ಕೇಂದ್ರದ ಅರ್ಜಿ ವಜಾಗೊಳಿಸಿದ ಸುಪ್ರೀಂ: ಕರ್ನಾಟಕಕ್ಕೆ 1200 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆಗೆ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 7- ಕರ್ನಾಟಕ ರಾಜ್ಯಕ್ಕೆ ಪ್ರತಿದಿನ 1200 ಮೆಟ್ರಿಕ್ ಟನ್ ದ್ರವ ರೂಪದ ಆಮ್ಲಜನಕ ಪೂರೈಕೆ ಮಾಡುವಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿರುವ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿದೆ.
ಈ ಮೂಲಕ ಕರ್ನಾಟಕದ ಜನ ನಿಟ್ಟುಸಿರು ಬಿಡುವಂತಾಗಿದೆ. ಕೋವಿಡ್ ಸಂದರ್ಭದಲ್ಲಿ ಹೆಚ್ಚು ಕಾಳಜಿಯಿಂದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಗಳು ಸರ್ಕಾರಗಳಿಗೆ ಬಿಸಿ ಮುಟ್ಟಿಸುತ್ತಿವೆ.

ನಿನ್ನೆ ಕರ್ನಾಕಟ ಹೈಕೋರ್ಟ್ ಹೈಕೋರ್ಟ್ ನ ಮುಖ್ಯನ್ಯಾಯ ಮೂರ್ತಿ ಎ.ಎಸ್.ಒಕಾ ಮತ್ತು ಅರವಿಂದ್ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಕರ್ನಾಟಕಕ್ಕೆ ಅಗತ್ಯವಾದ ಆಮ್ಲಜನಕದ ಬೇಡಿಕೆಯ ಬಗ್ಗೆ ಪರಿಶೀಲನೆ ನಡೆಸಿತ್ತು. ಕೇಂದ್ರ ಸರ್ಕಾರ ಏಪ್ರಿಲ್ 30ರಂದು ಮಂಜೂರು ಮಾಡಿದ್ದ 850 ಮೆಟ್ರಿಕ್ ಟನ್ ಸಾಲುತ್ತಿಲ್ಲ. ಅದಕ್ಕಾಗಿ ಕರ್ನಾಟಕ ಸರ್ಕಾರ ತನ್ನ ಬೇಡಿಕೆಯಷ್ಟು ಆಮ್ಲಜನಕವನ್ನು ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸಬೇಕು. ಅದನ್ನು ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿ ನಾಲ್ಕು ದಿನಗಳಲ್ಲಿ ಕನಿಷ್ಟ ಅಗತ್ಯವಾದ 1200 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಕೆ ಮಾಡಬೇಕು ಎಂದು ಆದೇಶ ನೀಡಿತ್ತು.

ಈ ಆದೇಶವನ್ನು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದು, ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ಮನವಿ ಮಾಡಿತ್ತು. ರಾಜ್ಯ ಸರ್ಕಾರಗಳ ಆಮ್ಲಜನಕಗಳ ಬೇಡಿಕೆಯನ್ನು ಸಮರ್ಪಕ ರೀತಿಯಲ್ಲಿ ಈಡೇರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಪ್ರತಿಯೊಂದು ರಾಜ್ಯಕ್ಕೂ ಆಮ್ಲಜನಕದ ಅಗತ್ಯ ಇರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ದೇಶದ ಪ್ರತಿಯೊಂದ ಹೈಕೋರ್ಟ್ ಆಮ್ಲಜನಕ ಪೂರೈಕೆಯನ್ನು ಹೆಚ್ಚಳ ಮಾಡಬೇಕು ಎಂದು ಆದೇಶ ನೀಡುತ್ತಾ ಹೋದರೆ ಅದನ್ನು ಪಾಲನೆ ಮಾಡುವುದು ಕಷ್ಟವಾಗಲಿದೆ. ಅದಕ್ಕಾಗಿ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಆಮ್ಲಜನಕ ಪೂರೈಕೆ ಸಂಬಂಧ ಪಟ್ಟಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕುಳಿತು ಚರ್ಚೆ ಮಾಡಿ ಲಭ್ಯ ಇರುವುದರಲ್ಲೇ ಹಂಚಿಕೆ ಮಾಡಿಕೊಳ್ಳುತ್ತೇವೆ ಎಂದಿತ್ತು.
ಆಮ್ಲಜನಕ ಪೂರೈಕೆ ಮಾಡುವುದಕ್ಕೆ ನಮ್ಮ ತಕರಾರಿಲ್ಲ. ಆದರೆ ಈ ನಿಟ್ಟಿನಲ್ಲಿ ಹೈಕೋರ್ಟ್ ಆದೇಶಗಳ ಬಗ್ಗೆ ಆತಂಕ ಇದೆ ಎಂದು ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೇಹ್ತಾ ವಾದಿಸಿದ್ದರು.

ಆದರೆ ಕೇಂದ್ರ ಸರ್ಕಾರದ ಅರ್ಜಿಯನ್ನು ಸುಪ್ರೀಂಕೋರ್ಟ್ ಸರಾಸಗಟಾಗಿ ತಳ್ಳಿ ಹಾಕಿದೆ. ಕರ್ನಾಟಕ ಹೈಕೋರ್ಟ್ ಆಮ್ಲಜನಕದ ಬೇಡಿಕೆಯನ್ನು ಸರಿಯಾದ ಮಾಪಕದಲ್ಲಿ ಲೆಕ್ಕಾ ಹಾಕಿದೆ. ಸೂಕ್ತವಾದ ಪರಿಗಣನೆಯನ್ನು ಮಾಡಿದೆ. ನ್ಯಾಯಾಂಗದ ಈ ಕೆಲಸ ಮೆಚ್ಚುವಂತದ್ದು ಎಂದು ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳಾದ ಚಂದ್ರಚೂಡ್ ಹಾಗೂ ಎಂ.ಆರ್.ಶಾ ಅವರ ಪೀಠ ಹೇಳಿದೆ.

ನಾವು ಕರ್ನಾಟಕದ ಜನರನ್ನು ಆಮ್ಲಜನಕದ ಕೊರತೆಯಿಂದ ತತ್ತರಗೊಳ್ಳಲು ಬಿಡುವುದಿಲ್ಲ ಎಂದು ನ್ಯಾಯ ಮೂರ್ತಿಗಳು ಹೇಳುವಾಗ, ಇತ್ತಿಚೆಗೆ ಚಾಮರಾಜನಗರ ಹಾಗೂ ಕಲ್ಬುರ್ಗಿಯಲ್ಲಿ ಪ್ರಾಣವಾಯು ಕೊರತೆಯಿಂದ ಜೀವ ಕಳೆದುಕೊಂಡವರನ್ನು ಸ್ಮರಿಸಿಕೊಳ್ಳಲಾಗಿದೆ.

ಹೈಕೋರ್ಟ್ ನ ಮಾಪನ ಮತ್ತು ಆದೇಶ ಸರಿ ಇದೆ. ಆದರೆ ಎಲ್ಲಾ ನ್ಯಾಯಾಲಯಗಳು ಇದೇ ರೀತಿ ಆದೇಶ ಮಾಡಿದರೆ ಕಷ್ಟವಾಗಲಿದೆ ಎಂದು ಸಾಲಿಸಿಟರ್ ಜನರಲ್ ಹೇಳಲು ಮುಂದಾದಾಗ ಅರ್ಧಕ್ಕೆ ತಡೆದ ನ್ಯಾಯಮೂರ್ತಿ ಚಂದ್ರಚೂಡ್ ಅವರು, ಸಾಧ್ಯವಿಲ್ಲ ಹೈಕೋರ್ಟ್ ಗಳು ಅಥವಾ ನ್ಯಾಯಾಲಯಗಳು ಜನರು ನರಳುತ್ತಿರುವಾಗ ಕಣ್ಣುಮುಚ್ಚಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಖಾರವಾಗಿ ಹೇಳಿದ್ದಾರೆ.
ಹೈಕೋರ್ಟ್ ಆದೇಶದಲ್ಲಿ ಮಧ್ಯ ಪ್ರವೇಶ ಮಾಡಲು ನಾವು ಬಯಸುವುದಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಆಮ್ಲಜನಕದ ಕೊರತೆಯಿಂದ ಕರ್ನಾಟಕದ ಚಾಮರಾಜನಗರದಲ್ಲಿ 24 ಮಂದಿ, ಬೆಂಗಳೂರಿನಲ್ಲಿ ಇಬ್ಬರು, ಕಲ್ಬುರ್ಗಿಯಲ್ಲಿ ನಾಲ್ವರು, ಬೆಳಗಾವಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಕರ್ನಾಟಕದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಆಮ್ಲಜನಕದ ಉತ್ಪಾದನೆಯಿದೆ. ಭವಿಷ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯನ್ನು ಅಂದಾಜು ಮಾಡಿ ರಾಜ್ಯ ಸರ್ಕಾರ ಪ್ರತಿ ದಿನ 1700 ಮೆಟ್ರಿಕ್ ಟನ್ ಪೂರೈಕೆ ಮಾಡುವಂತೆ ಬೇಡಿಕೆ ಸಲ್ಲಿಸಿತ್ತು.

ಆದರೆ ಕೇಂದ್ರ ಸರ್ಕಾರ 300 ಮೆಟ್ರಿಕ್ ಟನ್ ಇದ್ದ ಮಂಜೂರಾತಿಯನ್ನು ಏಪ್ರಿಲ್ 30ರಂದು 850 ಮೆಟ್ರಿಕ್ ಟನ್ ಗೆ ಹೆಚ್ಚಿಸಿತ್ತು. ನಂತರ ಅನ್ನು ಪರಿಸ್ಕರಣೆ ಮಾಡಿ ಸುಮಾರ್ 900 ಮೆಟ್ರಿಕ್ ಟನ್ ಪೂರೈಕೆ ಮಾಡಲಾಗುತ್ತಿತ್ತು. ಪ್ರಸ್ತುತ ದಿನದ ಅಂದಾಜಿನ ಪ್ರಕಾರ ಕನಿಷ್ಟ 1162 ಮೆಟ್ರಿಕ್ ಟನ್ ಆಮ್ಲಜನಕದ ಬೇಡಿಕೆ ಇದೆ. ಎಲ್ಲಾ ಅಂಶಗಳನ್ನು ಪರಿಗಣಿಸಿ ನಿನ್ನೆ ರಾಜ್ಯ ಹೈಕೋರ್ಟ್ 1200 ಮೆಟ್ರಿಕ್ ಟನ್ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.

Facebook Comments