ದಾವೂದ್ ನಮ್ಮ ದೇಶದಲ್ಲೇ ಇದ್ದಾನೆಂದು ಕೊನೆಗೂ ಒಪ್ಪಿಕೊಂಡ ‘ಪಾಪಿ’ಸ್ತಾನ..!
ಇಸ್ಲಾಮಾಬಾದ್ : ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಸರಣಿ ಬಾಂಬ್ ಸ್ಫೋಟದ ದಾಳಿಯ ಪ್ರಮುಖ ರೂವಾರಿ ಹಾಗೂ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ತನ್ನ ನೆಲದಲ್ಲಿ ಇರುವುದನ್ನು ಕೊನೆಗೂ ಪಾಕಿಸ್ತಾನ ವಿಶ್ವದ ಮುಂದೆ ಒಪ್ಪಿಕೊಂಡಿದೆ.
ಅಲ್ಲದೇ ಆತನ ವಿರುದ್ಧ ಆರ್ಥಿಕ ದಿಗ್ಬಂಧನ ಕ್ರಮಗಳನ್ನು ಜಾರಿಗೆ ತಂದಿದೆ.ಪಾಕಿಸ್ತಾನ ಸರಕಾರ ಬಿಡುಗಡೆ ಮಾಡಿರುವ ಅಧಿಸೂಚನೆಯಲ್ಲಿ ದಾವೂದ್ ಇಬ್ರಾಹಿಂ ವಿಳಾಸವನ್ನು ವೈಟ್ ಹೌಸ್, ನಿಯರ್ ಸೌದಿ ಮಾಸ್ಕ್, ಕ್ಲಿಫ್ಟನ್ ಇನ್ ಕರಾಚಿ ಎಂದು ನಮೂದಿಸಲಾಗಿದೆ.
ಜೊತೆಗೆ ಹಫೀಜ್ ಸಯ್ಯೀದ್, ಮಸೂದ್ ಅಜರ್ ಸೇರಿದಂತೆ 88 ಉಗ್ರರ ಮೇಲಿನ ನಿರ್ಬಂಧ ಹೆಚ್ಚಳ ಮಾಡಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ. ಈ ಬಗ್ಗೆ ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿದ್ದು,ಇದರೊಂದಿಗೆ, ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಇರುವುದನ್ನು ಆ ದೇಶ ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ ಎನ್ನಲಾಗಿದೆ.
ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದರ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆಯ (ಎಫ್ಎಟಿಎಫ್) `ಬೂದು ಪಟ್ಟಿ’ಯಲ್ಲಿ ಗುರುತಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನದ ಈ ಹೇಳಿಕೆಗೆ ಕಾರಣವೂ ಇಲ್ಲದಿಲ್ಲ. ಜಾಗತಿಕವಾಗಿ ನಿಷೇಧಿಸಲಾಗಿರುವ 88 ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಕಾರಣ, ವಿಶ್ವ ಸಮುದಾಯ ಅದರಲ್ಲೂ ವಿಶ್ವ ಆರ್ಥಿಕ ಕಾರ್ಯಪಡೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು. ಜತೆಗೆ ಪಾಕಿಸ್ತಾನವನ್ನು ಬೂದು ಪಟ್ಟಿಯಿಂದ ಕಪ್ಪು ಪಟ್ಟಿಗೆ ಸೇರಿಸುವುದಾಗಿ ಎಚ್ಚರಿಕೆ ನೀಡಿದೆ.
ಈ ಕಾರಣದಿಂದಾಗಿ ಭಯೋತ್ಪಾದನಾ ಸಂಘಟನೆಗಳು, ಮತ್ತದರ ಮುಖಂಡರಾದ ಹಫೀಜ್ ಸಯೀದ್ ಮಸೂದ್ ಅಝರ್,ದಾವೂದ್ಇಬ್ರಾಹಿಂ ಮೊದಲಾದವರ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸಲಾಗಿದೆ. ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು, ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ.
ಈ ಕುರಿತಾಗಿ ಆಗಸ್ಟ್? 18ರಂದು ಎರಡು ಅಧಿಸೂಚನೆಗಳನ್ನು ಹೊರಡಿಸಿದೆ. ಮುಂಬೈ ದಾಳಿಯ ಸೂತ್ರಧಾರ ಸಂಘಟನೆಯಾದ ಜಮಾತ್ ಉದ್ ದಾವಾ, ಜೈಷ್ -ಎ- ಮಹಮ್ಮದ್ ಸಂಘಟನೆಗಳ ಆರ್ಥಿಕ ಚಟುವಟಿಕೆಗಳ ಮೇಲೆ ನಿಬ್ಂಧ ವಿಧಿಸಲಾಗಿದೆ ಎಂದು ತಿಳಿಸಿತ್ತು.
ಇದೇ ದಾವೂದ್ ವಿಚಾರವಾಗಿ ಭಾರತ ಸಾಕಷ್ಟು ವರ್ಷಗಳ ಪಾಕ್ ಸರ್ಕಾರದ ಮೇಲೆ ಒತ್ತಡ ಹೇರಿತ್ತು. ದಾವೂದ್ ಪಾಕ್ ನಲ್ಲೇ ಇದ್ದು, ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ ಆತನಿಗೆ ಆಶ್ರಯ ನೀಡಿದೆ ಎಂದೂ ವಾದಿಸಿತ್ತು. ಆದರೆ ಅದನ್ನು ದಶಕಗಳ ಕಾಲ ಪಾಕಿಸ್ತಾನ ನಿರಾಕರಿಸುತ್ತಾ ಬಂದಿತ್ತು. ಇದೀಗ ಫತ್ಫ್ ಪಟ್ಟಿ ಭೀತಿ ಹಿನ್ನಲೆಯಲ್ಲಿ ದಾವೂದ್ ಪಾಕಿಸ್ತಾನದಲ್ಲಿರುವುದನ್ನು ಬೇರೆ ದಾರಿ ಇಲ್ಲದೆ ಒಪ್ಪಿಕೊಂಡಿದೆ.
ಪ್ಯಾರಿಸ್ ಮೂಲದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಫತ್ಫ್-ಎಫ್ಎಟಿಎಫ್) 2018 ರ ಜೂನ್ನಲ್ಲಿ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿ ಸೇರಿಸಿತ್ತು. 2019 ರ ಅಂತ್ಯದ ವೇಳೆಗೆ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಈ ಗಡುವನ್ನು ನಂತರ ವಿಸ್ತರಿಸಿತು.
ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡುವುದಕ್ಕೆ ಕಡಿವಾಣ ಹಾಕುವಲ್ಲಿ ಗಂಭೀರ ಪ್ರಯತ್ನ ಮಾಡದ ಕಾರಣ, ಪಾಕಿಸ್ತಾನವನ್ನು ಎಫ್ಎಟಿಎಫ್ 2018ರ ಜೂನ್ನಲ್ಲಿ `ಬೂದು ಪಟ್ಟಿಗೆ’ ಸೇರಿಸಿತ್ತು. ಅಲ್ಲದೇ, 27 ಅಂಶಗಳನ್ನು ಈಡೇರಿಸುವ ಸಲುವಾಗಿ 2019ರ ಅಕ್ಟೋಬರ್ ವರೆಗೆ ಗಡುವು ನೀಡಿತ್ತು. ಆದರೆ, ಈ ಪೈಕಿ 25 ಅಂಶಗಳನ್ನು ಈಡೇರಿಸುವಲ್ಲಿಯೇ ಪಾಕಿಸ್ತಾನ ವಿಫಲವಾಗಿತ್ತು.
ಉಗ್ರ ಸಂಘಟನೆಗಳಾದ ಲಷ್ಕರ್ ಈ ತೋಯ್ಬಾ (ಎಲ್ಇಟಿ), ಜೈಷ್ಎಮೊಹಮ್ಮದ್ (ಜೆಇಎಂ), ಉಗ್ರರ ಚಟುವಟಿಕೆಗಳನ್ನು ಬೆಂಬಲಿಸುವ ಜಮಾತ್ ಉದ್ ದಾವಾ ಹಾಗೂ ಫಲ್ಹಾಎಇನ್ಸಾನಿಯತ್ ಫೌಂಡೇಷನ್ಗಳಿಗೆ ಹಣ ಹರಿದು ಬರುವುದರ ಮೇಲೆ ನಿಗಾ ಇಡುವಂತೆ ಎಫ್ಎಟಿಎಫ್ ಪಾಕಿಸ್ತಾನಕ್ಕೆ ಸೂಚಿಸಿತ್ತು.
ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ವಿದೇಶಗಳಿಂದ ಸಾಲ ಅಥವಾ ಆರ್ಥಿಕ ನೆರವು ಪಡೆಯಲು ಎಫ್ಎಟಿಎಫ್ನ ಬೂದು ಪಟ್ಟಿಯಿಂದ ಹೊರಬರಬೇಕಿದೆ. ಇದಕ್ಕಾಗಿ ಎಲ್ಲ ಕಸರತ್ತುಗಳನ್ನು ನಡೆಸುತ್ತಿದೆ. 1993ರ ಮುಂಬಯಿ ಸರಣಿ ಬಾಂಬ್ ಸ್ಫೋಟ ನಂತರ ಪ್ರಮುಖ ರೂವಾರಿ ದಾವೂದ್ ಇಬ್ರಾಹಿಂ ದೇಶ ಬಿಟ್ಟು ಪರಾರಿಯಾಗಿ ದುಬೈ ಹಾಗೂ ಇತರೆ ಸೌದಿ ದೇಶಗಳಲ್ಲಿ ನೆಲೆಸಿ ಕೊನೆಗೆ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದಾನೆ.