ಆಕ್ಸಿಜನ್‌ ಉತ್ಪಾದನಾ ಘಟಕ ಸ್ಥಾಪನೆಗೆ 5-6 ದಿನಗಳಲ್ಲೇ ಅನುಮತಿ : ಜಗದೀಶ ಶೆಟ್ಟರ್‌

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಆಸ್ಪತ್ರೆಗಳಿಗೆ ಆಕ್ಸಿಜನ್‌ ಪೂರೈಕೆ ಹೆಚ್ಚಿಸುವ ನಿಟ್ಟಿನಲ್ಲಿ ಆಕ್ಸಿಜನ್‌ ಉತ್ಪಾದಿಸುವ ಹೊಸ ಘಟಕ ಸ್ಥಾಪನೆಗೆ 5-6 ದಿನಗಳಲ್ಲೇ ಅನುಮತಿ ನೀಡಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದ್ದಾರೆ.

ಕರ್ನಾಟಕ ಉದ್ಯೋಗ ಮಿತ್ರದ ಕಚೇರಿಯಲ್ಲಿ ಮಂಗಳವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಆಕ್ಸಿಜನ್‌ ಪೂರೈಕೆ ಸಮಸ್ಯೆ ಆಗದಂತೆ ನಿಗಾವಹಿಸಲು ಇಲಾಖೆಗಳ ನಡುವೆ ಸಮನ್ವಯ ಸಾಧಿಸುವಂತೆ ನಿರ್ದೇಶನ ನೀಡಿದರು.

“ಡಿಆರ್‌ಡಿಓ ಮಾರ್ಗದರ್ಶನದಲ್ಲಿ ಆಕ್ಸಿಜನ್‌ ಉತ್ಪಾದಿಸುವ ಹೊಸ ಘಟಕಗಳ ಸ್ಥಾಪನೆಗೆ ಉತ್ತರ ಪ್ರದೇಶದಲ್ಲಿ 5-6 ದಿನಗಳಲ್ಲಿ ಅನುಮತಿ ನೀಡಲಾಗಿದ್ದು, ಅವು ಈಗಾಗಲೇ ಕಾರ್ಯಾಚರಣೆ ಆರಂಭಿಸಿವೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಹೊಸ ಘಟಕಗಳ ಸ್ಥಾಪನೆಗೆ ಪರವಾನಗಿ ನೀಡಿ, ಅಗತ್ಯ ಸೌಕರ್ಯ ಕಲ್ಪಿಸಲಾಗುವುದು. ಯೂನಿವರ್ಸಲ್‌ ಏರ್‌ ಪ್ರಾಡಕ್ಟ್‌ ಕಂಪನಿ ಹೊಸ ಘಟಕ ಆರಂಭಿಸಲು ಅನುಕೂಲವಾಗುವಂತೆ ವಿದ್ಯುತ್‌ ಸಂಪರ್ಕ ಹಾಗೂ ಇನ್ನಿತರ ಪರವಾನಗಿ ನೀಡುವ ಸಂಬಂಧ ಸಭೆಯಲ್ಲೇ ನಿರ್ದೇಶನ ನೀಡಲಾಗಿದೆ,” ಎಂದು ತಿಳಿಸಿದರು.

ಆಕ್ಸಿಜನ್‌ ಪೂರೈಕೆ ಸರಪಳಿಗೆ ತೊಂದರೆ ಆಗದಂತೆ ನಾನಾ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಸಾರಿಗೆ ಇಲಾಖೆ, ವಾಣಿಜ್ಯ ತೆರಿಗೆ, ರಾಷ್ಟ್ರೀಯ ಹೆದ್ದಾರಿ, ಇಂಧನ ಮುಂತಾದ ಪ್ರಮುಖ ಇಲಾಖೆಗಳ ಮುಖ್ಯಸ್ಥರಿಗೆ ಅಗತ್ಯ ಸೂಚನೆ ನೀಡಿದ ಸಚಿವರು, ಆಕ್ಸಿಜನ್ ಉತ್ಪಾದನೆ ಹಾಗೂ ಪೂರೈಕೆ ಮಾಡುವ ಸಂಸ್ಥೆಗಳ ಸಮಸ್ಯ ಆಲಿಸಿ ಕೂಡಲೇ ಅದನ್ನು ಬಗೆಹರಿಸುವಂತೆ ನಿರ್ದೇಶನ ನೀಡಿದರು.

