ಅಚ್ಚರಿಯ ಸುದ್ದಿ : ಇದೆ ಮೊದಲ ಬಾರಿಗೆ ಭಾರತಕ್ಕೆ ಉಗ್ರರ ದಾಳಿಯ ಮುನ್ಸೂಚನೆ ನೀಡಿದ ಪಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ಲಾಮಾಬಾದ್/ನವದೆಹಲಿ, ಜೂ.16- ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನವು ಭಾರತದೊಂದಿಗೆ ಕೆಲವು ಗಹನವಾದ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡು ಅಚ್ಚರಿ ಮೂಡಿಸಿದೆ. ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ಸಾಧ್ಯತೆ ಬಗ್ಗೆ ಪಾಕಿಸ್ತಾನವು ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್‍ಎಸ್‍ಎ) ಅಜಿತ್ ದೋವಲ್ ಅವರಿಗೆ ಮಾಹಿತಿ ನೀಡಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ.

ಪಾಕಿಸ್ತಾನವೇ ಈ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆ ಎಲ್ಲ ಸೂಕ್ಷ್ಮ ಪ್ರದೇಶಗಳು, ಸೇನಾ ನೆಲೆಗಳು ಮತ್ತು ಗಡಿ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.  ಮುಂದಿನ ದಿನಗಳಲ್ಲಿ ದಕ್ಷಿಣ ಕಾಶ್ಮೀರದ ಹೆದ್ದಾರಿಯಲ್ಲಿ ಭಾರೀ ವಿಧ್ವಂಸಕ ಕೃತ್ಯ ಎಸಗಲು ಉಗ್ರರು ಸಜ್ಜಾಗಿದ್ದಾರೆ.

ಈ ಬಗ್ಗೆ ಎಚ್ಚರ ವಹಿಸುವಂತೆ ಪಾಕಿಸ್ತಾನವು ಎನ್‍ಎಸ್‍ಎ ಜೊತೆ ಗುಪ್ತಚರ ಮಾಹಿತಿಯನ್ನು ವಿನಿಮಯ ಮಾಡಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದಕರ ದಾಳಿ ಸಾಧ್ಯತೆ ಬಗ್ಗೆ ಭಾರತಕ್ಕೆ ಪಾಕಿಸ್ತಾನ ಇಂಥ ಮಾಹಿತಿ ನೀಡಿರುವುದು ಇದೇ ಮೊದಲು.  ಪಾಕಿಸ್ತಾನದ ನಿಷೇಧಿತ ಭಯೋತ್ಪಾದನೆ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ(ಎಲ್‍ಇಟಿ) ಮತ್ತು ಜೈಷ್-ಎ-ಮಹಮದ್(ಜೆಇಎಂ) ಭಾರತೀಯ ಯೋಧರ ಮೇಲೆ ಪ್ರತೀಕಾರಕ್ಕಾಗಿ ಸಜ್ಜಾಗಿದೆ.

ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ವೇಳೆ ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆಗಳು ಅಲ್-ಖೈದಾದ ಭಾರತ ¨ಣದ ನಾಯಕ ಜಾಕೀರ್ ಮುಸಾ ಸೇರಿದಂತೆ ಉಗ್ರರ ಕಮಾಂಡರ್‍ಗಳನ್ನು ಹೊಡೆದುರುಳಿಸಿದ್ದು, ಇದಕ್ಕೆ ಸೇಡು ತೀರಿಸಿಕೊಳ್ಳಲು ಉಗ್ರರು ಸಜ್ಜಾಗಿದ್ದಾರೆ ಎಂದು ಪಾಕ್ ಎಚ್ಚರಿಕೆ ನೀಡಿದೆ.

ಭಾರತೀಯ ಯೋಧರು ಇತ್ತೀಚೆಗೆ ಮುಸಾನನ್ನು ಕಾಶ್ಮೀರದ ಅವಂತಿಪೋರದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಹೊಡೆದುರುಳಿಸಿತ್ತು. ಉಗ್ರರ ದಾಳಿ ಎಚ್ಚರಿಕೆ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆ ಎಲ್ಲ ಸೂಕ್ಷ್ಮ ಪ್ರದೇಶಗಳು, ಸೇನಾ ನೆಲೆಗಳು ಮತ್ತು ಗಡಿ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಕಣ್ಗಾವಲು ಮತ್ತು ಪಹರೆಯನ್ನು ಹೆಚ್ಚಿಸಲಾಗಿದೆ.. ಭಯೋತ್ಪಾದಕರ ಸಂಭವನೀಯ ಆಕ್ರಮಣಗಳನ್ನು ಎದುರಿಸಲು ಹದ್ದಿನ ಕಣ್ಣಿನ ನಿಗಾ ವಹಿಸಿ ಸಜ್ಜಾಗಿರುವಂತೆ ಯೋಧರಿಗೆ ನಿರ್ದೇಶನ ನೀಡಲಾಗಿದೆ.

ಅಲ್ಲದೆ ವಾರ್ಷಿಕ ಅಮರನಾಥ ಯಾತ್ರೆಗಾಗಿ ಭದ್ರತಾ ವ್ಯವಸ್ಥೆಯನ್ನು ಸಹ ಪರಾಮರ್ಶಿಸಲಾಗುತ್ತಿದೆ.  ಕಾಶ್ಮೀರ ವಿವಾದ ಸೇರಿದಂತೆ ಬಾಕಿ ಇರುವ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಭಾರತದೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನ ಬಯಸಿರುವಾಗಲೇ ಇಸ್ಲಾಮಾಬಾದ್, ನವದೆಹಲಿಗೆ ಉಗ್ರರ ದಾಳಿ ಸಾಧ್ಯತೆ ಕುರಿತು ಮಹತ್ವದ ಮಾಹಿತಿ ನೀಡಿರುವುದು ಗಮನಾರ್ಹ ಸಂಗತಿಯಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin