ಹಿಂದೂಗಳ ಭಾವನೆಗೆ ಧಕ್ಕೆ: ಪಾಕ್ ಶಾಸಕನಿಂದ ಕ್ಷಮೆ ಯಾಚನೆ..!

ಈ ಸುದ್ದಿಯನ್ನು ಶೇರ್ ಮಾಡಿ

ಕರಾಚಿ, ಫೆ.25 (ಪಿಟಿಐ)- ಇಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆ ತರುವಂತ ಮಾತನಾಡಿ ಟ್ವೀಟ್ ಮಾಡಿದ್ದ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಸದಸ್ಯನ ವಿರುದ್ಧ ತೀವ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ಷಮೆಯಾಚಿಸಿದ್ದಾರೆ. ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಆಡಳಿತ ಪಕ್ಷದ ಶಾಸಕರೊಬ್ಬರು ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಅಗೌರ ತೋರುವ ರೀತಿ ಹಿಂದೂ ದೇವತೆಯ ಚಿತ್ರವನ್ನು ಟ್ವೀಟ್ ಮಾಡಿದ್ದರ ಬಗ್ಗೆ ಕ್ಷಮೆಯಾಚಿಸಬೇಕು. ಅಲ್ಲದೆ, ಅದನ್ನು ಟ್ವೀಟ್‍ನಿಂದ ಅಳಿಸಿಹಾಕಬೇಕು ಎಂಬ ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಪಾಕಿಸ್ತಾನ್ ತೆರ್ರೀಖ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಅಮಿರ್ ಲಿಯಾಖತ್ ಹುಸ್ಸೇನ್ ಕ್ಷಮೆ ಕೇಳಿದ್ದಾರೆ.

ಹುಸ್ಸೇನ್ ಮೂಲತಃ ವಿರೋಧ ಪಕ್ಷದ ನಾಯಕಿ ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರಿಯಮ್ ನವಾಜ್ ಅವರನ್ನು ಅಪಹಾಸ್ಯ ಮಾಡಲು ಹಿಂದೂ ದೇವತೆಯ ಚಿತ್ರವನ್ನು ಹಾಕಿ ವಿವಾದ ಸೃಷ್ಟಿಸಿದ್ದರು. ಇದು ಈ ಭಾಗದ ಹಿಂದೂ ಸಮುದಾಯದ ಭಾವನೆಗೆ ತೀವ್ರ ಧಕ್ಕೆ ತಂದಿದ್ದು, ಹಿಂದೂ ದೇವತೆಗಳಿಗೆ ಅವಮಾನ ಎಸಗಿದ್ದಾರೆ ಎಂದು ಅವರ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ಹುಸ್ಸೇನ್ ಅವರು ಧಾರ್ಮಿಕ ವಿದ್ವಾಂಸ ಮತ್ತು ಟಿವಿಗಳಲ್ಲಿ ಸುವಾರ್ತ ಬೋಧಕನಾಗಿದ್ದು, ಈತನ ವಿರುದ್ಧ ಹಿಂದೂ ಸಮುದಾಯ, ನಾಗರಿಕರು, ಪ್ರತಿಪಕ್ಷದವರು ತಿರುಗಿಬಿದ್ದ ನಂತರ ಕ್ಷಮೆಯಾಚಿಸಿದ್ದಾರೆ. ಸಿಂಧ್ ಪ್ರಾಂತದ ಥಾರ್ಪರ್ಕರ್‍ನ ಪಿಟಿಐ ವರದಿಗಾರ ರಮೇಶ್ ಕುಮಾರ್ ವಂಕ್ವಾನಿ, ಶಾಸಕ ಹುಸ್ಸೇನ್ ಟ್ವೀಟ್ ಬಗ್ಗೆ ಖಂಡಿಸಿ, ಇದೊಂದು ನಾಚಿಕೆಗೇಡಿ ಕೃತ್ಯ ಎಂದು ಟೀಕಿಸಿದ್ದಾರೆ.

ಇದೇ ಸಿಂಧ್ ಭಾಗದ ಉಮೇರ್‍ಕೋಟ್ ಪ್ರದೇಶದ ಹಿಂದು ಸಮುದಾಯದ ಮತ್ತೊಂದು ಪಕ್ಷದ ಮುಖಂಡ ಲಾಲ್ ಮಾಲ್ಹಿ, ಹುಸ್ಸೇನ್ ಮಾಡಿರುವ ಟ್ವೀಟ್ ಅನ್ನು ಬಲವಾಗಿ ಖಂಡಿಸಿದ್ದಲ್ಲದೆ, ಪಾಕಿಸ್ತಾನಿ ಪ್ರಧಾನ ಮಂತ್ರಿ ಯವರು ಇಂತಹ ತರ್ಕಬದ್ಧವಲ್ಲದ ಕೃತ್ಯವನ್ನು ಗಮನಿಸಿ ಆತನ ವಿರುದ್ಧ ನೋಟೀಸ್ ಜಾರಿಗೊಳಿಸುವಂತೆ ಕೋರಿದ್ದಾರೆ. ಪಾಕಿಸ್ತಾನದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹುಸ್ಸೇನ್ ಹಿಂದು ಸಮುದಾಯವನ್ನು ಕ್ಷಮೆ ಕೇಳಿದ್ದಾರೆ ಎಂದು ವಿರೋಧ ಪಕ್ಷ ಟೀಕಿಸಿದೆ.

ಹುಸ್ಸೇನ್ ಅವರು ಮಾತನಾಡಿ, ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಟ್ವೀಟ್ ಮಾಡಲಿಲ್ಲ. ಅವರ ಭಾವನೆ ಮತ್ತು ದೇವತೆಗಳನ್ನು ಗೌರವಿಸುತ್ತೇನೆ. ಇದರಿಂದ ನನಗೆ ಬುದ್ಧಿ ಬಂದಿದೆ ಎಂದು ಮತ್ತೊಂದು ಟ್ವೀಟ್ ಮಾಡಿ ಕ್ಷಮೆಯಾಚಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

Facebook Comments