40 ವಿಧಾನಸಭೆ ಕ್ಷೇತ್ರಗಳಿಗೆ ತಲಾ 5 ಆಮ್ಲಜನಕ ಸಾಂದ್ರಕ ಹಂಚಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಮೂರನೇ ಅಲೆ ಎದುರಿಸುವುದು ಸೇರಿದಂತೆ ಸದ್ಯ ಕೋವಿಡ್ ಸೋಂಕಿತರಿಗೆ ತಂತ್ರಜ್ಞಾನದ ನೆರವಿನಿಂದ ಅತ್ಯುತ್ತಮ ಚಿಕಿತ್ಸೆ ನೀಡಲು 200 ಆಮ್ಲಜನಕ ಸಾಂದ್ರಕಗಳೂ ಸೇರಿದಂತೆ ‌2.5 ಕೋಟಿ ರೂ. ಮೊತ್ತದ ವಿವಿಧ ಅತ್ಯಾಧುನಿಕ ವೈದ್ಯಕೀಯ ಸಾಮಗ್ರಿಗಳನ್ನು ಕೆಲ ಕಂಪನಿಗಳು ಸಿ-ಕ್ಯಾಂಪ್‌ ಮೂಲಕ ಸರಕಾರಕ್ಕೆ ಕೊಡುಗೆಯಾಗಿ ನೀಡಿವೆ.

ಬೆಂಗಳೂರಿನಲ್ಲಿ ಗುರುವಾರ ಸಿ- ಕ್ಯಾಂಪ್‌ನ ಪ್ರತಿನಿಧಿಗಳು 200 ಆಮ್ಲಜನಕ ಸಾಂದ್ರಕಗಳು, 200 ಸಂಪರ್ಕ ರಹಿತ ಪ್ಯಾರಾಮೀಟರ್‌ ಮಾನಿಟರಿಂಗ್‌ ಘಟಕಗಳು, 15 CPAP+HFNC ಯುನಿಟ್‌ಗಳನ್ನು  ಸಿ-ಕ್ಯಾಂಪ್‌ ಸಂಸ್ಥೆಯ ಸಿಇಒ ಡಾ.ತಸ್ಲೀಮಾರಿಫ್‌ ಸೈಯೀದ್ ಅವರು ರಾಜ್ಯ ಕೋವಿಡ್‌ ಕಾರ್ಯಪಡೆ ಮುಖ್ಯಸ್ಥರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅವರು, ಹುವೈ ಕಂಪನಿಯು 200 ಆಮ್ಲಜನಕ ಸಾಂದ್ರಕಗಳನ್ನು ನೀಡಿದ್ದು, ಇವುಗಳನ್ನು ತಲಾ ಐದರಂತೆ 40 ವಿಧಾನಸಭೆ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗುವುದು ಎಂದರು.

ಟುರ್ಟಲ್‌ ಶೆಲ್‌ ಟೆಕ್ನಾಲಜೀಸ್‌ ಕಂಪನಿ ʼಡಾಸಿʼ ಎನ್ನುವ 200 ಮಾನಿಟರಿಂಗ್‌ ಸಿಸ್ಟಂಗಳನ್ನು ನೀಡಿದೆ. ಸೋಂಕಿತ ವ್ಯಕ್ತಿ ಎಲ್ಲೇ ಇದ್ದರೂ ಇದರ ಮೂಲಕವೇ ಆಕ್ಸಿಜನ್‌, ಪಲ್ಸ್‌ ರೇಟ್, ಬಿಪಿ ಮಟ್ಟವನ್ನು ಪರಿಶೀಲನೆ ಮಾಡಿ ಚಿಕಿತ್ಸೆ ನೀಡಬಹುದು. ಸಿಬ್ಬಂದಿ ಇಲ್ಲದಿದ್ದರೂ ಈ ಯಂತ್ರ ಕರಾರುವಕ್ಕಾದ ಮಾಹಿತಿ ನೀಡುತ್ತದೆ ಎಂದು ಅವರು ಮಾಹಿತಿ ನೀಡಿದರು.

ಇನ್ಯಾಕಲ್‌ ಟೆಕ್ನಾಲಜೀಸ್‌ ಸಂಸ್ಥೆ ವತಿಯಿಂದ ಸೋಂಕಿತರಿಗೆ ಆಮ್ಲಜನಕ ಪೂರೈಕೆ ಮಾಡುವ  CPAP+HFNC ಎನ್ನುವ 15 ಯಂತ್ರಗಳನ್ನು ನೀಡಿದೆ. ಸೋಂಕಿತರ ಆರೋಗ್ಯ ರಕ್ಷಣೆಗೆ ಈ ಯಂತ್ರವು ಪರಿಣಾಮಕಾರಿಯಾಗಿ ಉಪಯೋಗಕ್ಕೆ ಬರುತ್ತದೆ ಎಂದು ಡಿಸಿಎಂ ಹೇಳಿದರು.

ಅಲ್ಲದೆ, ಸಿ-ಕ್ಯಾಂಪ್‌ ಸಂಸ್ಥೆಯು ವ್ಯಾಕ್ಸಿನ್‌ ಅನ್ನು ಯಾವುದೇ ಮಟ್ಟದ ಉಷ್ಣಾಂಷದಲ್ಲೂ ಸಾಗಣೆ ಮಾಡುವಂಥ ಒಂದು ಕಿಟ್‌ ಅನ್ನು ತಯಾರು ಮಾಡಿದೆ. ಅದನ್ನು ಬಳಕೆ ಮಾಡಲು ಮುಂದೆ ಬಂದಿದ್ದು, ಲಸಿಕೆ ಅಭಿಯಾನದಲ್ಲಿ ಈ ಕಿಟ್‌ ಅನ್ನು ಬಳಸಿಕೊಳ್ಳಲಾಗುವುದು ಎಂದರು ಡಿಸಿಎಂ.

ಈ ಯಂತ್ರಗಳನ್ನು ಜನರ ಅನುಕೂಲಕ್ಕಾಗಿ ನೀಡಿದ ಖಾಸಗಿ ಕಂಪನಿಗಳನ್ನು ಅಭಿನಂದಿಸಿದ ಉಪ ಮುಖ್ಯಮಂತ್ರಿ, ಕೋವಿಡ್‌ ಸಂಕಷ್ಟ ಎದುರಿಸಲು ಖಾಸಗಿ ಕ್ಷೇತ್ರದಿಂದ ಮತ್ತಷ್ಟು ನೆರವು ಬಯಸುತ್ತದೆ ಎಂದರು. ರಾಯಚೂರು ಶಾಸಕ ಡಾ.ಶಿವರಾಜ್‌ ಪಾಟೀಲ್‌, ಬಸವಕಲ್ಯಾಣ ಶಾಸಕ ಶರಣು ಸಲಗಾರ್ ಅವರು ಡಿಸಿಎಂ ಅವರಿಂದ ತಲಾ ಐದು ಆಮ್ಲಜನಕ ಸಾಂದ್ರಕಗಳನ್ನು ಸ್ವೀಕರಿಸಿದರು.

ಸಿ- ಕ್ಯಾಂಪ್‌ ಸಂಸ್ಥೆಯ ಸಿಇಒ ಡಾ.ತಸ್ಲೀಮಾರಿಫ್‌ ಸೈಯೀದ್,  ಹುವಾಯ್‌ ಇಂಡಿಯಾ ಕಂಪನಿಯ ಸಹಾಯಕ ಉಪಾಧ್ಯಕ್ಷ ಗಿಲ್ಬರ್ಟ್‌ ನಾಥನ್‌, ಇನ್ಯಾಕಲ್‌ ಟೆಕ್ನಾಲಜೀಸ್‌ ಸಂಸ್ಥೆಯ ಸಹ ಸಂಸ್ಥಾಪಕ ನಿತೇಶ್‌ ಜಾಹಂಗೀರ್‌, ಟುರ್ಟಲ್‌ ಶೆಲ್‌ ಟೆಕ್ನಾಲಜೀಸ್‌ನ ಸಹ ಸಂಸ್ಥಾಪಕ ಮುದಿತ್‌ ದಂಡವತೆ ಈ ಸಂದರ್ಭದಲ್ಲಿ ಇದ್ದರು.

Facebook Comments

Sri Raghav

Admin