# ಆಕ್ಸಿಜನ್‌ ಸಾಗಣೆ ವಾಹನಕ್ಕೆ ಅಡ್ಡಿ ಇಲ್ಲ :
“ಮೆಡಿಕಲ್‌ ಆಕ್ಸಿಜನ್‌ ಸಿಲಿಂಡರ್‌ ಸಾಗಣೆ ಸಂದರ್ಭದಲ್ಲಿ ಯಾವುದೇ ತೊಂದರೆ ಆಗದಂತೆ ಆರ್‌ಟಿಓ ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಟೋಲ್‌ ಗೇಟ್‌ಗಳಲ್ಲಿ ಆಕ್ಸಿಜನ್‌ ವಾಹನಗಳು ತಾಸು ಗಟ್ಟಲೆ ಕಾಯುವಂತೆ ಆಗಬಾರದು. ಹಾಗಾಗಿ, ಅಂಥ ವಾಹನಗಳಿಗೆ ಕೊವಿಡ್‌ ತುರ್ತು ಸೇವೆ ವಾಹನದ ಸ್ಟಿಕರ್‌ ನೀಡಿ, ಆಂಬುಲೆನ್ಸ್‌ ರೀತಿ ಟೋಲ್‌ಗಳಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ನೀಡುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,”ಎಂದರು.

# ಹೆಚ್ಚುವರಿ ಆಕ್ಸಿಜನ್‌ ಪೂರೈಕೆ :
“ಸದ್ಯ ನಗರಕ್ಕೆ 330 ಟನ್‌ ಆಕ್ಸಿಜನ್‌ ಪೂರೈಕೆ ಆಗುತ್ತಿದ್ದು, ಇಂದಿನಿಂದ ಹೆಚ್ಚುವರಿ 40 ಟನ್‌ ಹೆಚ್ಚುವರಿ ಆಕ್ಸಿಜನ್‌ ಪೂರೈಕೆ ಆಗುತ್ತಿದೆ. ಅಗತ್ಯ ಬಿದ್ದರೆ ಇನ್ನೂ ಹೆಚ್ಚು ಆಕ್ಸಿಜನ್‌ ಪೂರೈಕೆ ಮಾಡುವಂತೆ ಜಿಂದಾಲ್‌ ಕಂಪನಿಗೆ ಸೂಚನೆ ನೀಡಲಾಗಿದೆ. ಜತೆಗೆ, ಮೆಡಿಕಲ್‌ ಆಕ್ಸಿಜನ್‌ ಪೂರೈಕೆಗಾಗಿ ಕೈಗಾರಿಕಾ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಉಪಯೋಗಿಸಲು ಅನುಮತಿ ನೀಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಿಂದಲೂ ಹೆಚ್ಚುವರಿ ಆಕ್ಸಿಜನ್‌ ಪೂರೈಕೆ ಸಾಧ್ಯವಾಗಲಿದೆ,” ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಸಂಸದ ತೇಜಸ್ವಿ ಸೂರ್ಯ, ಡ್ರಗ್‌ ಕಂಟ್ರೋಲ್‌, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರು, ಸಾರಿಗೆ ಆಯುಕ್ತರು, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಆಕ್ಸಿಜನ್‌ ಉತ್ಪಾದಕರು ಹಾಗೂ ಪೂರೈಕೆ ಸಂಸ್ಥೆಗಳ ಪ್ರತಿನಿಧಿಗಳು, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಡಾ. ರಾಜ್‌ ಕುಮಾರ್‌ ಖತ್ರಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣಾ , ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ಹೆಚ್‌.ಎಂ. ರೇವಣ್ಣಗೌಡ ಸೇರಿದಂತೆ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು.

Facebook Comments

Sri Raghav

Admin