ಪಾಗಲ್ ಸೀನನನ್ನು ಕೊಂದಿದ್ದ 9 ಮಂದಿ ಆರೋಪಿಗಳು ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.15- ಹಳೇ ದ್ವೇಷದ ಹಿನ್ನೆಲೆಯಲ್ಲಿ ಜೈಲಿನಿಂದ ಹೊರ ಬಂದಿದ್ದ ಶ್ರೀನಿವಾಸ ಅಲಿಯಾಸ್ ಪಾಗಲ್ ಸೀನನನ್ನು ಕೊಲೆ ಮಾಡಿದ್ದ ಒಂಬತ್ತು ಮಂದಿಯನ್ನು ವೈಟ್ ಫೀಲ್ಡ್ ವಿಭಾಗದ ಎಚ್‍ಎಎಲ್ ಠಾಣೆ ಪೊಲೀಸರು ಬಂಸಿದ್ದಾರೆ.

ಸಂತೋಷ (26), ವಿಜಯ್ (24), ಸುರೇಶ್ (21), ಪೀಟರ್ ಕುಮಾರ್ (27), ಲೋಕೇಶ್ (23), ಬಾಲಸುಬ್ರಹ್ಮಣ್ಯಂ (29), ನವಾಜ್ (22), ದಿಲೀಪ (22) ಮತ್ತು ನ್ಯಾಮತ್ ಬಂತರು.

ಜೂ.7ರಂದು ಬೆಳಗ್ಗೆ 8.30 ಗಂಟೆ ಸುಮಾರಿನಲ್ಲಿ ಎಚ್‍ಎಎಲ್ ಪೊಲೀಸ್ ಠಾಣೆ ಸರಹದ್ದಿನ ಎಲ್.ಬಿ.ಶಾಸ್ತ್ರಿ ನಗರದ ಅತ್ತರ್ ಕಾಂಪೌಂಡ್, ಒಂದನೇ ಮೈನ್, ಒಂದನೇ ಕ್ರಾಸಿನಲ್ಲಿರುವ ಜಮೀಲ್ ಅಹಮದ್ ಅವರ ಮನೆಯ ಒಂದನೇ ಮಹಡಿಯ ಶೀಟ್ ಮನೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದ ವ್ಯಕ್ತಿಯನ್ನು ಯಾರೋ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಹೋಗಿರುತ್ತಾರೆ ಎಂದು ಠಾಣೆಗೆ ಮಾಹಿತಿ ಬಂದಿತ್ತು.

ತಕ್ಷಣ ಸ್ಥಳಕ್ಕೆ ಹೋದ ಎಚ್‍ಎಎಲ್ ಠಾಣೆ ಇನ್ಸ್‍ಪೆಕ್ಟರ್ ಮೋಹನ್, ಎಸಿಪಿ ಪಂಪಾಪತಿ ಮತ್ತು ಡಿಸಿಪಿ ಅನುಚೇತ್ ಅವರು ಪರಿಶೀಲನೆ ಮಾಡಿದ್ದು, ಕೊಲೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಈತ ಜೆ.ಪಿ.ನಗರ ಪೊಲೀಸ್ ಠಾಣೆಯ ರೌಡಿ ಶೀಟರ್ ಶ್ರೀನಿವಾಸ ಅಲಿಯಾಸ್ ಪಾಗಲ್ ಸೀನ ಎಂದು ತಿಳಿದು ಬಂದಿದೆ.

ತಕ್ಷಣ ಆರೋಪಿತರನ್ನು ಪತ್ತೆ ಮಾಡಲು ಪೊಲೀಸರು ತಂಡ ರಚನೆ ಮಾಡಿದ್ದರು. ಕೊಲೆಯಾದ ವ್ಯಕ್ತಿ ಶ್ರೀನಿವಾಸ ಮತ್ತು ಆರೋಪಿತರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಆರೋಪಿತರ ಹಿನ್ನೆಲೆ ಮತ್ತು ಅವರ ಅಪರಾಧ ಚಟುವಟಿಕೆಗಳ ಬಗ್ಗೆ ಮಾಹಿತಿ ಕೆಲ ಹಾಕಿ ಕ್ಷಿಪ್ರ ಕಾರ್ಯಾಚರಣೆ ಮಾಡಿ 9 ಮಂದಿ ಆರೋಪಿತರನ್ನು ಬಂಸುವಲ್ಲಿ ಈ ತಂಡ ಯಶಸ್ವಿಯಾಗಿದೆ.

