ಕೇರಳದ ಅನಂತಪದ್ಮನಾಭ ದೇವಸ್ಥಾನ ವಿವಾದ ಕುರಿತು ಸುಪ್ರೀಂ ಮಹತ್ವದ ತೀರ್ಪು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.13- ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಕೇರಳದ ಐತಿಹಾಸಿಕ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ರಾಜಮನೆತನದ ಸುಪರ್ದಿಗೆ ಸೇರಿದೆ ಎಂದು ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.

ರಾಜಮನೆತನಕ್ಕೆ ಸಭಾಹಿತ ಅಧಿಕಾರ ಅಂದರೆ ಪೂಜೆ ನಡೆಸುವ ಅಧಿಕಾರವಿದ್ದು, ತಿರುವನಂತಪುರ ಜಿಲ್ಲಾ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಲಿದ್ದು, ಸಮಿತಿಯೇ ದೇವಾಲಯದ ಆಡಳಿತವನ್ನು ನೋಡಿಕೊಳ್ಳಲಿದೆ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಆದೇಶ ನೀಡಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಉದಯ್.ಯು ಲಲಿತ್ ಹಾಗೂ ಮಲ್ಹೋತ್ರ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಇಂದು ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿದೆ.

2009ರಲ್ಲಿ ಕೇರಳದ ತಿರುವನಂತಪುರದಲ್ಲಿರುವ ಶ್ರೀ ಅನಂತ ಪದ್ಮನಾಭ ಸ್ವಾಮಿಯ ಪುರಾತನ ದೇಗುಲದಲ್ಲಿ ಅಗಾಧ ಪ್ರಮಾಣದ ಅತ್ಯಮೂಲ್ಯ ಸಂಪತ್ತು ಇರುವುದು ಬಹಿರಂಗವಾಗಿತ್ತು. ಅದಾದ ಬಳಿಕ ಅನಂತ ಸಂಪತ್ತು ಯಾರಿಗೆ ಸೇರಬೇಕು ಎಂಬುದು ವಿವಾದದ ಗೂಡಾಗಿತ್ತು.

ತಿರುವನಂತಪುರದ ಅನಂತ ಪದ್ಮನಾಭ ಸ್ವಾಮಿ ದೇಗುಲದಲ್ಲಿ 5 ಕೊಠಡಿಗಳಲ್ಲಿ 1 ಲಕ್ಷ ಕೋಟಿ ರೂ ಮೌಲ್ಯದ ಪುರಾತನ ಚಿನ್ನ-ಬೆಳ್ಳಿ ,ವಜ್ರ, ವೈಢೂರ್ಯ ಸಂಪತ್ತು ಪತ್ತೆಯಾಗಿತ್ತು. ಆದರೆ ಇನ್ನೊಂದು ಕೊಠಡಿಯ ದ್ವಾರವನ್ನು ಇನ್ನೂ ತೆಗೆದು ಸಂಪತ್ತಿನ ಮೌಲ್ಯಮಾಪನ ನಡೆದಿಲ್ಲ. ಸುಪ್ರೀಂಕೋರ್ಟ್ ಅದಕ್ಕೆ ಈ ಹಿಂದೆ ತಡೆ ನೀಡಿದೆ.

2009ರಲ್ಲಿ ಮಾಜಿ ಅಧಿಕಾರಿ ಟಿ.ಪಿ.ಸುಂದರರಾಜನ್ ಎಂಬುವವರು ಕೇರಳ ಹೈಕೋರ್ಟ್‍ಗೆ ಮನವಿ ಸಲ್ಲಿಸಿ, ಅನಂತ ಪದ್ಮನಾಭ ಸ್ವಾಮಿ ದೇಗುಲದ ಮಾಲೀಕತ್ವವವನ್ನು ತಿರುವಾಂಕೂರು ರಾಜಮನೆತನದಿಂದ ವಾಪಸ್ ಪಡೆದು, ಕೇರಳ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂದು ಕೋರಿದ್ದರು.

ಮಾಲೀಕತ್ವ ಮತ್ತು ಪೂಜೆ ಸಂಬಂಧ 1949ರಲ್ಲಿ ಭಾರತ ಸರ್ಕಾರ ಮತ್ತು ತಿರುವಾಂಕೂರು ರಾಜಮನೆತನ ಮಧ್ಯೆ ಒಪ್ಪಂದ ಏರ್ಪಟ್ಟಿದೆ. ದೇವಸ್ಥಾನ ಸಾರ್ವಜನಿಕ ಸಂಪತ್ತಾಗಿದ್ದರೂ ರಾಜ ಕುಟುಂಬ ಇದನ್ನು ಸ್ವಂತ ಸ್ವತ್ತು ಎಂದೇ ಭಾವಿಸಿದೆ.

