5ನೇ ದಿನಕ್ಕೆ ಕಾಲಿಟ್ಟ ಪಂಚಮಸಾಲಿ ಹೋರಾಟ, ಸರ್ಕಾರಕ್ಕೆ ಮಾ.5ರ ಡೆಡ್ ಲೈನ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.25-ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ನಗರದ ಫ್ರೀಡಂಪಾರ್ಕ್‍ನಲ್ಲಿ ನಡೆಯುತ್ತಿರುವ ಹೋರಾಟ 5ನೇ ದಿನಕ್ಕೆ ಕಾಲಿಟ್ಟಿದ್ದು, ಮಾ.4ರೊಳಗೆ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ಮಾರ್ಚ್ 5ರಿಂದ ಅಮರಣಾಂತ ಉಪವಾಸ ಕೈಗೊಳ್ಳುವುದಾಗಿ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.

ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮದಿಂದ ಬೆಂಗಳೂರಿನವರೆಗೆ 708 ಕಿ.ಮೀ ಪಾದಯಾತ್ರೆ ನಡೆಸಿ ಪಂಚಮಸಾಲಿ ಬೃಹತ್ ಸಮಾವೇಶ ಮಾಡಲಾಯಿತು. ನಂತರ ಫ್ರೀಡಂಪಾರ್ಕ್‍ನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಈಗಾಗಲೇ ಚರ್ಚಿಸಲಾಗುತ್ತಿದ್ದು, ಮಾ.4ರೊಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಮಾ.5ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಹೇಳಿದರು.

ಈ ಬಗ್ಗೆ ಎಲ್ಲ ಪ್ರಮುಖರ ಜೊತೆ ಚರ್ಚೆ ನಡೆಸಿದ್ದೇವೆ. ಈ ಬಗ್ಗೆ ಸಚಿವರು ಶ್ರೀಗಳನ್ನುಭೇಟಿಯಾಗಿ, ಕಾಲಾವಕಾಶದ ಬಗ್ಗೆ ಚರ್ಚಿಸಿದ್ದಾರೆ. ಇಂದು ಸಂಜೆ ದುಂಡು ಮೇಜಿನ ಸಭೆ ಕರೆಯಲಾಗಿದ್ದು, ಅವರ ಸಲಹೆಗಳನ್ನು ಬಗ್ಗೆಯೂ ಚರ್ಚೆ ಮಾಡಲಿದ್ದೇವೆ. ನಮ್ಮ ಹಿರಿಯರಾದ ಯತ್ನಾಳ್ ಅವರು ದೆಹಲಿಯಿಂದ ಬಂದು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಯಾವುದೇ ಸಮಯಾವಕಾಶ ಕೊಡುವುದಿಲ್ಲ. 30 ವರ್ಷಗಳಿಂದಲೂ ಅವಕಾಶ ನೀಡಿದ್ದೇವೆ. ಹಂತ ಹಂತವಾಗಿ ಹೋರಾಟ ಮಾಡಿದರೂ ಮೀಸಲಾತಿ ನೀಡಿಲ್ಲ. ಅನಿವಾರ್ಯವಾಗಿ ನಮ್ಮ ಹೋರಾಟವನ್ನು ಮುಂದುವರೆಸಬೇಕಾಗಿದೆ ಎಂದು ಅವರು ಹೇಳಿದರು.

ಪಂಚಮಸಾಲಿ ಪೀಠಾಧ್ಯಕ್ಷರಾದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಬೇಡಿಕೆ ಈಡುವವರೆಗೂ ಹೋರಾಟ ಮುಂದುವರೆಸಲಾಗುವುದು ಎಂದರು. ನಮ್ಮ ಹೋರಾಟ ನಮ್ಮ ಸಮುದಾಯಕ್ಕೆ ಮೀಸಲಾತಿ ಪಡೆಯುವ ಏಕೈಕ ಉದ್ದೇಶವಾಗಿದೆ. ಹೋರಾಟ ಕವಲುದಾರಿಯಲ್ಲಿಲ್ಲ. ಹೆದ್ದಾರಿಯಲ್ಲೇ ಇದೆ. ಪ್ರತಿಭಟನೆಯನ್ನು ಮುಂದೂಡುವುದಾಗಲಿ, ಹಿಂಪಡೆಯುವುದಾಗಲಿ ಇಲ್ಲವೇ ಇಲ್ಲ ಎಂದು ಹೇಳಿದರು.

ಆರೋಪ-ಪ್ರತ್ಯಾರೋಪಗಳನ್ನು ಮಾಡುವುದು ಮನುಷ್ಯ ಸಹಜ ಗುಣ. ಎಲ್ಲರೂ ಒಂದಾಗಿ ಸಮುದಾಯಕ್ಕೆ ಮೀಸಲಾತಿ ಪಡೆಯುವ ಹೋರಾಟ ಮಾಡುತ್ತೇವೆ ಎಂದು ಹೇಳಿದರು. ತಮ್ಮನ್ನು ಓಲೈಸುವ ಪ್ರಯತ್ನ ಮಾಡಲಾಗುತ್ತಿದೆಯೇ ಮೀಸಲಾತಿ ಕೊಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು ಸರ್ಕಾರದಲ್ಲಿ ಭಾಗಿಯಾಗಿರುವ ನಮ್ಮ ಸಮುದಾಯದ ಶಾಸಕರು, ಸಚಿವರು ಮಾತುಕತೆ ನಡೆಸಿದ್ದಾರೆ. ಅವರು ನಮ್ಮ ಸಮುದಾಯಕ್ಕೆ ಮೀಸಲಾತಿ ಒದಗಿಸಲು ಸಮಯಾವಕಾಶ ಬೇಕಾಗುತ್ತದೆ ಎಂದು ಕೇಳಿದರೆ ಅದನ್ನು ಇಂದು ನಡೆಯುವ ದುಂಡುಮೇಜಿನ ಸಭೆಯಲ್ಲಿಟ್ಟು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಮೀಸಲಾತಿ ಪಡೆಯಬೇಕೆಂಬ ಉದ್ದೇಶದಿಂದ ಸಾಕಷ್ಟು ಹೋರಾಟ ಮಾಡಿದ್ದೇವೆ. ಯಾವುದೇ ರಾಜಕೀಯ ಬೆರೆತು ಏನೇ ಆರೋಪ- ಪ್ರತ್ಯಾರೋಪಗಳು ಬಂದರೂ ನಮ್ಮೆಲ್ಲರದೂ ಒಂದೇ ಉದ್ದೇಶ ನಮ್ಮ ಸಮುದಾಯಕ್ಕೆ ಮೀಸಲಾತಿ ದೊರಕಿಸಿಕೊಡಬೇಕೆಂಬುದಾಗಿದೆ ಎಂದರು.

ಎಲ್ಲರ ಮನಸ್ಸುಗಳನ್ನು ಒಂದು ಮಾಡಿ ಮತ್ತೆ ನಾವು ಹಕ್ಕೊತ್ತಾಯವನ್ನು ಮಂಡಿಸಿ ನಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳುವ ಪ್ರಯತ್ನದಲ್ಲಿ ಸಫಲರಾಗುತ್ತೇವೆ. ಅದಕ್ಕೆ ಎಲ್ಲರೂ ಕೈ ಜೋಡಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಶ್ರೀಗಳು ಹೇಳಿದರು.

Facebook Comments

Sri Raghav

Admin