ಸ್ಲಂ ನಿವಾಸಿಗಳಿಗೆ ಹಕ್ಕು ನೀಡುವಂತೆ ಪದ್ಮನಾಭರೆಡ್ಡಿ ಆಗ್ರಹ
ಬೆಂಗಳೂರು, ಜು.28-ನಗರದಲ್ಲಿರುವ ಸ್ಲಂಗಳನ್ನು ಗುರುತಿಸಿ ಎಲ್ಲಾ ಕೊಳಗೇರಿ ನಿವಾಸಿಗಳಿಗೆ ಶೀಘ್ರವೇ ಹಕ್ಕುಪತ್ರ ನೀಡಬೇಕೆಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಒತ್ತಾಯಿಸಿದರು. ನಗರದಲ್ಲಿನ ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ಬಿಎಂಟಿಸಿ ವಿಷಯವಾಗಿ ಇಂದು ಕರೆಯಲಾಗಿದ್ದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪದ್ಮನಾಭರೆಡ್ಡಿ ನಗರದಲ್ಲಿ ಸ್ಲಂಗಳು ಎಷ್ಟಿವೆ ಎಂಬುದನ್ನು ಡಿಕ್ಲೇರ್ ಮಾಡಿದ್ದೀರ. ಅವು ಯಾವ ಯಾವ ವಾರ್ಡ್ಗಳಲ್ಲಿವೆ? ಎಷ್ಟು ಅನಧಿಕೃತ ಸ್ಲಂಗಳಿವೆ ಎಂಬ ಬಗ್ಗೆ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸ್ಲಂಗಳ ಅಭಿವೃದ್ಧಿಗೆ ಎಷ್ಟು ಅನುದಾನ ಬಂದಿದೆ? ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಎಷ್ಟು ಹಕ್ಕು ಪತ್ರಗಳನ್ನು ವಿತರಿಸಲಾಗಿದೆ ಎಂಬುದರ ಕುರಿತು ಅಧಿಕಾರಿಗಳಿಂದ ಮಾಹಿತಿ ಕೊಡಿಸಿ. ಪಾಲಿಕೆ ವ್ಯಾಪ್ತಿಯಲ್ಲಿ ಮಂಡಳಿ ಜಾಗವಿಲ್ಲದಿದ್ದರೆ ಅಪಾರ್ಟ್ಮೆಂಟ್ ನಿರ್ಮಿಸಲು ಪಡೆದ ಹಣವನ್ನು ರಾಜ್ಯಸರ್ಕಾರಕ್ಕೆ ಹಿಂದಿರುಗಿಸುವ ಬದಲು ಪಾಲಿಕೆಗೆ ಕೊಟ್ಟರೆ ಅನುಕೂಲವಾಗುತ್ತದೆ. ಆಗ ಪಾಲಿಕೆಯಿಂದಲೇ ಕೊಳಗೇರಿ ನಿವಾಸಿಗಳಿಗೆ ವಸತಿ ಸಮುಚ್ಚಯಗಳನ್ನು ನಿರ್ಮಿಸಬಹುದು ಹಾಗೂ ಸರ್ಕಾರ ಜಾಗ ಮತ್ತು ಮಂಡಳಿ ಅಭಿವೃದ್ಧಿ ಪಡಿಸಿದ ಸ್ಲಂಗಳಲ್ಲಿನ ಮನೆಗಳಿಂದ ಆಸ್ತಿ ತೆರಿಗೆ ಸಂಗ್ರಹಿಸಬಹುದು. ಅಕ್ರಮ-ಸಕ್ರಮ ಮಾಡುವ ಅಧಿಕಾರವನ್ನು ಸರ್ಕಾರ ಪಾಲಿಕೆಗೆ ನೀಡಿದರೆ ಒಳ್ಳೆಯದು ಎಂದು ಸಲಹೆ ನೀಡಿದರು. ಸ್ಲಂ ನಿವಾಸಿಗಳ ಬಗ್ಗೆ ಪಾರದರ್ಶಕ ತನಿಖೆ ನಡೆಸಿ ಅರ್ಹರಿಗೆ ಹಕ್ಕುಪತ್ರ ವಿತರಣೆ ಮಾಡುವಂತೆ ರೆಡ್ಡಿ ಆಗ್ರಹಿಸಿದರು.