ಶ್ರಮಿಕ ವರ್ಗಕ್ಕೆ ಕನಿಷ್ಠ 5 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡಬೇಕಿತ್ತು: ಎಚ್‌ಕೆಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.4- ಕೋವಿಡ್ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಮತ್ತೊಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡಿರುವುದನ್ನು ಸ್ವಾಗತಿಸಲಾಗುವುದು‌. ಆದರೆ, ಶ್ರಮಿಕ ವರ್ಗಕ್ಕೆ ಘೋಷಿಸಿರುವ ಪ್ಯಾಕೇಜ್ ಏನೇನು ಸಾಲದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ತಿಳಿಸಿದರು.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಶ್ರಮಿಕ ವರ್ಗಕ್ಕೆ ಘೋಷಣೆ ಮಾಡಿರುವ ರಾಜ್ಯ ಸರ್ಕಾರದ ಈ ಪ್ಯಾಕೇಜ್ ಕಣ್ಣೊರೆಸುವ ತಂತ್ರವಾಗಿದೆ ಎಂದು ಟೀಕಿಸಿದರು. ಎರಡು ಬಾರಿ ಮುಖ್ಯಮಂತ್ರಿ ಘೋಷಣೆ ಮಾಡಿರುವ ಪ್ಯಾಕೇಜ್ ನ ಒಟ್ಟು ಮೊತ್ತ 1750 ಕೋಟಿ ರೂ. ಆಗಲಿದೆ. ಈ ಮೊತ್ತದ ಪ್ಯಾಕೇಜ್ ಕಡಿಮೆಯಾಯಿತು. ಕನಿಷ್ಠ 5. ಸಾವಿರ ಕೋಟಿ ರೂಪಾಯಿಯಾದರೂ ಘೋಷಣೆ ಮಾಡಬೇಕಿತ್ತು ಎಂದರು.

ತಲಾ ಎರಡರಿಂದ ಮೂರು ಸಾವಿರ ರೂ. ಪರಿಹಾರ ನೀಡುವುದು ಅವೈಜ್ಞಾನಿಕ. ಈ ಪರಿಹಾರಧನದಿಂದ ಸಂಕಷ್ಟದಲ್ಲಿರುವ ಶ್ರಮಿಕರಿಗೆ ಹೆಚ್ಚಿನ ರೀತಿಯ ಅನುಕೂಲವಾಗುವುದಿಲ್ಲ‌. ತಲಾ 5 ಸಾವಿರ ರೂ. ನೀಡಬೇಕು ಎಂದು ಅವರು ಆಗ್ರಹಿಸಿದರು. ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲಾ ರೀತಿಯ ಅಗತ್ಯವಸ್ತಗಳ ಬೆಲೆಗಳು ಏರಿಕೆಯಾಗಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ನೀಡುವ ಎರಡು ಮೂರು ಸಾವಿರ ರೂ. ಏನೇನು ಸಾಲದು. ಸರ್ಕಾರ ವಾಸ್ತವ ಸ್ಥಿತಿ ಅರ್ಥ ಮಾಡಿಕೊಂಡು ಪ್ಯಾಕೇಜ್ ಪ್ರಮಾಣ ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು‌.

ರಾಜ್ಯ ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿರುವುದು ಸಂದರ್ಭೋಚಿತವಾಗಿದೆ. ಕೋವಿಡ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸನ್ನಿವೇಶಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಆರೋಗ್ಯದ ಹಿತ ಕಾಪಾಡಲು ಪಿಯುಸಿ ಪರೀಕ್ಷೆ ರದ್ದು ಮಾಡುವ ತೀರ್ಮಾನ ಕೈಗೊಂಡಿರುವುದನ್ನು ಸ್ವಾಗತಿಸುವುದಾಗಿ ಅವರು ಹೇಳಿದರು

Facebook Comments