ದೇವಸ್ಥಾನದ ಆಡಳಿತದಲ್ಲಿ ರಾಜಕುಟುಂಬದ ಹಸ್ತಕ್ಷೇಪವನ್ನು ತಡೆಯಬೇಕು. ಮಾಜಿ ಮಹಾಲೇಖಪಾಲರಾದ ವಿನೋದ್ ರಾಯ್ ಅವರಿಂದ ವಿಸ್ತಾರ ಆಡಿಟ್ ನಡೆಸಬೇಕು ಎಂದು 500 ಪುಟಗಳ ಸುದೀರ್ಘ ವರದಿಯಲ್ಲಿ ಅಮಿಕಸ್ ಕ್ಯೂರಿ ಗೋಪಾಲ ಸುಬ್ರಮಣ್ಯಂ ಕೋರ್ಟ್ ಗಮನ ಸೆಳೆದಿದ್ದರು.

ಕಳೆದ ಎಂಟು ಹತ್ತು ವರ್ಷಗಳ ಹಿಂದೆ ಕೇರಳದ ಅತ್ಯಂತ ಶ್ರೀಮಂತ ದೇಗುಲ ಅನಂತಪದ್ಮನಾಭ ದೇವಳಂನ ನೆಲ ಮಾಳಿಗೆಯಲ್ಲಿದ್ದ ಕೊಠಡಿಗಳನ್ನು ಪರಿಶೀಲಿಸಲಾಗಿತ್ತು. ಎರಡು ಕೊಠಡಿಗಳ ಸಂಪತ್ತಿನ ಮೌಲ್ಯ ದಾಖಲಿಸಿದಾಗ, ಅಂದಾಜು ಮೌಲ್ಯ ಒಂದು ಲಕ್ಷ ಕೋಟಿ ರೂ. ಮೀರಲಿದೆ ಎಂದು ಲೆಕ್ಕಪರಿಶೋಧಕರು ಹೇಳಿದ್ದರು.

ಅನಂತ ಪದ್ಮನಾಭ ಸ್ವಾಮಿ ದೇಗುಲದ ನೆಲಮಾಳಿಗೆಯಲ್ಲಿರುವ ಆರು ರಹಸ್ಯ ಕೊಠಡಿಗಳ ಪೈಕಿ ಐದು ಕೊಠಡಿಗಳನ್ನು ತೆರೆಯಲಾಗಿದೆ. ಐದು ಕೊಠಡಿಯಲ್ಲಿ ಸಿಕ್ಕಿರುವ ಸಂಪತ್ತು ಎಲ್ಲರನ್ನು ಬೆರಗುಗೊಳಿಸಿದೆ.

ಸುಮಾರು 150 ವರ್ಷಗಳಿಂದ ರಹಸ್ಯವಾಗಿದ್ದ ಈ ಸಂಪತ್ತಿನ ಮೌಲ್ಯ ಸುಮಾರು 1.5 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ನಡುವೆ ಬಿ ಕೊಠಡಿಯ ಬಗ್ಗೆ ಇನ್ನೂ ಸುಪ್ರೀಂಕೋರ್ಟ್ ತೀರ್ಪು ನೀಡಿಲ್ಲ. ದೇಗುಲದ ರಹಸ್ಯ ಹೊರ ತೆಗೆಯಲು ಕಾರಣಕರ್ತರಾಗಿದ್ದ ಅರ್ಜಿದಾರ ಸುಂದರರಾಜನ್ ಮೃತಪಟ್ಟಿದ್ದಾರೆ.

ಮುಖ್ಯ ಕೋಣೆ ಎಂದು ಪರಿಗಣಿಸಲಾದ ವೋಲ್ಟ್-ಬಿ ಅನ್ನು ತೆರೆಯಲು ಬಹಳ ವಿರೋಧ ಇದೆ. ಇದರ ಬಗ್ಗೆ ದಂತಕಥೆಗಳೇ ಇವೆ. ಈ ಕೋಣೆಯಲ್ಲಿರುವ ಅಪಾರ ನಿಧಿ ಸಂಪತ್ತನ್ನು ನಾಗ ಸರ್ಪ ಕಾವಲಿದೆ. ಇದನ್ನು ಯಾರೇ ತೆರೆದರೂ ದಾಳಿ ಮಾಡಿ ಸಾಯಿಸುತ್ತದೆ ಎಂದು ನಂಬಲಾಗಿದೆ.

