ಭಾರತದಲ್ಲಿ ಶಾಂತಿ ಕದಡಲು ಪಾಕ್ ಕೆ-2 ಕುತಂತ್ರ ಬಹಿರಂಗ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.23- ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಸೇರಿದಂತೆ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಗಳನ್ನು ಎಸಗಿ ಶಾಂತಿ ಕದಡಲು ಪಾಕಿಸ್ತಾನ ರೂಪಿಸಿರುವ ಮತ್ತೊಂದು ಆತಂಕಕಾರಿ ಕುತಂತ್ರ ಬಯಲಾಗಿದೆ. ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‍ಐ ಈ ಉದ್ದೇಶಕ್ಕಾಗಿ ಖಲಿಸ್ತಾನ ಉಗ್ರಗಾಮಿಗಳೊಂದಿಗೆ ಕೈ ಜೋಡಿಸಿದ್ದು, ಕಾಶ್ಮೀರ, ಖಲಿಸ್ತಾನ ರೆಫರ್ಯಾಂಡಮ್ ಫ್ರಂಟ್ (ಕೆಕೆಆರ್‍ಎಫ್ ಅಥವಾ ಕೆಕೆ-2) ಎಂಬ ಹೊಸ ಉಗ್ರಗಾಮಿ ಸಂಘಟನೆಯನ್ನು ಸ್ಥಾಪಿಸಿದೆ. ಇದನ್ನು ನಿರ್ವಹಿಸುವ ಸಂಪೂರ್ಣ ಹೊಣೆಯನ್ನು ಖಲಿಸ್ತಾನ ಉಗ್ರಗಾಮಿ ಮುಖಂಡರಿಗೆ ವಹಿಸಲಾಗಿದೆ.

ಪಂಜಾಬ್, ಹರಿಯಾಣ ಸೇರಿದಂತೆ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಸಮಯ ಕಾಯುತ್ತಿರುವ ಖಲಿಸ್ತಾನ ಉಗ್ರರೊಂದಿಗೆ ಐಎಸ್‍ಐ ಮತ್ತು ಕಾಶ್ಮೀರ ಭಯೋತ್ಪಾದಕರು ಕೈ ಜೋಡಿಸಿ ಈ ಹೊಸ ಭಯೋತ್ಪಾದನಾ (ಕೆಕೆ-2) ಸಂಘಟನೆಯನ್ನು ಸ್ಥಾಪಿಸಿದ್ದಾರೆ.

ಈ ಸಂಘಟನೆಗೆ ಹೊಸದಾಗಿ ಯುವಕರನ್ನು ನೇಮಕ ಮಾಡಿಕೊಂಡು ಅವರಿಗೆ ಪಾಕಿಸ್ತಾನ ಸೇನೆಯ ಮೂಲಕ ಶಸ್ತ್ರಾಸ್ತ್ರಗಳ ತರಬೇತಿ ನೀಡಿ ನಿರುದ್ಯೋಗಿಗಳ ಸೋಗಿನಲ್ಲಿ ಭಾರತದೊಳಗೆ ನುಸುಳಿಸಿ ವಿಧ್ವಂಸಕ ಕೃತ್ಯ ಎಸಗುವುದು ಕೆಕೆ-2 ಹೊಸ ಉಗ್ರಗಾಮಿ ಸಂಘಟನೆಯ ಉದ್ದೇಶವಾಗಿದೆ.

ಈಗಾಗಲೇ ಪಂಜಾಬ್‍ನಲ್ಲಿ ಖಲಿಸ್ತಾನಿ ಉಗ್ರರು ಸಕ್ರಿಯವಾಗಿದ್ದು, ಪಾಕಿಸ್ತಾನದ ಭಯೋತ್ಪಾದಕರಿಂದ ಈಗಾಗಲೇ ಡ್ರೋಣ್‍ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಪಡೆಯಲು ನಡೆಸಿದ ಯತ್ನ ವಿಫಲವಾಗಿದೆ.

ಪಾಕ್ ಉಗ್ರರು ಮತ್ತು ಖಲಿಸ್ತಾನ ಭಯೋತ್ಪಾದಕರ ಸೇನೆ ತೀವ್ರ ನಿಗಾ ವಹಿಸಿರುವುದರಿಂದ ಕೆಕೆ-2 ಸಂಘಟನೆ ಮೂಲಕ ಹೊಸ ಯುವ ಪಡೆಯನ್ನು ರೂಪಿಸಿ ಅವರನ್ನು ವಿಧ್ವಂಸಕ ಕೃತ್ಯಕ್ಕೆ ಇಳಿಸಲು ಹುನ್ನಾರ ನಡೆಸಲಾಗಿದೆ. ಈ ಬಗ್ಗೆ ಖಚಿತ ಸುಳಿವು ಲಭಿಸಿದ್ದು, ಕಾಶ್ಮೀರ ಮತ್ತು ಪಂಜಾಬ್‍ನಲ್ಲಿ ಖಲಿಸ್ತಾನ ಉಗ್ರರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.

Facebook Comments