ಭೀಕರ ಪ್ರವಾಹದಿಂದ ಅಸ್ಸಾಂ,ಬಿಹಾರ,ಯುಪಿ ತತ್ತರ : ನೆಲೆಕಳೆದುಕೊಂಡ 40 ಲಕ್ಷ ಮಂದಿ..!

ಈ ಸುದ್ದಿಯನ್ನು ಶೇರ್ ಮಾಡಿ

ಗುವಾಹಟಿ/ಪಾಟ್ನಾ, ಜು.25-ಭಾರೀ ಮಳೆ ಮತ್ತು ಭೀಕರ ಪ್ರವಾಹದಿಂದ ಅಸ್ಸಾಂ, ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳು ತತ್ತರಿಸಿದ್ದು, ಸಾವು-ನೋವು, ಆಸ್ತಿ-ಪಾಸ್ತಿ ನಷ್ಟ ನಂಭವಿಸಿದೆ. ಈ ಮೂರು ರಾಜ್ಯಗಳಲ್ಲೂ 40 ಲಕ್ಷಕ್ಕೂ ಹೆಚ್ಚು ಮಂದಿ ಸಂತ್ರಸ್ತರಾಗಿದ್ದಾರೆ.

ಅಸ್ಸಾಂನಲ್ಲಿ 126 ಸಾವು : ಪ್ರತಿ ಮುಂಗಾರು ಋತುವಿನಲ್ಲಿ ಈಶಾನ್ಯ ರಾಜ್ಯ ಅಸ್ಸಾಂ ನೆರೆ ಹಾವಳಿಗೆ ತುತ್ತಾಗುತ್ತಿದ್ದು, ಈ ವರ್ಷವೂ ಪ್ರಕೃತಿ ವಿಕೋಪದ ದುರಂತ ಪುನರಾವರ್ತನೆಯಾಗಿದೆ.

ಅಸ್ಸಾಂ ವಿವಿಧೆಡೆ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತಗಳಿಂದ ಈವರಗೆ 126 ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ಧಾರೆ. ಅಲ್ಲದೇ ನೆರೆ ಹಾವಳಿಯಿಂದ ಕೆಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಈಶಾನ್ಯ ರಾಜ್ಯದ ಬಾರ್‍ಪೇಟಾ, ಕೋಕ್ರಾಝಾರ್, ಮೊರಿಗಾಂವ್ ಸೇರಿದಂತೆ 26 ಜಿಲ್ಲೆಗಳು ಭಾರೀ ಮಳೆ ಮತ್ತು ನೆರೆ ಹಾವಳಿಗೆ ಸಿಲುಕಿದ್ದು, ಸುಮಾರು 28 ಲಕ್ಷ ಮಂದಿ ತೀವ್ರ ತೊಂದರೆಗೆ ಒಳಗಾಗಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ನೆರೆ ಹಾವಳಿ ನಿಭಾಯಿಸಲು ಕೇಂದ್ರದಿಂದ ಅಗತ್ಯವಾದ ನೆರವು ಮತ್ತು ಸಹಕಾರ ದೊರಕಿಸಿಕೊಡುವುದಾಗಿ ತಿಳಿಸಿದರು.

# ಬಿಹಾರದ 10 ಜಿಲ್ಲೆಗಳು ಅತಂತ್ರ :
ಬಿಹಾರದಲ್ಲೂ ವರುಣಾಘಾತದಿಂದ ಜನರ ತತ್ತರಿಸಿದ್ದಾರೆ. ರಾಜ್ಯ 10 ಜಿಲ್ಲೆಗಳ 74 ತಾಲ್ಲೂಕುಗಳ 529 ಪಂಚಾಯಿತಿ ಪ್ರದೇಶಗಳಲ್ಲಿ ಸುಮಾರು 10 ಲಕ್ಷ ಮಂದಿ ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ.

ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿಯೂ ಭಾರಿ ಮಳೆ ಮತ್ತು ಪ್ರವಾಹದಿಂದ ಸಾವಿರಾರು ಮಂದಿ ಸಂತ್ರಸ್ತರಾಗಿದ್ದು, ಭಾರೀ ನಷ್ಟ ಸಂಭವಿಸಿದೆ.

ಮತ್ತೊಂದು ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದಲ್ಲೂ ಕೆಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಭೂಕುಸಿತಗಳಿಂದ ಸಂಪರ್ಕ ಕಡಿತಗೊಂಡಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.

Facebook Comments

Sri Raghav

Admin