ವಸತಿ ಪ್ರದೇಶದಲ್ಲಿ ಪಾಕ್ ಸೇನಾ ವಿಮಾನ ಪತನ, 17 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ರಾವಲ್ಪಿಂಡಿ,ಜು.30 (ಪಿಟಿಐ)- ಪುಟ್ಟ ಸೇನಾ ವಿಮಾನವೊಂದು ವಸತಿ ಪ್ರದೇಶವೊಂದರಲ್ಲಿ ಪತನಗೊಂಡು 17 ಮಂದಿ ಮೃತಪಟ್ಟ ದುರ್ಘಟನೆ ಇಂದು ಮುಂಜಾನೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಸಮೀಪದ ರಾವಲ್ಪಿಂಡಿಯಲ್ಲಿ ಸಂಭವಿಸಿದೆ.

ಮಿಲಿಟರಿ ಲಘು ವಿಮಾನವೊಂದು ವಸತಿ ಪ್ರದೇಶದಲ್ಲಿ ಪತನಗೊಂಡಿದ್ದು ಈವರೆಗೆ 15 ಮೃತದೇಹಗಳನ್ನು ಘಟನಾ ಸ್ಥಳದಿಂದ ಹೊರಕ್ಕೆ ತೆಗೆಯಲಾಗಿದೆ. ಸತ್ತವರಲ್ಲಿ 12 ನಾಗರಿಕರೂ ಮತ್ತು ಐವರು ವಿಮಾನ ಸಿಬ್ಬಂದಿ ಸೇರಿದ್ದಾರೆ. ಇತರ 10 ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ವಕ್ತಾರ ಫಾರೂಕ್ ಭಟ್ ತಿಳಿಸಿದ್ದಾರೆ.

ಪತನವಾದ ವಿಮಾನವು ಪಾಕಿಸ್ತಾನಿ ಸೇನೆಗೆ ಸೇರಿದೆ. ರಾವಲ್ಪಿಂಡಿಯ ಸೇನಾ ಕೇಂದ್ರ ಕಚೇರಿಯ ಗ್ಯಾರಿಸನ್ ನಗರದಲ್ಲಿನ ಪ್ರದೇಶದಲ್ಲಿ ಅವಘಡಕ್ಕೀಡಾಗಿದೆ.
ವಿಮಾನ ಪತನದಿಂದ ಕೆಲವು ಮನೆಗಳಿಗೆ ಹಾನಿಯಾಗಿದೆ. ದುರಂತ ಸ್ಥಳದಿಂದ ದಟ್ಟ ಹೊಗೆ ಮೇಲೇಳುತ್ತಿದ್ದ ದೃಶ್ಯಗಳು ಸುದ್ದಿ ವಾಹಿನಿಗಳಲ್ಲಿ ಬಿತ್ತರಗೊಂಡಿದೆ. ಅಕ್ಕಪಕ್ಕದ ಮನೆಗಳ ಮೇಲ್ಛಾವಣಿಗಳ ಮೇಲೆ ವಿಮಾನದ ತುಣುಕುಗಳು ಚೆಲ್ಲಾಪಿಲ್ಲಿಯಾಗಿ ಹರಡಿರುವುದು ಸಹ ಕಂಡುಬಂದಿದೆ.

ದುರಂತ ಸ್ಥಳಕ್ಕೆ ಹಿರಿಯ ಸೇನಾಧಿಕಾರಿಗಳು ಮತ್ತು ಪೊಲೀಸ್ ಮುಖ್ಯಸ್ಥರು ಭೇಟಿ ನೀಡಿ ಪರಿಶೀಲಿಸಿದರು. ಈ ಪ್ರದೇಶದಲ್ಲಿ ಜನರು ಜಮಾಯಿಸಿರುವುದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಶ್ರಮಿಸಬೇಕಾಯಿತು.
ಪಾಕಿಸ್ತಾನದಲ್ಲಿ ಆಗಾಗ ವಿಮಾನಗಳು ಮತ್ತು ಹೆಲಿಕಾಪ್ಟರ್‍ಗಳು ಪತನಗೊಂಡು ಸಾವು-ನೋವಿನ ಪ್ರಕರಣಗಳು ಸಾಮಾನ್ಯವಾಗಿವೆ.

Facebook Comments