ರಾಮನಗರದಲ್ಲಿ ಆಕ್ಸಿಜನ್ ಬೆಡ್ ಗಳ ಕೊರತೆ ಇಲ್ಲ: ರಾಕೇಶ್ ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ರಾಮನಗರ, ಮೇ 14-ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ಆಕ್ಸಿಜನ್ ಬೆಡ್ ಗಳ ಕೊರತೆ ಇಲ್ಲ‌. ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಮನಗರ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ 394 ಆಕ್ಸಿಜನೇಟಡ್ ಬೆಡ್ ಇದ್ದು 329 ಭರ್ತಿಯಾಗಿರುತ್ತದೆ. 71 ಐ.ಸಿ.ಯುಗಳಿದ್ದು, 43 ಭರ್ತಿಯಾಗಿರುತ್ತದೆ‌. 39 ವೆಂಟಿಲೇಟರ್ ಗಳಿದ್ದು, 23 ಭರ್ತಿಯಾಗಿರುತ್ತದೆ ಎಂದರು.

ಕೈಗಾರಿಕೆಗಳಿಂದ 211 ಮೆಡಿಕಲ್ ಆಕ್ಸಿಜನ್ ಸಂಗ್ರಹಿಸುವ ಸಿಲಿಂಡರ್ ಗಳನ್ನು ಪಡೆಯಲಾಗಿದೆ. ಇದನ್ನು ಸಂಗ್ರಹಿಸಿ ಬಫರ್ ಸ್ಟಾಕ್ ಆಗಿ ಹೆಚ್ಚುವರಿಯಾಗಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಇಡಲಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಚಿಕಿತ್ಸೆ ನೀಡಲು 15 ದಿನಗಳ ಕಾಲ ಸತತ ಕೆಲಸ ನಡೆಸಿ ಹೊಸ ಜಿಲ್ಲಾಸ್ಪತ್ರೆಯಲ್ಲಿ 131 ಬೆಡ್ ಗಳನ್ನು ಸಿದ್ದಪಡಿಸಲಾಗುತ್ತಿದೆ. ಹೆಚ್ಚುವರಿಯಾಗಿ 10 ವೆಂಟಿಲೇಟರ್ ಸಿದ್ಧಪಡಿಸಲಾಗುತ್ತಿದೆ ಎಂದರು.

ಕೋವಿಡ್ ಲಕ್ಷಣಗಳಿದ್ದಲ್ಲಿ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಿ ಸ್ವಯಂ ಚಿಕಿತ್ಸೆ ಮಾಡಿಕೊಂಡು ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ಆಗಮಿಸುತ್ತಿರುವುದರಿಂದ ಹೆಚ್ಚಿನ‌ ಸಾವು ಸಂಭವಿಸುತ್ತಿದೆ. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಸರ್ಕಾರದ ಎಸ್.ಒ.ಪಿ ಯಂತೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಸ್ಪತ್ರೆಗೆ ಹೆಚ್ಚು ಗಂಭೀರವಿರುವ ರೋಗಿಗಳನ್ನು ಚಿಕಿತ್ಸೆಗೆ ಕಳುಹಿಸಿಕೊಡಲಾಗುತ್ತದೆ. ಇದರಿಂದ ಸಾವು ಪ್ರಕರಣಗಳು ಹೆಚ್ಚು ಎಂಬ ಮನೋಭಾವವಿದೆ. ಉಪ ಮುಖ್ಯಮಂತ್ರಿಗಳು ಹಾಗೂ ಸಂಸದರೊಂದಿಗೆ ಭೇಟಿ ನೀಡಿ ಪರಿಶೀಲನೆ ಸಹ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಪ್ರತಿದಿನ 1400 ರಿಂದ 1500 ಕೊವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ರೋಗ ಲಕ್ಷಣವುಳ್ಳವರು ಹಾಗೂ ಕೋವಿಡ್ ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಪರೀಕ್ಷಿಸಲಾಗುತ್ತಿದೆ. ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಹೆಚ್ಚು ಮಾಡಲಾಗುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಆರ್.ಎ.ಟಿ ಪರೀಕ್ಷೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಂದು ಮತ್ತು ಎರಡನೇ ಅಲೆ ಲೆಕ್ಕಾಚಾರ ಮಾಡಿದರೆ ಪಾಸಿಟಿವಿಟಿ ರೇಟ್ ಶೇ.3.94 ಇದ್ದು, ಕಳೆದ ಒಂದು ವಾರದಲ್ಲಿ ಪಾಸಿಟಿವಿಟಿ ರೇಟ್ ಶೇ.11 ಇದೆ .ಡೆತ್ ರೇಟ್ ಶೇ.1.06 ಇದೆ ಎಂದರು.

ಜಿಲ್ಲೆಯಲ್ಲಿ ಲಕ್ಷಣವಿಲ್ಲದ ಸೋಂಕಿತರು ಹಾಗೂ ಸಣ್ಣ ಲಕ್ಷಣವುಳ್ಳವರ ಚಿಕಿತ್ಸೆಯನ್ನು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ನೀಡಲಾಗುತ್ತಿದೆ. 4 ಕೋವಿಡ್ ಕೇರ್ ಸೆಂಟರ್ ಗಳಲ್ಲಿ 405 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು, 276 ಭರ್ತಿಯಾಗಿರುತ್ತದೆ. ಅವಶ್ಯಕತೆ ಇದ್ದಲ್ಲಿ ಹೆಚ್ಚಿನ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು. 2914 ಸೋಂಕಿತರಿಗೆ ಹೋಮ್ ಐಸೊಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ‌.

ಪ್ರತಿ ತಾಲ್ಲೂಕಿನಲ್ಲಿ ಹೋಮ್ ಐಸೊಲೇಷನ್ ರೋಗಿಗಳ ಚಿಕಿತ್ಸೆಗಾಗಿ ಇಬ್ಬರು ಆರ್.ಬಿ.ಎಸ್.ಕೆ ವೈದ್ಯರನ್ನು ನಿಯೋಜಿಸಲಾಗಿದೆ. ರೋಗಿಗಳ ಸ್ಥಿತಿಗತಿಗಳನ್ನು ಪರಿಶೀಲಿಸಲು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಾರ್ ರೂಂ ತೆರೆದು ನೋಡಲ್ ಅಧಿಕಾರಿಗಳನ್ನು ಸಹ ನೇಮಕ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ಸದ್ಯ ಎರಡನೇ ಡೋಸ್ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ 9100 ಡೋಸ್ ಲಸಿಕೆ ಲಭ್ಯವಿದ್ದು, ಎರಡನೇ ಡೋಸ್ ಲಸಿಕೆ ವಿತರಣೆಗೆ ಯಾವುದೇ ತೊಂದರೆ ಇಲ್ಲ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಅವರು ಮಾತನಾಡಿ ಮಾಸ್ಕ್ ಗೆ ಸಂಬಂಧಿಸಿದಂತೆ 38200 ಪ್ರಕರಣಗಳಿಗೆ ದಂಡ ವಿಧಿಸಲಾಗಿದೆ. 846 ವಾಹನವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಕೋವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ 144 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ: ನಿರಂಜನ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ: ಪದ್ಮ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments