ವಿಶ್ವವೇ ಕೊರೋನಾದಿಂದ ನಲುಗುತ್ತಿದ್ದರೆ ಇತ್ತ ನೀಚ ಕೆಲಸಕ್ಕಿಳಿದ ಪಾಪಿ ಪಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಶ್ರೀನಗರ, ಏ.16-ಕಿಲ್ಲರ್ ಕೊರೊನಾ ಹಾವಳಿಯಿಂದ ಇಡೀ ವಿಶ್ವವೇ ನಲುಗುತ್ತಿರುವಾಗಲೇ, ಪಾಕಿಸ್ತಾನ ಈ ಸಂಕಷ್ಟ ಸ್ಥಿತಿಯಲ್ಲಿಯೂ ಶಕುನಿ ದುರ್ಬದ್ಧಿಯ ಕುತಂತ್ರಕ್ಕೆ ಕೈ ಹಾಕಿದೆ. ಭಾರತೀಯ ಸೇನಾ ಪಡೆಗಳನ್ನು ಗುರಿಯಾಗಿಟ್ಟುಕೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪಾಕಿಸ್ತಾನ ಹುನ್ನಾರ ನಡೆಸುತ್ತಿದೆ.

ಇದಕ್ಕಾರಿ ಲಷ್ಕರ್-ಎ-ತೈಬಾ (ಎಲ್‍ಇಟಿ) ಸಂಘಟನೆ ಜೊತೆ ಸೇರಿ ಎರಡು ಹೊಸ ಭಯೋತ್ಪಾದನೆ ಗುಂಪುಗಳನ್ನು ರಚಿಸಿದೆ. ಈ ಆತಂಕಕಾರಿ ಸಂಗತಿಯನ್ನು ಗುಪ್ತಚರ ಮೂಲಗಳು ಬಹಿರಂಗಗೊಳಿಸಿವೆ. ಕಾಶ್ಮೀರ ಕಣಿವೆಯ ಗಡಿ ಪ್ರದೇಶಗಳಲ್ಲಿ ದೇಶ ರಕ್ಷಣೆಗೆ ನಿಂತಿರುವ ಭಾರತೀಯ ಯೋಧರ ಮೇಲೆ ಭಾರೀ ದಾಳಿ ನಡೆಸುವುದು ಪಾಕಿಸ್ತಾನದ ದುರುದ್ದೇಶವಾಗಿದೆ. ಇದಕ್ಕಾಗಿ ದಿ ರೆಸಿಸ್ಟಂಟ್ ಫ್ರಂಟ್ (ಟಿಆರ್‍ಎಫ್) ಮತ್ತು ತೆಹ್ರಿಕ್-ಎ-ಮಿಲಾತ್-ಎ-ಇಸ್ಲಾಮಿ (ಟಿಎಂಐ) ಎಂಬ ಹೊಸ ಉಗ್ರಗಾಮಿ ಬಣಗಳನ್ನು ರಚಿಸಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನ ಬೇಹುಗಾರಿಕ ಸಂಸ್ಥೆಯಾದ ಐಎಸ್‍ಐ ಮತ್ತು ಪಾಕ್ ಸೇನೆಯೂ ಇದಕ್ಕೆ ಕುಮ್ಮಕ್ಕು ನೀಡಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಅತ್ಯುಗ್ರ ಭಯೋತ್ಪಾದನೆ ಸಂಘಟನೆಯಾದ ನಿಷೇಧಿತ ಲಷ್ಕರ್-ಎ-ತೈಬಾದ ನೆರವನ್ನು ಐಎಸ್‍ಐ ಇದಕ್ಕಾಗಿ ಪಡೆದುಕೊಂಡಿದೆ ಎಂಬುದು ದೃಢಪಟ್ಟಿದೆ.

ಮತ್ತೊಂದು ಕಳವಳಕಾರಿ ಸಂಗತಿ ಎಂದರೆ ಈಗಾಗಲೇ ದಿ ರೆಸಿಸ್ಟಂಟ್ ಫ್ರಂಟ್ (ಟಿಆರ್‍ಎಫ್) ಮತ್ತು ತೆಹ್ರಿಕ್-ಎ-ಮಿಲಾತ್-ಎ-ಇಸ್ಲಾಮಿ (ಟಿಎಂಐ) ಎಂಬ ಹೊಸ ಉಗ್ರಗಾಮಿ ಗುಂಪುಗಳು ಈಗಾಗಲೇ ಕಾಶ್ಮೀರ ಕಣಿವೆಯ ವಿವಿಧೆಡೆ ಸಕ್ರಿಯವಾಗಿವೆ. ಯೋಧರೂ ಸೇರಿದಂತೆ ಸೇನಾ ನೆಲೆಗಳ ಮೇಲೆ ದಾಳಿಗೆ ಸೂಕ್ತ ಪೂರ್ವ ಯೋಜನೆ ರೂಪಿಸಿದ್ದು ಸಮಯಾವಕಾಶಕ್ಕಾಗಿ ಹೊಸ ಉಗ್ರಗಾಮಿಗಳು ಕಾಯುತ್ತಿದ್ದಾರೆ.

ಇವರಿಗೆಲ್ಲ ಎಲ್‍ಇಟಿ ಕಮಾಂಡರ್‍ಗಳು ಸಾಕಷ್ಟು ತರಬೇತಿ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.ಈ ಮಧ್ಯೆ, ಟಿಎಂಐ ಕಮಾಂಡರ್ ನಯೀಂ ಫೀರ್ದೌಸ್ ಆಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಕಣಿವೆ ಪ್ರಾಂತ್ಯದಲ್ಲಿರುವ ಎಲ್ಲ ಉಗ್ರಗಾಮಿ ಬಣಗಳು ಒಗ್ಗೂಡಬೇಕು. ಯೋಧರು, ಸೇನಾ ನೆಲೆಗಳು ಮತ್ತು ಸೂಕ್ಷ್ಮ ಪ್ರದೇಶಗಳ ಮೇಲೆ ಭಯಾನಕ ದಾಳಿ ನಡೆಸಬೇಕೆಂದು ಸಲಹೆ ಮಾಡಿದ್ದಾನೆ.

ದಿ ರೆಸಿಸ್ಟಂಟ್ ಫ್ರಂಟ್(ಟಿಆರ್‍ಎಫ್) ಮತ್ತು ತೆಹ್ರಿಕ್-ಎ- ಮಿಲಾತ್-ಎ-ಇಸ್ಲಾಮಿ (ಟಿಎಂಐ) ಭಯೋತ್ಪಾದನೆ ಸಂಘಟನೆಗಳು ಈಗಾಗಲೇ ಸೋಷಿಯಲ್ ಮೀಡಿಯಾ ಮತ್ತು ವಾಟ್ಸ್‍ಆಪ್‍ಗಳಲ್ಲಿ ಸಂದೇಶಗಳನ್ನು ರವಾನಿಸುತ್ತಿವೆ ಎಂದು ಮೂಲಗಳು ಹೇಳಿವೆ. ಈ ಎರಡೂ ಬಣದ ಉಗ್ರರನ್ನು ಜೆಕೆ ಫೈಟರ್‍ಗಳೆಂದೂ ಸಹ ಗುರುತಿಸಲಾಗಿದೆ. ಎಲ್‍ಇಟಿ ಬಣದೊಂದಿಗೆ ನಿಕಟ ಸಂಪರ್ಕ ಹೊಂದಿವೆ.

ಕೊರೊನಾ ವ್ಯಾಪನೆ ಹಿನ್ನೆಲೆಯಲ್ಲಿ ಭಾರತೀಯ ಸೇನಾ ಪಡೆ ಪಿಡುಗು ನಿವಾರಣೆಯತ್ತ ಹೆಚ್ಚು ಗಮನ ಹರಿಸಿರುವ ಸಂದರ್ಭದಲ್ಲಿ ದುರುಪಯೋಗ ಮಾಡಿಕೊಂಡು ಕಣಿವೆ ಪ್ರಾಂತ್ಯದಲ್ಲಿ ದಾಳಿ ನಡೆಸುವುದು ಹೊಸ ಉಗ್ರರ ಹುನ್ನಾರವಾಗಿದೆ. ಈ ಹಿನ್ನೆಲೆಯಲ್ಲಿ ಕಣಿವೆ ಪ್ರಾಂತ್ಯದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

Facebook Comments

Sri Raghav

Admin