ವರ್ಷದ ಮೊದಲ ದಿನವೇ ಗಡಿಯಲ್ಲಿ ಪಾಕ್ ಸೈನಿಕರ ಪುಂಡಾಟ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು,ಜ.2-ಹೊಸ ವರ್ಷದ ಮೊದಲ ದಿನವೇ ಜಮ್ಮು ಮತ್ತು ಕಾಶ್ಮೀರ ಪ್ರಾಂತ್ಯದ ಗಡಿಯಲ್ಲಿ ಪಾಕಿಸ್ತಾನ ಯೋಧರು ಪುಂಡಾಟ ನಡೆಸಿದ್ದಾರೆ. ಜಮ್ಮುವಿನ ಪೂಂಚ್ ಜಿಲ್ಲೆಯ ಕೃಷ್ಣಘಾಟಿಯಲ್ಲಿನ ಗಡಿನಿಯಂತ್ರಣ ರೇಖೆ ಬಳಿ ಭಾರತೀಯ ಮುಂಚೂಣಿ ಸೇನಾ ನೆಲೆಗಳು ಮತ್ತು ಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ನಿನ್ನೆ ರಾತ್ರಿ ಪಾಕಿಸ್ತಾನ ಯೋಧರು ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದರು ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಶೆಲ್‍ಗಳ ಮೂಲಕ ಪಾಕಿಸ್ತಾನಿ ಯೋಧರು ಗಡಿಪ್ರದೇಶಗಳ ಮೇಲೆ ಗುಂಡಿನ ಸುರಿಮಳೆ ಸುರಿಸಿದರು. ಪಾಕಿಸ್ತಾನ ಸೇನೆಯ ಕದನ ವಿರಾಮ ಉಲ್ಲಂಘನೆ ಮತ್ತು ಅಪ್ರಚೋದಿತ ದಾಳಿಗೆ ನಮ್ಮ ಸೇನಾ ಪಡೆಗಳು ದಿಟ್ಟ ಪ್ರತ್ಯುತ್ತರ ನೀಡಿದವು.

ಕೆಲಕಾಲ ಗುಂಡಿನ ಚಕಮಕಿ ನಂತರ ಗಡಿಭಾಗದಲ್ಲಿ ಬಂದೂಕುಗಳ ಮೊರೆತ ನಿಂತಿತು. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಇದು ಪಾಕಿಸ್ತಾನದ ವರ್ಷದ ಮೊದಲ ಕದನ ವಿರಾಮ ಉಲ್ಲಂಘನೆ, ಅಪ್ರೇರಿತ ದಾಳಿಯಾಗಿದೆ.

Facebook Comments