ಜೋರಾಗಿದೆ ಪೈಲ್ವಾನ್ ಅಬ್ಬರ

ಈ ಸುದ್ದಿಯನ್ನು ಶೇರ್ ಮಾಡಿ

ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷೆಯ ಚಿತ್ರವಾದ ಪೈಲ್ವಾನ್ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಹಾಗೂ ಕನ್ನಡಿಗ ಸುನಿಲ್ ಶೆಟ್ಟಿ ಇದೇ ಮೊದಲ ಬಾರಿಗೆ ಜೊತೆಯಾಗಿ ಅಭಿನಯಿಸಿರುವ ಚಿತ್ರ ಪೈಲ್ವಾನ್ ದೇಶಾದ್ಯಂತ ತೆರೆಕಂಡಿದೆ.

ಮೊನ್ನೆ ಚಿತ್ರತಂಡ ಟ್ರೈಲರ್ ಹಾಗೂ ಹಾಡುಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿ ಚಿತ್ರದ ಕುರಿತಂತೆ ಒಂದಷ್ಟು ಮಹತ್ವದ ವಿಚಾರಗಳನ್ನು ಹಂಚಿಕೊಂಡಿತು. ಈ ಸಂದರ್ಭದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಮೊದಲನೆ ಮಗ ಎಂದೇ ಹೇಳಿಕೊಂಡಿರುವ ಸುದೀಪ್‍ಗೆ ಶುಭ ಹಾರೈಸಲು ಆಗಮಿಸಿದ್ದರು.

ಎಸ್. ಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಪೈಲ್ವಾನ್ ಸಿನಿಮಾಗೆ ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು ಬೆಂಬಲ ನೀಡುತ್ತಿದ್ದಾರೆ. ಈ ಹಿಂದೆ ಪುನೀತ್ ರಾಜ್‍ಕುಮಾರ್ ಅವರು ಪೈಲ್ವಾನ್ ಚಿತ್ರದ ಆಡಿಯೋ ರಿಲೀಸ್ ಮಾಡುವ ಮೂಲಕ ಚಿತ್ರತಂಡಕ್ಕೆ ಪ್ರೋತ್ಸಾಹಿಸಿದ್ದರು. ಈಗ ಕ್ರೇಜಿಸ್ಟಾರ್ ಬಂದು ಶುಭ ಹಾರೈಸಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರತಂಡ ಕೇಕ್ ಕಟ್ ಮಾಡಿ ಖುಷಿ ಹಂಚಿಕೊಂಡಿತು.

ಆರ್‍ಆರ್‍ಆರ್ ಮೋಷನ್ಸ್ ಪಿಕ್ಚರ್ಸ್ ಮೂಲಕ ನಿರ್ಮಾಣವಾಗಿರುವ ಈ ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ ಮಾತನಾಡಿ, ಕೃಷ್ಣ ಅವರು ಚಿತ್ರರಂಗದಲ್ಲಿ ತುಂಬಾ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದಾರೆ. ನಮ್ಮ ಚಿತ್ರಕ್ಕೆ ಎಲ್ಲಾ ರಾಜ್ಯಗಳಿಂದಲೂ ಉತ್ತಮವಾಗಿ ಸಪ್ರೋರ್ಟ್ ಸಿಕ್ಕಿದ್ದು ನೋಡಿದರೆ ನಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಎನಿಸಿದೆ ಎಂದು ಹೇಳಿದರು.

ನಂತರ ಕಿಚ್ಚ ಸುದೀಪ್ ಮಾತನಾಡಿ, ಪ್ರೋಮೋಷನ್‍ಗೆ ಹೊರ ರಾಜ್ಯಗಳಿಗೆ ಹೋದಾಗ ಅಲ್ಲಿ ನಮಗೆ ತುಂಬಾ ಸಪ್ರೋರ್ಟ್ ನೀಡಿದರು. ಅದೇ ರೀತಿ ನಾವು ಕೂಡ ಅವರು ನಮ್ಮ ಬಳಿ ಬಂದಾಗ ಪ್ರೋತ್ಸಾಹಿಸಬೇಕು. ಕನ್ನಡ ಚಿತ್ರರಂಗ ಈಗ ತುಂಬಾ ಬೆಳೆಯುತ್ತಿದೆ. ಅದನ್ನು ನಾವೆಲ್ಲ ಸೇರಿ ಉಳಿಸಿಕೊಂಡು ಹೋಗಬೇಕಿದೆ. ಈ ಚಿತ್ರವನ್ನು ನಿರ್ದೇಶಕ ಕೃಷ್ಣ ಬಹಳ ಪ್ರೀತಿಯಿಂದ ಆಸಕ್ತಿ ವಹಿಸಿ ಮಾಡಿದ್ದಾನೆ. ಈ ಚಿತ್ರದ ಹೀರೋ ಕಥೆ ಎಂದೇ ಹೇಳಬಹುದು. ಇಡೀ ತಂತ್ರಜ್ಞರ ಶ್ರಮದ ಫಲವಾಗಿ ಪೈಲ್ವಾನ್ ಬಂದಿದೆ ಎಂದು ಚಿತ್ರದ ಅನುಭವಗಳನ್ನು ಹಂಚಿಕೊಂಡರು.

ನಟ-ನಿರ್ದೇಶಕ ರವಿಚಂದ್ರನ್ ಮಾತನಾಡಿ, ಕುರುಕ್ಷೇತ್ರ ಚಿತ್ರದಲ್ಲಿ ನಾನು ಕೃಷ್ಣನ ಪಾತ್ರ ಮಾಡಿ ಗೆದ್ದೆ. ಅದೇ ರೀತಿ ಈಗ ಈ ಕೃಷ್ಣ ಕೂಡ ಗೆಲ್ಲುವ ಹಾದಿಯಲ್ಲಿದ್ದಾನೆ. ಸುದೀಪ್ ನನಗೆ ತುಂಬಾ ಆತ್ಮೀಯ. ನನ್ನ ಇಬ್ಬರು ಮಕ್ಕಳು ಹೇಗೋ ಹಾಗೆಯೇ ಅವನೂ ಕೂಡ ಒಬ್ಬ. ನಮ್ಮ ಸಂಬಂಧ ಆ ರೀತಿ ಗಾಢವಾಗಿದೆ. ಚಿತ್ರರಂಗದಲ್ಲಿ ಎಲ್ಲರೂ ಬೆಳೆಯಬೇಕು. ಈ ಚಿತ್ರದ ಟ್ರೈಲರ್‍ನಲ್ಲೇ ಒಂದು ಕಿಡಿ ಇದೆ. ಖಂಡಿತ ಈ ಚಿತ್ರಕ್ಕೆ ಯಶಸ್ಸು ಸಿಗುತ್ತದೆ ಎಂದು ತಂಡಕ್ಕೂ ಸೇರಿಸಿ ಶುಭ ಹಾರೈಸಿದರು.

ನಂತರ ನಾಯಕಿ ಆಕಾಂಕ್ಷ ಸಿಂಗ್ ಮಾತನಾಡಿ, ಇದು ನನ್ನ ಮೊದಲ ಕನ್ನಡ ಚಿತ್ರ. ಈ ತಂಡದೊಂದಿಗೆ ಕೆಲಸ ಮಾಡಿದ್ದು ಬಹಳ ಸಂತೋಷವಾಗಿದೆ ಹಾಗೂ ತುಂಬಾ ಕಲಿತಿದ್ದೇನೆ ಎಂದು ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಚಿತ್ರದ ವಿತರಕ ಕೆಆರ್‍ಜಿ ಫಿಲಂಸ್‍ನ ಕಾರ್ತೀಕ್ ಗೌಡ ಕೂಡ ಈ ಸಂದರ್ಭದಲ್ಲಿ ಹಾಜರಿದ್ದು, ಚಿತ್ರದ ಬಗ್ಗೆ ಮಾತನಾಡಿದರು.

ಕನ್ನಡ, ತಮಿಳು, ತೆಲುಗು ಭಾಷೆಯ ಚಿತ್ರ ಇಂದೇ ಬಿಡುಗಡೆಯಾಗಿದ್ದು, ಹಿಂದಿ ಭಾಷೆಯಲ್ಲಿ ಮಾತ್ರ ನಾಳೆ ಬಿಡುಗಡೆಯಾಗಲಿದೆ. ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಸಿಕ್ಸ್‍ಪ್ಯಾಕ್‍ನಲ್ಲಿ ಕಾಣಿಸಿಕೊಂಡು ಕುಸ್ತಿ ಅಖಾಡಕ್ಕೆ ಇಳಿದು ತೊಡೆ ತಟ್ಟಿ ನಿಂತಿದ್ದಾರೆ. ಹಾಗಾಗಿ ಪೈಲ್ವಾನ್ ಕಿಚ್ಚನನ್ನು ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಇನ್ನು ಬಾಲಿವುಡ್‍ನ ಕಬೀರ್ ಸಿಂಗ್ ದುಹಾನ್ ಹಾಗೂ ಸುನೀಲ್ ಶೆಟ್ಟಿ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.  ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿರುವ ಪೈಲ್ವಾನ್ ಅದ್ಧೂರಿಯಾಗಿ ತೆರೆ ಮೇಲೆ ತನ್ನ ಅಬ್ಬರವನ್ನು ಪ್ರದರ್ಶಿಸುತ್ತಿದ್ದಾನೆ.

Facebook Comments