ಅನರ್ಹ ಶಾಸಕರರಿಗೆ ಮತ್ತೆ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.12- ಅನರ್ಹ ಶಾಸಕರ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ಮತ್ತೆ ನಿರಾಕರಿಸಿದೆ. ಸ್ಪೀಕರ್ ಆದೇಶ ಪ್ರಶ್ನಿಸಿ ಕಾಂಗ್ರೆಸ್, ಜೆಡಿಎಸ್‍ನ 17 ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಸ್ಪಷ್ಟವಾಗಿ ನಿರಾಕರಿಸಿ ತುರ್ತು ವಿಚಾರಣೆಯ ಅಗತ್ಯತೆಯನ್ನು ಪ್ರಶ್ನಿಸಿದ್ದಾರೆ.

ನ್ಯಾಯಾಲಯದಲ್ಲಿ ಎಲ್ಲಾ ಪ್ರಕರಣಗಳು ಸರದಿಯ ಪ್ರಕಾರವೇ ವಿಚಾರಣೆ ನಡೆಸಲಾಗುತ್ತಿದೆ. ನಿಮ್ಮ ಸರದಿ ಬರುವವರೆಗೂ ಕಾಯಬೇಕು. ನೀವು ಹೇಳಿದ ಹಾಗೆ ಅರ್ಜಿ ತುರ್ತು ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ತುರ್ತು ವಿಚಾರಣೆ ನಡೆಸಬೇಕೆಂದು ಅನರ್ಹ ಶಾಸಕರ ಪರ ವಕೀಲರು ಮತ್ತೆ ನ್ಯಾಯಾಲಯದ ಮುಂದೆ ಮಾಡಿದ ಮನವಿಯನ್ನು ನ್ಯಾಯಾಲಯ ಇಂದು ನಿರಾಕರಿಸಿದ್ದು ಅನರ್ಹ ಶಾಸಕರಿಗೆ ತೀವ್ರ ಹಿನ್ನಡೆಯಾದಂತಾಗಿದೆ. ತುರ್ತು ವಿಚಾರಣೆಯ ನಾಲ್ಕನೇ ಪ್ರಯತ್ನ ಫಲ ನೀಡಿಲ್ಲ. ಸಮ್ಮಿಶ್ರ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚನೆಗೆ ದಾರಿ ಮಾಡಿಕೊಟ್ಟಿದ್ದ ಅನರ್ಹ ಶಾಸಕರ ತ್ರಿಶಂಕು ಸ್ಥಿತಿ ಮುಕ್ತಾಯಗೊಳ್ಳುವ ಸೂಚನೆ ಕಾಣುತ್ತಿಲ್ಲ.

ಸಚಿವರಾಗುವ ಹಾಗೂ ಉಪಚುನಾವಣೆಗೆ ಸ್ಪರ್ಧಿಸುವ ಆಸೆಯಿಟ್ಟುಕೊಂಡಿರುವ ಇವರು ಪ್ರಕರಣ ಶೀಘ್ರ ಇತ್ಯರ್ಥವಾಗದೇ ಇರುವುದರಿಂದ ಸಂದಿಗ್ಧತೆಯಲ್ಲಿ ಸಿಲುಕಿದ್ದಾರೆ. ಈ ಹಿಂದೆ ಅನರ್ಹ ಶಾಸಕರ ಪ್ರಕರಣದ ತುರ್ತು ವಿಚಾರಣೆ ನಡೆಸಲು ನ್ಯಾ| ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ನಿರಾಕರಿಸಿತ್ತು. ಇದೀಗ ನ್ಯಾ.ರಮಣ್ ಅವರು ಕೂಡ ತುರ್ತು ವಿಚಾರಣೆಗೆ ನಿರಾಕರಿಸಿದ್ದಾರೆ.

Facebook Comments