ಪಾಸ್‍ಪೋರ್ಟ್ ವಿಚಾರದಲ್ಲಿ ಉಲ್ಟಾ ಹೊಡೆದ ಪಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ಲಾಮಾಬಾದ್,ನ.7 (ಪಿಟಿಐ)- ಸಿಖ್ಖರ ಪರಮೋಚ್ಛ ಧರ್ಮಗುರು ಗುರುನಾನಕ್ ದೇವ್ ಅವರ 550ನೇ ಜನ್ಮ ಜಯಂತಿ ಪ್ರಯುಕ್ತ ನ.9ರಂದು ಉದ್ಘಾಟನೆಗೊಳ್ಳುತ್ತಿರುವ ಕರ್ತಾರ್‍ಪುರ ಕಾರಿಡಾರ್ ಬಳಸಲು ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ ಪಾಸ್‍ಪೋರ್ಟ್ ಕಡ್ಡಾಯವಾಗಿದೆ ಎಂದು ಪಾಕಿಸ್ತಾನ ಹೇಳಿದೆ.

ಕರ್ತಾರ್‍ಪುರ್‍ಗೆ ಆಗಮಿಸುವ ಭಾರತೀಯ ಸಿಖ್ಖ್ ಯಾತ್ರಿಕರಿಗೆ ಪಾಸ್‍ಪೋರ್ಟ್ ಮತ್ತು ವೀಸಾ ಅಗತ್ಯವಿಲ್ಲ ಕೇವಲ ಅಧಿಕೃತ ಗುರುತಿನ ಚೀಟಿ ಇದ್ದರೆ ಸಾಕು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೀಡಿದ್ದ ಹೇಳಿಕೆಗೆ ಇದು ತೀರಾ ವ್ಯತಿರಿಕ್ತವಾಗಿದ್ದು, ಸುಖ್ಖ್ ಸಮುದಾಯದಲ್ಲಿ ಗೊಂದಲ ಮೂಡಿಸಿದೆ.

ಭಾರತದಿಂದ ಗುರುದ್ವಾರ ದರ್ಬಾರ್ ಸಾಹಿಬ್ ಕರ್ತಾರ್‍ಪುರಕ್ಕೆ ತೀರ್ಥಯಾತ್ರೆಗಾಗಿ ಪ್ರಯಾಣಿಸುವ ಸಿಖ್ ಯಾತ್ರಿಕರಿಗೆ ಎರಡು ಪ್ರಮುಖ ಅವಶ್ಯಕತೆಗಳನ್ನು ಮನ್ನಾ ಮಾಡುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಘೋಷಣೆ ಮಾಡಿದ್ದರು. ಆದರೆ ಪಾಕಿಸ್ತಾನ ಸೇನಾಪಡೆಯ ವಕ್ತಾರ ಮೇಜರ್ ಜನರಲ್ ಆಸಿಫ್ ಗಫರ್ ಇಂದು ನೀಡಿರುವ ಪಾಸ್‍ಪೋರ್ಟ್ ಕಡ್ಡಾಯ ಆ ದೇಶದ ದ್ವಂದ್ವ ನಿಲುವಿಗೆ ಸಾಕ್ಷಿಯಾಗಿದೆ.

ಭಾರತೀಯ ಸಿಖ್ ಯಾತ್ರಾರ್ಥಿಗಳು ಇನ್ನು ಮುಂದೆ ತಮ್ಮ ಪಾಸ್ ಪೋರ್ಟ್ ತರಲು ಅಗತ್ಯವಿಲ್ಲ ಮತ್ತು ಕರ್ತಾರ್‍ಪುರ ತೀರ್ಥಯಾತ್ರೆಗೆ ಪಾಕಿಸ್ತಾನಕ್ಕೆ ಪ್ರವೇಶಿಸಲು ಐಡಿ ಮಾತ್ರ ಬೇಕಾಗುತ್ತದೆ. ಭೇಟಿ ನೀಡುವ ಸಿಖ್ಖರು ಇನ್ನು ಮುಂದೆ ಹತ್ತು ದಿನಗಳ ಮುಂಚಿತವಾಗಿ ನೋಂದಾಯಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಇಮ್ರಾನ್ ಖಾನ್ ತಿಳಿಸಿದ್ದರು.

