ಇಬ್ಬರಲ್ಲಿ ಕೊರೊನಾ ಪತ್ತೆ, ಪಾದರಾಯನಪುರ ಪುಂಡರು ಬೆಂಗಳೂರಿಗೆ ಶಿಫ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ರಾಮನಗರ, ಏ.24- ಪಾದರಾಯನಪುರದಲ್ಲಿ ದಾಂಧಲೆ ಮಾಡಿದ್ದ ಆರೋಪಿಗಳನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡಿದ್ದು, ಮತ್ತೆ ಅವರನ್ನು ಬೆಂಗಳೂರಿಗೆ ಕರೆತರಲಾಗಿದೆ. ರಾಮನಗರ ಜೈಲಿನಲ್ಲಿದ್ದ 121 ಆರೋಪಿಗಳ ಪೈಕಿ ಇಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ.

ಸೋಂಕು ಕಾಣಿಸಿಕೊಂಡ ಇಬ್ಬರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆತರಲಾಗಿದ್ದು, ಉಳಿದ 119 ಮಂದಿ ಆರೋಪಿಗಳನ್ನು 14 ಬಸ್‍ಗಳ ಮೂಲಕ ಬೆಂಗಳೂರಿಗೆ ಕರೆತರಲಾಯಿತು. ಬಸ್‍ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.ಪಾದರಾಯನಪುರ ಗಲಭೆಯಲ್ಲಿ ಬಂಧಿಸಲಾದ ಆರೋಪಿಗಳನ್ನು ಪರಪ್ಪನ ಅಗ್ರಹಾರದ ಜೈಲಿನಲ್ಲಿ ಇಡಲು ತೀರ್ಮಾನಿಸಲಾಗಿತ್ತು.

ಆದರೆ, ಜೈಲಿನಲ್ಲಿ ಆವಶ್ಯಕತೆಗಿಂತ ಹೆಚ್ಚು ಕೈದಿಗಳು ಇದ್ದ ಕಾರಣ ಆರೋಪಿಗಳ ಕ್ವಾರಂಟೈನ್‍ಗೆ ಅವಕಾಶ ನೀಡುವುದಿಲ್ಲ ಎಂಬ ಉದ್ದೇಶದಿಂದ ಅವರನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಆರೋಪಿಗಳನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡುವ ಮುನ್ನ ಅಲ್ಲಿನ 170ಕ್ಕೂ ಹೆಚ್ಚು ಕೈದಿಗಳನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಗೊಳಿಸಲಾಗಿತ್ತು.

ರಾಮನಗರದಲ್ಲಿದ್ದ ಪಾದರಾಯನಪುರ ಗಲಭೆಕೋರರಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದರಿಂದ 119 ಮಂದಿಯನ್ನು ಬೆಂಗಳೂರಿಗೆ ಕರೆತರಲಾಗಿದ್ದು, ಅವರನ್ನು ಪ್ರತ್ಯೇಕ ಕ್ವಾರಂಟೈನ್ ಸೆಂಟರ್‍ನಲ್ಲಿಡುವ ಸಾಧ್ಯತೆಗಳಿವೆ.

Facebook Comments

Sri Raghav

Admin