# ಘಟನೆ ಹಿನ್ನೆಲೆ:
ಜೆ.ಪಿ.ನಗರ ಠಾಣೆಯ ರೌಡಿ ಶೀಟರ್ ಶ್ರೀನಿವಾಸ ಅಲಿಯಾಸ್ ಪಾಗಲ್ ಸೀನನ ವಿರುದ್ಧ ಜೆ.ಪಿ.ನಗರ, ಕುಮಾರಸ್ವಾಮಿ ಲೇಔಟ್, ಬನಶಂಕರಿ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಶ್ರೀನಿವಾಸ ಸುಮಾರು 2 ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದನು.

ಶ್ರೀನಿವಾಸ ಮತ್ತು ಆರೋಪಿ ಸಂತೋಷ್ ಸುಮಾರು 7 ವರ್ಷಗಳಿಂದ ಸ್ನೇಹಿತರಾಗಿದ್ದು, ಶ್ರೀನಿವಾಸ ತನ್ನ ಸಹಚರರೊಂದಿಗೆ ಸೇರಿಕೊಂಡು ಮನೆ ಕಳ್ಳತನ, ಗಲಾಟೆ, ಇತರೆ ಚಟುವಟಿಕೆಗಳನ್ನು ಮುಂದುವರೆಸಿದ್ದನು. ಇದರಿಂದ ಸಂತೋಷನಿಗೆ ಶ್ರೀನಿವಾಸನ ಮೇಲೆ ದ್ವೇಷ ಬೆಳೆದಿತ್ತು.

ಇದಲ್ಲದೆ ಬಳ್ಳಾರಿ ಶಿವ ಮತ್ತು ಇತರರು ಸೇರಿ ಸಂತೋಷನ ಸ್ನೇಹಿತನಾದ ಶ್ರೀನಿವಾಸ ಅಲಿಯಾಸ್ ಸ್ಟ್ಯಾಂಡ್ ಕುಟ್ಟಿಯನ್ನು ಕೊಲೆ ಮಾಡಿದ್ದು, ಸೇಡು ತೀರಿಸಿಕೊಳ್ಳಲು ಸಂತೋಷ ಸಂಚು ರೂಪಿಸಿದ್ದನು. ಈ ವಿಷಯ ಬಳ್ಳಾರಿ ಶಿವನ ತಮ್ಮ ಪುನೀತ್‍ಗೆ ತಿಳಿದು ಸಂತೋಷನನ್ನು ಹುಡುಕಿಕೊಡುವಂತೆ ಶ್ರೀನಿವಾಸ್ ಅಲಿಯಾಸ್ ಪಾಗಲ್ ಸೀನನಿಗೆ ಹೇಳಿದ್ದನು.

ಸಂತೋಷ್ ಮತ್ತು ಶ್ರೀನಿವಾಸ ಅಲಿಯಾಸ್ ಪಾಗಲ್ ಸೀನನ ನಡುವೆ ಮನಸ್ತಾಪ ಉಂಟಾದಾಗ ಶ್ರೀನಿವಾಸನು ಸಂತೋಷ್ ಸ್ನೇಹಿತ ವಿಜಯ್ ಜೊತೆ ಸೇರಿಕೊಂಡಿದ್ದನು.

