ಹತರಾದ ಜೈಷ್ ಉಗ್ರರ ಜತೆ ಪಾಕ್ ಲಿಂಕ್ ದೃಢಪಡಿಸಿದ ಎಸ್‍ಎಂಎಸ್

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು, ನ.22- ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ಜಿಲ್ಲೆಯಲ್ಲಿ ಮೊನ್ನೆ ಹತರಾದ ಜೈಷ್-ಎ-ಮಹಮದ್ (ಜೆಇಎಂ) ಉಗ್ರಗಾಮಿ ಸಂಘಟನೆಯ ನಾಲ್ವರು ಉಗ್ರಗಾಮಿಗಳು ಮತ್ತು ಪಾಕಿಸ್ತಾನದ ನಡುವೆ ನೇರ ಸಂಪರ್ಕ ಇರುವುದು ದೃಢಪಟ್ಟಿದೆ. ಹತರಾದ ಉಗ್ರಗಾಮಿಗಳ ಬಳಿ ಇದ್ದ ಮೊಬೈಲ್ ಫೋನ್‍ಗಳಿಗೆ ಪಾಕಿಸ್ತಾನದಿಂದ ಎಸ್‍ಎಂಎಸ್ ಸಂದೇಶಗಳು ಬಂದಿದ್ದ ಸಂಗತಿಗಳು ಈಗ ಬಯಲಾಗಿದೆ.

ಕಾಶ್ಮೀರದ ಕಣವೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಉಗ್ರಗಾಮಿ ಸಂಘಟನೆಯ ನಾಯಕರು ಮತ್ತು ಪಾಕಿಸ್ತಾನಿ ಸೇನೆ ಕುಮ್ಮಕ್ಕು ನೀಡುತ್ತಿರುವುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ. ಉಗ್ರ ನಾಯಕರು ಈ ನಾಲ್ವರು ಉಗ್ರರಿಗೆ ನಿರಂತರವಾಗಿ ಎಸ್‍ಎಂಎಸ್ ಸಂದೇಶಗಳನ್ನು ರವಾನಿಸಿದ್ದ ಸಂಗತಿಯನ್ನು ಗುಪ್ತಚರ ದಳಗಳು ಪತ್ತೆ ಮಾಡಿವೆ.

ಈ ಉಗ್ರರು ಪಾಕಿಸ್ತಾನದ ಜೈಷ್ ಶಿಬಿರದಲ್ಲಿ ವಿಧ್ವಂಸಕ ಕೃತ್ಯಗಳಿಗಾಗಿ ತರಬೇತಿ ಪಡೆದ ಕಮಾಂಡೋಗಳಾಗಿದ್ದು, ಕಾಶ್ಮೀರದೊಳಗೆ ನುಸುಳಲು ಗಾಢ ಕತ್ತಲೆಯಲ್ಲಿ 30 ಕಿ.ಮೀ.ಗಳಷ್ಟು ದೂರ ಕಾಲ್ನಡಿಗೆಯಲ್ಲಿ ತಲುಪಿ ನಂತರ ಕಾರಿನಲ್ಲಿ ನಗ್ರೋಟಾದತ್ತ ಪ್ರಯಾಣಿಸಿದ್ದರು ಎಂಬ ಸಂಗತಿಯೂ ಬಹಿರಂಗಗೊಂಡಿದೆ.

ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ಜಿಲ್ಲೆಯಲ್ಲಿ ನ.19ರಂದು ಮುಂಜಾನೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ನಾಲ್ವರು ಜೈಷ್ ಭಯೋತ್ಪಾದಕರನ್ನು ಯೋದರು ಹೊಡೆದುರುಳಿಸಿದ್ದಾರೆ.  ಹತರಾದ ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜ ಮ್ಮು ನಗರದ ಹೊರವಲಯದಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಭಾರೀ ಕಾರ್ಯಾಚರಣೆಯಿಂದಾಗಿ ಕಣಿವೆ ಪ್ರಾಂತ್ಯ ಕಾಶ್ಮೀರದಲ್ಲಿ ನಡೆಯಬಹುದಾಗಿದ್ದ ಭಾರೀ ವಿಧ್ವಂಸಕ ಕೃತ್ಯ ಮತ್ತು ಡಿಡಿಸಿ ಚುನಾವಣೆಗಳಿಗೆ ಅಡ್ಡಿಯಾಗುವುದು ತಪ್ಪಿದಂತಾಗಿದೆ.
ರಾಷ್ಟ್ರೀಯ ಹೆದ್ಧಾರಿಯಲ್ಲಿರುವ ನಗ್ರೋಟಾದ ಬನ್ ಟೋನ್ ಪ್ಲಾಜಾ ಬಳಿ ಉಗ್ರಗಾಮಿಗಳಿದ್ದ ಕಾರನ್ನು ತಡೆಗಟ್ಟಲು ಭದ್ರತಾ ಸಿಬ್ಬಂದಿ ಯತ್ನಿಸಿದಾಗ ಗುಂಡಿನ ಕಾಳಗ ಆರಂಭವಾಯಿತು.

ಎನ್‍ಕೌಂಟರ್‍ನಲ್ಲಿ ನಾಲ್ವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದ್ದು, ಕಾರು ಮತ್ತು ಅದರದಲ್ಲಿದ್ದ ಎಕೆ-47, ಎಕೆ-56 ರೈಫಲ್‍ಗಳು, ಪಿಸ್ತೂಲ್‍ಗಳು, ಸೋಟಕಗಳು, ಹ್ಯಾಂಡ್ ಗ್ರೆನೇಡ್‍ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

Facebook Comments