ಆದರೆ, ಈ ನಿಧಿ ಕೋಣೆಗಳಲ್ಲಿ ಯಾವುದೇ ಅತಿಮಾನುಷ ಶಕ್ತಿ ಇಲ್ಲ ಎಂಬುದು 2011ರಲ್ಲಿ ಸುಪ್ರೀಂ ನಿರ್ದೇಶಿತ ತಂಡ ಸಾಬೀತು ಮಾಡಿತು. ನೆಲಮಾಳಿಗೆಯಲ್ಲಿದ್ದ ಐದು ಕೋಣೆಗಳ ಬಾಗಿಲು ತೆರೆದು ಪ್ರವೇಶಿಸಿ ಒಳಗಿದ್ದ ವಸ್ತುಗಳನ್ನ ಪರಿಶೀಲನೆ ಮಾಡಿತ್ತು. ಆದರೆ, ಪ್ರಮುಖ ಕೋಣೆಯಾದ ವೋಲ್ಟ್-ಬಿ ಬಹಳ ಪವಿತ್ರವಾಗಿದ್ದು, ಇದನ್ನು ತೆರೆದವರಿಗೆ ಸಾವು ಕಟ್ಟಿಟ್ಟ ಬುತ್ತಿ ಎಂಬ ನಂಬಿಕೆ ಬಹಳ ಬಲವಾಗಿದೆ.

ಮಾಜಿ ಮಹಾಲೇಖಪಾಲ (ಸಿಎಜಿ) ವಿನೋದ್ ರಾಯ್ ಅವರು ಈ ನಂಬಿಕೆಯನ್ನು ಸುಳ್ಳೆಂದು ಹೇಳಿದ್ದಾರೆ. ಪದ್ಮನಾಭ ದೇವಸ್ಥಾನದ ಆಸ್ತಿ ಬಗ್ಗೆ ಆಡಿಟ್ ಮಾಡಲು ಸುಪ್ರೀಂ ಕೋರ್ಟ್‍ನಿಂದ ನೇಮಕವಾಗಿದ್ದ ರಾಯ್ 2014ರಲ್ಲಿ ಸಲ್ಲಿಸಿದ ವರದಿಯಲ್ಲಿ ಈ ವಿಚಾರವನ್ನು ಹೊರಗೆಡವಿದ್ದಾರೆ. ವೋಲ್ಟ್-ಬಿ ಕೋಣೆಯನ್ನು ಈಗಾಗಲೇ ಹಲವು ಬಾರಿ ತೆರೆಯಲಾಗಿದೆ.

1990ರಲ್ಲಿ ಎರಡು ಬಾರಿ, ಹಾಗೂ 2002ರಲ್ಲಿ ಐದು ಬಾರಿ ಈ ಕೋಣೆಯ ಬಾಗಿಲು ತೆರೆಯಲಾಗಿರುವುದು ದೇವಸ್ಥಾನದ ಅಧಿಕೃತ ದಾಖಲೆಗಳಿಂದಲೇ ತಿಳಿದುಬರುತ್ತದೆ ಎಂದು ವಿನೋದ್ ರಾಯ್ ತಮ್ಮ ವರದಿಯಲ್ಲಿ ತಿಳಿಸಿದ್ದರು. ಪದ್ಮನಾಭ ದೇವಸ್ಥಾನದ ನಿಧಿ ಕೋಣೆಗಳನ್ನು ತೆರೆಯಲು ಬಲವಾಗಿ ವಿರೋಧಿಸಿದವರಲ್ಲಿ ಟ್ರಾವಂಕೋರ್ ರಾಜಮನೆತನದವರು ಪ್ರಮುಖರು.

ರಾಜಮನೆತನದವರು ಈ ದೇವಸ್ಥಾನವನ್ನು ತಮ್ಮ ಖಾಸಗಿ ಸ್ವತ್ತೆಂಬಂತೆ ವರ್ತಿಸುತ್ತಿದ್ದಾರೆಂದು ಕೆಲ ವಲಯಗಳಲ್ಲಿ ಅಸಮಾಧಾನ ಇದೆ. 1991ರಲ್ಲೇ ಟ್ರಾವಂಕೂರ್‍ನ ಕೊನೆಯ ರಾಜ ಸಾವನ್ನಪ್ಪಿದ್ದಾರೆ. ಈಗ ಅವರ ಕುಟುಂಬಸ್ಥರಿಗೆ ದೇವಸ್ಥಾನದ ನಿರ್ವಹಣೆ ಮುಂದುವರಿಸುವುದು ಸಮಂಜಸವಲ್ಲ. ದೇವಸ್ಥಾನ ನಿರ್ವಹಣೆಗೆ ಮಂಡಳಿ ರಚಿಸಬೇಕೆಂದು ಕೆಲ ಭಕ್ತರು ಬೇಡಿಕೆ ಇಟ್ಟಿದ್ದರು.

Facebook Comments

Sri Raghav

Admin