ಉಪಚುನಾವಣೆ ನಡೆಯುವ 15 ಕ್ಷೇತ್ರಳಲ್ಲಿ ಮತದಾನಕ್ಕೆ ವೇತನ ಸಹಿತ ರಜೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.21-ರಾಜ್ಯದ ಹದಿನೈದು ವಿಧಾನಸಭೆಗಳ ಉಪಚುನಾವಣೆಗೆ ಮತದಾನ ನಡೆಯುವ ಡಿ.5 ರಂದು ವೇತನ ಸಹಿತ ರಜೆ ಘೋಷಿಸಲು ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ವಿಧಾನಸಭಾ ಕ್ಷೇತ್ರಗಳಾದ ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೆಕೆರೂರು, ರಾಣೆಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮಿಲೇಔಟ್, ಶಿವಾಜಿನಗರ, ಹೊಸಕೋಟೆ, ಕೃಷ್ಣರಾಜಪೇಟೆ, ಹುಣಸೂರು ಕ್ಷೇತ್ರಗಳ ವ್ಯಾಪ್ತಿಯಲ್ಲಿ ರಜೆ ನೀಡುವಂತೆ ಕೋರಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ.

ಮತದಾನ ನಡೆಯುವ ಡಿ.5 ರಂದು ಸರ್ಕಾರಿ, ಖಾಸಗಿ ಶಾಲಾ, ಕಾಲೇಜುಗಳು, ಅನುದಾನಿತ ವಿದ್ಯಾಸಂಸ್ಥೆಗಳು ಎಲ್ಲಾ ಶೈಕ್ಷಣಿಕ ಸಂಸ್ಥೆಗಳೀಗೆ ರಜೆ ನೀಡಬೇಕು. ಹಾಗೆಯೇ ರಾಜ್ಯ, ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರೆ ಬ್ಯಾಂಕ್‍ಗಳು, ಸರ್ಕಾರಿ ಕಾರ್ಖಾನೆಗಳು, ಕೈಗಾರಿಕಾ ಸಂಸ್ಥೆಗಳು, ಸಹಕಾರಿ ರಂಗದ ಸಂಸ್ಥೆಗಳಿಗೂ ರಜೆ ನೀಡಬೇಕಾಗಿದೆ.

ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿನ ಮತದಾರರು ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆಯನ್ನು ಘೋಷಿಸುವಂತೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಸಕ್ಷಮ ಪ್ರಾಧಿಕಾರಗಳಿಗೆ ಸೂಚಿಸಿ ಸೂಕ್ತ ಆದೇಶ ಹೊರಡಿಸಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Facebook Comments