ಆ ಸಂದರ್ಭದಲ್ಲಿ ಶ್ರೀನಿವಾಸನು ಪುನಿತ್ ಜೊತೆ ಸಂಪರ್ಕಿಸಿ 10 ಲಕ್ಷ ಕೊಟ್ಟರೆ ಸಂತೋಷನನ್ನು ಹಿಡಿದುಕೊಡುವುದಾಗಿ ಫೋನ್‍ನಲ್ಲಿ ವಿಜಯ್ ಸಮಕ್ಷಮದಲ್ಲಿ ಮಾತನಾಡಿದ್ದಾನೆ. ಈ ವಿಷಯವನ್ನು ವಿಜಯ್ ಕೇಳಿಸಿಕೊಂಡು ಸಂತೋಷನಿಗೆ ಫೋನ್ ಮೂಲಕ ತಿಳಿಸಿದ್ದಾನೆ.

ಸುಮಾರು ಒಂದು ತಿಂಗಳಿನಿಂದ ಶ್ರೀನಿವಾಸ್ ಎಲ್.ಬಿ.ಶಾಸ್ತ್ರಿನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದನು. ತನ್ನ ಮನೆಗೆ ಹಣ ಮತ್ತು ಗಾಂಜಾವನ್ನು ತೆಗೆದುಕೊಂಡು ಬರುವಂತೆ ವಿಜಯ್‍ಗೆ ಪೀಡಿಸುತ್ತಿದ್ದನು. ಅಲ್ಲದೆ ಹೊಡೆದಿದ್ದನು.

ಆಗಾಗ ಪಾಗಲ್ ಸೀನನ ಮನೆಯ ಹತ್ತಿರ ವಿಜಯ್ ಎಂಬಾತ ಬಂದು ಗಾಂಜಾ ಕೊಟ್ಟು ಹೋಗುತ್ತಿದ್ದನು. ಅಲ್ಲದೆ, ಸಂತೋಷ್ ಸ್ನೇಹಿತರಿಗೆ ಗಾಂಜಾ ಮತ್ತು ಹಣ ತಂದು ಕೊಡದಿದ್ದಕ್ಕೆ ಹಿಂಸೆ ನೀಡಿ ಹೊಡೆದಿದ್ದನು. ಇದಲ್ಲದೆ ಕಳೆದ ಎರಡು ತಿಂಗಳ ಹಿಂದೆ ಗಾಂಜಾ ತಂದು ಕೊಡದ ಪೀಟರ್ ಕುಮಾರ್ ಎಂಬಾತನ ಕಾಲಿಗೆ ಸೀಮೆಎಣ್ಣೆ ಹಾಕಿ ಸುಟ್ಟಿದ್ದನು.

ಇದರಿಂದಾಗಿ ಎಲ್ಲರೂ ಸೇರಿ ಪಾಗಲ್ ಸೀನನ ಮೇಲೆ ಸಿಟ್ಟಾಗಿ ಅವಕಾಶಕ್ಕಾಗಿ ಕಾಯುತ್ತಿದ್ದರು ಶ್ರೀನಿವಾಸ್ ಅಲಿಯಾಸ್ ಪಾಗಲ್ ಸೀನ ಜೂ.7ರಂದು ಬೆಳಗ್ಗೆ 6.15ರ ಸುಮಾರಿನಲ್ಲಿ ಮನೆಯಲ್ಲಿ ಮಲಗಿದ್ದಾಗ ಹಳೇ ದ್ವೇಷದ ಹಿನ್ನೆಲೆಯಲ್ಲಿ ಆರೋಪಿತರೆಲ್ಲರೂ ಸೇರಿ ಒಳಸಂಚು ರೂಪಿಸಿ ಆಟೋ ಮತ್ತು ಬೈಕಿನಲ್ಲಿ ಬಂದು ಡ್ರ್ಯಾಗರ್, ಚಾಕು, ಕಬ್ಬಿಣದ ರಾಡುಗಳಿಂದ ಶ್ರೀನಿವಾಸನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದುದು ತನಿಖೆಯಿಂದ ತಿಳಿದು ಬಂದಿದೆ.

Facebook Comments

Sri Raghav

Admin