“ನ್ಯಾಯ ಸಿಗಲೇ ಬೇಕು, ಗುರಿ ಮುಟ್ಟುವವರೆಗೂ ಹೋರಾಟ ನಿಲ್ಲಲ್ಲ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.28- ಪ್ರವರ್ಗ 2ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಸಮುದಾಯದವರು ನಡೆಸುತ್ತಿರುವ ಧರಣಿ ಸತ್ಯಾಗ್ರಹ 8ನೆ ದಿನಕ್ಕೆ ಕಾಲಿಟ್ಟಿದೆ. ಪಂಚಮಸಾಲಿ ಪೀಠಾಧ್ಯಕ್ಷರಾದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ನಗರದ ಫ್ರೀಡಂಪಾರ್ಕ್‍ನಲ್ಲಿ ಧರಣಿ ಸತ್ಯಾಗ್ರಹ ಮುಂದುವರಿದಿದ್ದು, 2ಎ ಮೀಸಲಾತಿ ನೀಡುವವರೆಗೂ ಹೋರಾಟವನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಇತ್ತ ಸರ್ಕಾರ ಮಾಡಿದ ಮನವೊಲಿಕೆ ಯತ್ನ ವಿಫಲವಾಗಿದೆ. ಮಾರ್ಚ್ 4ರ ವರೆಗೆ ಧರಣಿ ಸತ್ಯಾಗ್ರಹ ಮುಂದುವರಿಯಲಿದ್ದು, ಮಾರ್ಚ್ 4ರ ನಂತರ ಉಪವಾಸ ಸತ್ಯಾಗ್ರಹ, ಹೋರಾಟ ಮುಂದುವರಿಯಲಿದೆ ಎಂದು ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.

ಇಂದು ಶ್ರೀಗಳ ಜತೆ ಹುಬ್ಬಳ್ಳಿ, ಧಾರವಾಡ ಹಾಗೂ ಉತ್ತರ ಕರ್ನಾಟಕ ಭಾಗದ ಸಮುದಾಯದ ಹಲವು ಮುಖಂಡರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎಗೆ ಸೇರಿಸಬೇಕೆಂದು ಆಗ್ರಹಿಸಿ ಕೂಡಲ ಸಂಗಮದಿಂದ 708ಕಿ.ಮೀ. ಪಾದಯಾತ್ರೆ ಮೂಲಕ ಬೆಂಗಳೂರಿಗೆ ಆಗಮಿಸಿ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.

ಹಾಗಾಗಿ ನಮ್ಮ ಹೋರಾಟವನ್ನು ಮುಂದುವರಿಸಿದ್ದೇವೆ. ಸರ್ಕಾರಕ್ಕೆ ಮಾರ್ಚ್ 4ರ ಗಡುವು ನೀಡಿದ್ದು, ಅಷ್ಟರೊಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ನಾವು ನಮ್ಮ ಸಮುದಾಯಕ್ಕಾಗಿ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ. ಪ್ರತಿದಿನ ಒಂದೊಂದು ಜಿಲ್ಲೆಯವರು ನಮ್ಮೊಂದಿಗೆ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ನಮ್ಮ ಹೋರಾಟದ ದಿಕ್ಕು ತಪ್ಪಿಸುವ ಹಲವು ಪ್ರಯತ್ನಗಳು ನಡೆದವು. ಆದರೆ, ಸಮಾಜಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಾವೆಲ್ಲ ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಬೇಡಿಕೆ ಈಡೇರುವವರೆಗೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. 40 ದಿನಗಳಿಂದ ಹೋರಾಟ ಮಾಡುತ್ತಿದ್ದರೂ ನಮ್ಮವರೇ ಸರ್ಕಾರದಲ್ಲಿದ್ದರೂ ಯಾವುದೇ ರೀತಿಯ ಭರವಸೆ ನಮಗೆ ಸಿಗದೆ ಇರುವುದು ಬೇಸರ ತರಿಸಿದೆ.

ಸಮಾಜಕ್ಕೆ ನ್ಯಾಯ ಒದಗಿಸಿಕೊಡಲು ನಾವು ಕೊನೆ ಕ್ಷಣದವರೆಗೂ ಹೋರಾಟ ಮಾಡುತ್ತೇವೆ. ಮಾರ್ಚ್ 4ರಂದು ಮತ್ತೊಂದು ಸುತ್ತಿನ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುತ್ತೇವೆ ಎಂದು ಅವರು ತಿಳಿಸಿದರು.

Facebook Comments

Sri Raghav

Admin