ನವೆಂಬರ್ 9ರಂದು ಕರ್ತಾರ್‍ಪುರ ಕಾರಿಡಾರ್ ಲೋಕಾರ್ಪಣೆ ಮತ್ತು ಗುರುನಾನಕ್ ದೇವ್ ಅವರ 550ನೇ ಜನ್ಮ ದಿನಾಚರಣೆಯಂದು ಯಾತ್ರಾರ್ಥಿಗಳಿಂದ ಯಾವುದೇ ಶುಲ್ಕ(ತಲಾ 20 ಡಾಲರ್)ವಿಧಿಸಲಾಗುವುದಿಲ್ಲ ಎಂದು ಅವರು ಟ್ವಿಟ್‍ನಲ್ಲಿ ವಿವರಿಸಿದ್ದರು.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ನವೆಂಬರ್ 12ರಂದು ಗುರುನಾನಕ್ ಅವರ 550 ನೇ ಜನ್ಮ ದಿನಾಚರಣೆಯ ಮುನ್ನ ಕರ್ತಾರ್ಪುರ್ ಕಾರಿಡಾರ್‍ನ್ನು ಉದ್ಘಾಟಿಸಲಿದ್ದಾರೆ. ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್ ಮಂದಿರದಲ್ಲಿ ತಮ್ಮ ಜೀವಿತಾವಧಿಯ ಕೊನೆಯ 18 ವರ್ಷಗಳನ್ನು ಕಳೆದಿದ್ದರು.

ಕಾಶ್ಮೀರದಲ್ಲಿ ಜಾರಿಯಲ್ಲಿರುವ 370ನೇ ವಿಧಿ ರದ್ದತಿಯಿಂದ ಉಭಯ ದೇಶಗಳ ಮೇಲೆ ಹದಗೆಟ್ಟ ಸಂಬಂಧದ ಹೊರತಾಗಿಯೂ ಗುರುದ್ವಾರಕ್ಕೆ ಭಾರತೀಯ ಯಾತ್ರಾರ್ಥಿಗಳಿಗೆ ವೀಸಾ ಮುಕ್ತ ಭೇಟಿ ನೀಡಲು ಅವಕಾಶ ನೀಡುವ ಕರ್ತಾರ್‍ಪುರ ಕಾರಿಡಾರ್‍ನಲ್ಲಿ ಭಾರತ ಮತ್ತು ಪಾಕಿಸ್ತಾನ ಕಳೆದ ವಾರ ಸಹಿ ಹಾಕಿದ್ದವು. ಈ ಒಪ್ಪಂದವು ಪ್ರತಿದಿನ ಸುಮಾರು 5,000ಕ್ಕೂ ಹೆಚ್ಚು ಭಾರತೀಯ ಸಿಖ್ ಸಮುದಾಯದವರು ಗುರುದ್ವಾರ ದರ್ಬಾರ್ ಸಾಹಿಬ್‍ಗೆ ಭೇಟಿ ನೀಡಲು ಅವಕಾಶ ನೀಡುತ್ತದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಾಲ್ ಜಿಲ್ಲೆಯಲ್ಲಿರುವ ಅಂತಾರಾಷ್ಟ್ರೀಯ ಗಡಿಯಿಂದ ಕೇವಲ 4 ಕಿ.ಮೀ ದೂರದಲ್ಲಿರುವ ಕರ್ತಾರ್‍ಪುರದ ದರ್ಬಾರ್ ಸಾಹಿಬ್‍ನೊಂದಿಗೆ ಭಾರತದ ಪಂಜಾಬ್ ರಾಜ್ಯದ ಗುರುದಾಸ್‍ಪುರ್ ಡೇರಾ ಬಾಬಾ ನಾನಕ್ ದೇವಾಲಯವನ್ನು ಈ ಕಾರಿಡಾರ್ ಸಂಪರ್ಕಿಸುತ್ತದೆ.

Facebook Comments