ್ಲಿ, ವಿಶೇಷವಾಗಿ ಋತುಸ್ರಾವ ನಿಂತವರಲ್ಲಿ, ಕೆಲವು ಮಧ್ಯ ವಯಸ್ಕರಲ್ಲಿ ಹಾಗೂ ವೃದ್ಧರಲ್ಲಿ, ತೀರಾ ಸಣಕಲು ವ್ಯಕ್ತಿಗಳಲ್ಲಿ ಈ ರೋಗ ಕಂಡು ಬರುತ್ತದೆ.

# ಕಾರಣ:
ಕ್ಯಾಲ್ಷಿಯಂ ಮತ್ತು ವಿಟಮಿನ್ ಡಿ ಸಾಕಷ್ಟು ಸೇವಿಸದಿರುವುದು, ದೈಹಿಕ ಚಟುವಟಿಕೆ ಇಲ್ಲದಿರುವುದು, ದೇಹಕ್ಕೆ ಸೂರ್ಯನ ಬೆಳಕು ಸಾಕಷ್ಟು ಬೀಳದಿರುವುದು, ಧೂಮಪಾನ ಮತ್ತು ಅತಿ ಹೆಚ್ಚು ಮದ್ಯಪಾನ ಮಾಡುವುದು, ಹೆಚ್ಚು ಕಾಫಿ ಟೀ ಅಥವಾ ತಂಪು ಪಾನೀಯ ಸೇವಿಸುವುದು, ಡಯಾಬಿಟಿಸ್ ಅಥವಾ ಹಾರ್ಮೋನುಗಳ ಅಸಮತೋಲನ, ಸ್ಟಿರಾಯ್ಡ್ ಅಥವಾ ಪಾಶ್ರ್ವವಾಯು ಪ್ರತಿರೋಧ ಚಿಕಿತ್ಸೆ, ಯಕೃತ್ತು ಅಥವಾ ಮೂತ್ರಪಿಂಡ ಕಾಯಿಲೆಗಳು, ಕರುಳಿನ ಕಾಯಿಲೆಗಳು ಆಸ್ಟಿಯೋ ಪೋರೋಸಿಸ್‍ಗೆ ಕಾರಣ.

ಆಸ್ಟಿಯೋಪೋರೊಸಿಸ್ ತಪಾಸಣೆ: ಒಂದು ಸಣ್ಣ ಪರೀಕ್ಷೆಯು ಬೆನ್ನು ಹುರಿಯ, ಸೊಂಟದ, ಮುಷ್ಟಿಯ ಅಥವಾ ಹಿಮ್ಮಡಿಯ ಎಲುಬುಗಳ ಸಾಂದ್ರತೆಯನ್ನು (ದಪ್ಪ) ಅಳೆಯುತ್ತದೆ. ಅದು ಎಕ್ಸ್‍ರೇ ರೀತಿಯೇ ಇರುತ್ತದೆ. ವೈದ್ಯರು ಇದನ್ನು ಎಲುಬು ಸಾಂದ್ರ ಮಾಪನ ಪರೀಕ್ಷೆ ಅಥವಾ ಡೆಕ್ಸಾ ಸ್ಕ್ಯಾನ್ (ಡ್ಯುಯಲ್ ಎನರ್ಜಿ ಎಕ್ಸ್‍ರೇ ಅಬ್ಸಾರ್‍ಪ್ಶನ್‍ಮೆಟ್ರಿ) ಎಂದು ಕರೆಯುತ್ತಾರೆ. ಆ ಪರೀಕ್ಷೆ ನಡೆಸಲು 10-15 ನಿಮಿಷಗಳ ಸಮಯ ಸಾಕು.

ಆಹಾರ: ಕ್ಯಾಲ್ಷಿಯಂ ಮತ್ತು ವಿಟಮಿನ್ ಡಿ ಹೆಚ್ಚು ಇರುವ ಆಹಾರವನ್ನು ಸೇವಿಸಿ. ನಿಯಮಿತ ವ್ಯಾಯಾಮ ಮಾಡಿ. ಮುಂಜಾನೆ ಸೂರ್ಯನ ಬೆಳಕಿನಲ್ಲಿ ಸ್ವಲ್ಪ ಸಮಯ ಕಳೆಯಿರಿ. ಕ್ಯಾಲ್ಷಿಯಂ ಮತ್ತು ವಿಟಮಿನ್ ಡಿ ಅನ್ನು ಪೂರಕವಾಗಿ ಸೇವಿಸಿ. ಅದರಲ್ಲೂ ಮಹಿಳೆಯರು ವಿಶೇಷವಾಗಿ ಋತುಸ್ರಾವ ನಿಂತ ನಂತರ, ಪೂರಕವಾಗಿ ಸೇವಿಸಿ.

ಹಾಲು, ಹಸಿರೆಲೆ ತರಕಾರಿಗಳು, ಸೊಪ್ಪುಗಳು, ಮೊಟ್ಟೆಯ ಹಳದಿ ಭಾಗ ಮತ್ತು ಮೀನನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿ. ಸಸ್ಯಾಹಾರಿಗಳು ಹುರುಳಿಕಾಯಿ ಮತ್ತು ರಾಗಿಯನ್ನು ಬಳಸಬಹುದು.

Facebook Comments

Sri Raghav

Admin