ಮತ್ತಷ್ಟು ತೀವ್ರಗೊಂಡ ಪಂಚಮಸಾಲಿ ಸಮುದಾಯದ 2A ಮೀಸಲಾತಿ ಹೋರಾಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.22- ಲಿಂಗಾಯಿತ ಪಂಚಮಸಾಲಿ 2ಎ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಂಡಿದೆ.
ಮಾರ್ಚ್ 4ರೊಳಗೆ 2ಎ ಮೀಸಲಾತಿ ನೀಡದಿದ್ದರೆ ಅಮರಣಾಂತ ಉಪವಾಸ ಕೈಗೊಳ್ಳುವ ಎಚ್ಚರಿಕೆಯನ್ನು ಹೋರಾಟದ ನೇತೃತ್ವ ವಹಿಸಿರುವ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ನೀಡಿದ್ದಾರೆ.

ಇಂದಿನಿಂದ ಫ್ರೀಡಂಪಾರ್ಕ್‍ನಲ್ಲಿ ಸತ್ಯಾಗ್ರಹ ಆರಂಭಗೊಂಡಿದ್ದು, ಮಾ.4ರೊಳಗೆ 2ಎ ಮೀಸಲಾತಿ ದೊರೆಯದ್ದಿರೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ನಮ್ಮ ಸಮಾಜವನ್ನು ನಿರ್ಲಕ್ಷಿಸಿದರೆ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎದುರಾಗಲಿದೆ ಎಂಬ ಎಚ್ಚರಿಕೆಯನ್ನು ಸಹ ರವಾನಿಸಿದ್ದಾರೆ.

ಕೂಡಲಸಂಗಮದಿಂದ ಬೆಂಗಳೂರುವರೆಗೆ 38 ದಿನಗಳ ಕಾಲ 708 ಕಿ.ಮೀ ಪಾದಯಾತ್ರೆ ನಡೆಸಿ ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಬೃಹತ್ ಪಂಚಮಸಾಲಿ ಸಮಾವೇಶ ನಡೆಸಿ ಶಕ್ತಿಪ್ರದರ್ಶನದ ಮೂಲಕ 2ಎ ಮೀಸಲಾತಿಗಾಗಿ ಹಕ್ಕೋತ್ತಾಯ ಮಂಡಿಸಲಾಗಿತ್ತು.

ಸರ್ಕಾರದಿಂದ ಯಾವುದೇ ಸ್ಪಷ್ಟ ಭರವಸೆ ಸಿಗದ ಹಿನ್ನೆಲೆಯಲ್ಲಿ ಹೋರಾಟ ಮುಂದುವರೆದಿದ್ದು, ಫ್ರೀಡಂಪಾರ್ಕ್‍ನಲ್ಲಿ ಶ್ರೀಗಳ ನೇತೃತ್ವದಲ್ಲಿ ಇಂದಿನಿಂದ ಮಾರ್ಚ್ 4ರವರೆಗೆ ಹಮ್ಮಿಕೊಳ್ಳಲಾಗಿರುವ ಧರಣಿ ಸತ್ಯಾಗ್ರಹದಲ್ಲಿ ಪಕ್ಷಾತೀತವಾಗಿ ಎಲ್ಲ ರಾಜಕೀಯ ನಾಯಕರು, ವಿವಿಧ ಮಠಾೀಶರು ಪಾಲ್ಗೊಂಡಿದ್ದರು.

ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮೀಸಲಾತಿ ನೀಡದೆ ಹೋದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಂದಿನ ದಿನಗಳಲ್ಲಿ ಅಗ್ನಿಪರೀಕ್ಷೆ ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ನಿನ್ನೆ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಮಾಡುವ ಮೂಲಕ ನಾವು ಸಮಾಜದ ಒಗ್ಗಟ್ಟು ತೋರಿಸಿದ್ದೇವೆ. ಹಲವು ಹೋರಾಟಗಳ ಬಳಿಕ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿದ್ದಾರೆ.

2ಎ ಮೀಸಲಾತಿ ನೀಡಲು ಸಿಎಂ ಸಮಯಾವಕಾಶ ಕೇಳಿದ್ದರು. ತಾಂತ್ರಿಕ ಕಾರಣದ ಹಿನ್ನೆಲೆಯಲ್ಲಿ ನಾವು ಸುಮ್ಮನಿದ್ದೆವು. ಆದರೆ ಮೀಸಲಾತಿ ನೀಡಲು ನಿರ್ಲಕ್ಷಿಸಿದರು. ಹೀಗಾಗಿ ಸಮುದಾಯದ ಜನರು ಧರಣಿ ಸತ್ಯಾಗ್ರಹ ಹೋರಾಟ ಮಾಡೋಣ ಎಂದು ಹೇಳಿದರು. ಅದರಂತೆ ನಾವು ಸತ್ಯಾಗ್ರಹಕ್ಕೆ ಇಳಿದಿದ್ದೇವೆ ಎಂದರು.

ಸಮಾವೇಶದ ನಂತರ ನಡೆದ ಪಾದಯಾತ್ರೆಯಿಂದ ಇಡೀ ಬೆಂಗಳೂರು ಸ್ತಬ್ದಗೊಂಡಿತ್ತು. ನಾವು ಒಂದು ಕರೆ ಕೊಟ್ಟಿದ್ದರೆ ಅಲ್ಲೋಲ ಕಲ್ಲೋಲವಾಗುತ್ತಿತ್ತು. ನಾವು ವಿಧಾನಸೌಧ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಕೈಬಿಟ್ಟೆವು. ಶಾಂತಿಯುತವಾಗಿ ನಡೆಸುತ್ತಿದ್ದ ನಮ್ಮ ಪಾದಯಾತ್ರೆಗೆ ಬ್ಯಾರಿಕೇಡ್‍ಗಳನ್ನು ಹಾಕಿ ತಡೆಯುವ ಮೂಲಕ ಹತ್ತಿಕ್ಕುವ ಕೆಲಸವನ್ನು ಮಾಡಿದರು ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ಇದೇ ರೀತಿ ಸಮಾಜವನ್ನು ನಿರ್ಲಕ್ಷಿಸುವುದು ಮುಂದುವರೆಸುತ್ತಿದ್ದರೆ ಪರಿಸ್ಥಿತಿ ಬದಲಾಗುವುದರಲ್ಲಿ ಅನುಮಾನವಿಲ್ಲ. ಬೇರೆ ಯಾರೇ ಮುಖ್ಯಮಂತ್ರಿಯಾಗಿದ್ದರೂ ನಾವು ಹೋರಾಟ ಮಾಡುವ ಅವಶ್ಯಕತೆ ಇರಲಿಲ್ಲ. ನಮ್ಮವರೇ ಮುಖ್ಯಮಂತ್ರಿಗಳಾಗಿದ್ದಾರೆ. ಅವರಲ್ಲದೆ ಯಾರು ನಮಗೆ ಮೀಸಲಾತಿ ನೀಡಬೇಕು. ಯಡಿಯೂರಪ್ಪನವರು ಕೊನೆಯ ಅವ ಎಂದು ರಾಜಕೀಯ ವಿಶ್ಲೇಷಣೆ ಮಾಡಲಾಗುತ್ತಿದೆ. ಈ ಅವಯಲ್ಲೇ ನಮಗೆ ಮೀಸಲಾತಿ ಸಿಗಬೇಕು.

ಬಾಯಿಮಾತಿನ ಭರವಸೆ ಬೇಡ. ಲಿಖಿತರೂಪದಲ್ಲಿ ನಮಗೆ ಸ್ಪಷ್ಟ ಭರವಸೆ ಸಿಗಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಸರ್ಕಾರದ ವಿಳಂಬ ನೀತಿಯಿಂದ ಸಮಾಜದವರು ಆಕ್ರೋಶಗೊಂಡಿದ್ದಾರೆ. ನಮ್ಮ ಹೋರಾಟ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಮನವಿ ಕೊಡುವ ಪರಿಸ್ಥಿತಿ ಈಗ ಇಲ್ಲ. ಅನಗತ್ಯವಾಗಿ ವಿಳಂಬ ನೀತಿ ಅನುಸರಿಸಿ ಚೆಲ್ಲಾಟವಾಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ.

ಪಂಚಮಸಾಲಿಗಳಿಗೆ ಮೀಸಲಾತಿ ನೀಡಿದರೆ ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವಕ್ಕೆ ಎಲ್ಲಿ ಕುತ್ತು ಬರುತ್ತದೋ ಎಂಬ ಆತಂಕ ಎದುರಾಗಿದೆ. ಹಾಗಾಗಿ ವಿಳಂಬ ಮಾಡುತ್ತಿದ್ದಾರೆ. ಹಿಂದುಳಿದ ವರ್ಗದ ಆಯೋಗಕ್ಕೆ ಪತ್ರ ಬರೆಯಬೇಕಾಗಿಲ್ಲ. ಕುಲಶಾಸ್ತ್ರ ಅಧ್ಯಯನದ ಅಗತ್ಯವೂ ಇಲ್ಲ. ಮೀಸಲಾತಿ ನೀಡಬೇಕು. ಇದು ಸಮಾಜದ ಆಗ್ರಹವಾಗಿದೆ ಎಂದು ಹೇಳಿದರು.

Facebook Comments

Sri Raghav

Admin